ಜೀವ ರಕ್ಷಕ ‘ಸೇವಿಯರ್’ ಮೊಬೈಲ್ ಆ್ಯಪ್!

Update: 2017-09-27 10:40 GMT

ಮಂಗಳೂರು, ಸೆ. 27: ತುರ್ತು ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಗೆ ಸ್ಪಂದಿಸುವ ಜೀವ ರಕ್ಷಕ ‘ಸೇವಿಯರ್’ ಮೊಬೈಲ್ ಆ್ಯಪೊಂದನ್ನು ತಯಾರಿಸಲಾಗಿದ್ದು, ಈ ಆ್ಯಪ್‌ಗೆ ಸಿಂಗಲ್ ಕ್ಲಿಕ್ ಮಾಡುವ ಮೂಲಕ ಆ್ಯಂಬುಲೆನ್ಸ್ ಸೇವೆ ಪಡೆಯಲು ಸಾಧ್ಯವಾಗಲಿದೆ ಎಂದು ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್‌ನ ದೀಕ್ಷಿತ್ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಆ್ಯಪ್‌ನ ವಿಶೇಷತೆ ಹಾಗೂ ಕಾರ್ಯನಿರ್ವಹಣೆ ಕುರಿತು ಅವರು ಮಾಹಿತಿ ನೀಡಿದರು. ತುರ್ತು ಸಂದರ್ಭಗಳಲ್ಲಿ ಅಪಾಯದಲ್ಲಿರುವವ ಪ್ರಾಣ ರಕ್ಷಣೆಗೆ ಜನಸಾಮಾನ್ಯರೇ ಮುಂದಾಗುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು, ಸ್ವಯಂ ಸೇವಕರಾಗಿ ತರಬೇತಿ ನೀಡುವುದರ ಜತೆಗೆ, ಅತ್ಯಂತ ಕಡಿಮೆ ಸಮಯದಲ್ಲಿ ತುರ್ತು ಸ್ಥಳಕ್ಕೆ ಆ್ಯಂಬುಲೆನ್ಸ್ ತಲುಪುವುದನ್ನು ಈ ಆ್ಯಪ್ ಖಾತರಿಪಡಿಸಲಿದೆ ಎಂದರು.

ಈ ಆ್ಯಪ್ ಮೂಲಕ ತುರ್ತು ಚಿಕಿತ್ಸೆ ಕುರಿತಂತೆ ಆಂದೋಲವನ್ನೂ ನಡೆಸಲಾಗುತ್ತಿದೆ ಎಂದು ಹೇಳಿದ ಅವರು, ಗೂಗಲ್ ಪ್ಲೇ ಸ್ಟೋರ್ ಮೂಲಕ ಉಚಿತವಾಗಿ ಈ ಆ್ಯಪನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಡೌನ್‌ಲೋಡ್ ಮಾಡಿಕೊಂಡವರು ತಮಗೆ ಅಥವಾ ಇತರ ಯಾರಿಗಾದರೂ ತುರ್ತು ಚಿಕಿತ್ಸೆಯ ಅಗತ್ಯವಿದ್ದಲ್ಲಿ ಈ ಆ್ಯಪ್‌ನಲ್ಲಿನ ‘ಎಮರ್ಜೆನ್ಸಿ’ಗೆ ಕ್ಲಿಕ್ ಮಾಡುವ ಮೂಲಕ ಸೇವೆಯನ್ನು ಪಡೆಯಬಹುದು ಎಂದು ಹೇಳಿದರು. 

ಹೃದ್ರೋಗ ತಜ್ಞ ಡಾ.ಮನೀಶ್ ರೈ ಮಾತನಾಡಿ, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಬಹುತೇಕರಾಗಿ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಇದರಿಂದಾಗಿಯೇ ಆಸ್ಪತ್ರೆಗೆ ತಲುಪುವ ವೇಳೆ ಸೂಕ್ತ ಪ್ರಥಮ ಚಿಕಿತ್ಸೆಯ ಅಲಭ್ಯತೆಯಿಂದಾಗಿ ಸಾಕಷ್ಟು ಸಾವು ಪ್ರಕರಣಗಳು ಸಂಭವಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಈ ಸ್ವಯಂಸೇವಕರು ಜೀವರಕ್ಷಕರಾಗಿ ಕಾರ್ಯ ನಿರ್ವಹಿಸಬಹುದು ಎಂದು ಅವರು ಹೇಳಿದರು.

ಮಾತ್ರವಲ್ಲದೆ ಈ ಆ್ಯಪ್‌ನಿಂದ ಅತ್ಯಲ್ಪ ಅವಧಿಯಲ್ಲಿ ಆ್ಯಂಬುಲೆನ್ಸ್ ತುರ್ತು ಸ್ಥಳಕ್ಕೆ ಧಾವಿಸಲು ನೆರವಾಗಲಿದೆ. ಇದಕ್ಕಾಗಿ ಈಗಾಗಲೇ ನಗರದ ಎಂಟು ಆಸ್ಪತ್ರೆಗಳ ಜತೆ ಸಂಸ್ಥೆಯು ಮಾತುಕತೆ ನಡೆಸಿ, ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್ ಸೇವೆಯನ್ನು ನೀಡಲು ಒಪ್ಪಿಗೆ ಸೂಚಿಸಿವೆ. ಮಾತ್ರವಲ್ಲದೆ, ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಆಸಕ್ತರಿಗೆ ನಗರದ ಯಾವುದಾದರೂ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಒದಗಿಸುವ ಬಗ್ಗೆ ಒಂದು ದಿನದ ತರಬೇತಿ ಒದಗಿಸಿ (ವೈದ್ಯಕೀಯವಾಗಿ ಪ್ರಮಾಣಪತ್ರವನ್ನು ಹೊಂದಿದ) ಅವರನ್ನು ಸ್ವಯಂ ಸೇವಕರನ್ನಾಗಿಸಲಾಗುವುದು. ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಂದ ತರಬೇತಿ ಪಡೆದ ಸ್ವಯಂ ಸೇವಕರು ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಯನ್ನು ಒದಗಿಸಿ ಅಪಾಯದಲ್ಲಿರುವವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಬಹುದು ಎಂದು ಹೇಳಿದರು.

ತುರ್ತು ಚಿಕಿತ್ಸಾ ತಜ್ಞ ಡಾ.ಜೀತು ರಾಧಾಕೃಷ್ಣನ್ ಮಾತನಾಡಿ ಆ್ಯಪ್ ಮೂಲಕ ಸ್ವಯಂ ಸೇವಕರಾದವರಿಗೆ ಆಸ್ಪತ್ರೆಗಳಲ್ಲಿ ನೀಡಲಾಗುವ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ಅಪಘಾತ, ಹೃದಾಯಾಘಾತ ಮೊದಲಾದ ತುರ್ತು ಸಂದರ್ಭಗಳಲ್ಲಿ ರೋಗಿಯ ಪ್ರಥಮ 15 ನಿಮಿಷಗಳು ಅತೀ ಮುಖ್ಯವಾಗಿದ್ದು, ಈ ಸಂದರ್ಭದಲ್ಲಿ ಸೂಕ್ತ ಪ್ರಥಮ ಚಿಕಿತ್ಸೆ ಒದಗಿಸಿದರೆ ಪ್ರಾಣಾಪಾಯದಿಂದ ಕಾಪಾಡಬಹುದು. ಪ್ರತೀ ವರ್ಷ 140,000 ಮಂದಿ ಪ್ರಥಮ ಚಿಕಿತ್ಸೆ ಅಲಭ್ಯತೆಯಿಂದಾಗಿ ಪ್ರಾಣ ಕಳೆದುಕೊಂಡರೆ, 5 ಮಿಲಿಯ ಮಂದಿ ರಕ್ತಸ್ರಾವದಿಂದಾಗಿ ಕೊನೆಯುಸಿರೆಳೆಯುತ್ತಾರೆ. ಈ ನಿಟ್ಟಿನಲ್ಲಿ ಈ ಆ್ಯಪ್ ಜೀವ ರಕ್ಷಕವಾಗಿ ಕಾರ್ಯಾಚರಿಸಲಿದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News