ದ.ಕ.ಜಿಲ್ಲಾ ಹಾಲು ಒಕ್ಕೂಟಕ್ಕೆ ‘ರಾಷ್ಟ್ರೀಯ ಡೇರಿ ಎಕ್ಸಲೆನ್ಸ್ ಪುರಸ್ಕಾರ’ ಪ್ರದಾನ

Update: 2017-09-28 11:37 GMT

ಮಂಗಳೂರು, ಸೆ.28: ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯು ತನ್ನ ಸಂಸ್ಥಾಪನಾ ದಿನದ ಅಂಗವಾಗಿ ಸ್ಥಾಪಿಸಿರುವ ‘ರಾಷ್ಟ್ರೀಯ ಡೇರಿ ಎಕ್ಸಲೆನ್ಸ್ ಪುರಸ್ಕಾರ’ಕ್ಕೆ ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಆಯ್ಕೆಯಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದ್ದಾರೆ.

ಗುರುವಾರ ಕುಲಶೇಖರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರಮಟ್ಟದಲ್ಲಿ 1 ಲಕ್ಷದಿಂದ 5 ಲಕ್ಷದವರೆಗೆ ಪ್ರತೀ ದಿನ ಹಾಲಿನ ನಿರ್ವಹಣೆ ಮಾಡಿದ ದೇಶದ ಸಹಕಾರಿ ಡೇರಿಗಳ ಪೈಕಿ ದ.ಕ.ಜಿಲ್ಲಾ ಹಾಲು ಒಕ್ಕೂಟವು 2ನೆ ಸ್ಥಾನ ಪಡೆದಿದೆ. ಸೆ.26ರಂದು ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್‌ಬಾಯಿ ರೂಪಾನಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಪ್ರಶಸ್ತಿಯು 2 ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿದೆ. ಈ ಸಂದರ್ಭ ಕೇಂದ್ರ ಸಚಿವ ಪುರುಷೋತ್ತಮ ರೂಪಾಲ, ಗುಜರಾತ್ ಸಚಿವರಾದ ಬಾಬುಭಾಯಿ ಬೋಕಾರಿಯಾ, ರೋಹಿತ್‌ಭಾಯಿ ಪಟೇಲ್, ಸಂಸದರಾದ ಲಾಲ್ ಸಿನ್ಹ ವಡೋಡಿಯಾ, ದಿಲೀಪ್ ಬಾಯಿ ಪಟೇಲ್ ಉಪಸ್ಥಿತರಿದ್ದರು.

ಈ ಸಂದರ್ಭ ದ.ಕ. ಹಾಲು ಒಕ್ಕೂಟದ ಜಪ್ತಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯೆ ಶಾರದಾ ಮಡಿವಾಳ್ತಿಯವರನ್ನು ಸಂಘಕ್ಕೆ ಅತೀ ಹೆಚ್ಚು ಗುಣಮಟ್ಟದ ಹಾಲು ಪೂರೈಸಿದ ಮಹಿಳಾ ಸದಸ್ಯೆ ಎಂದು ಸನ್ಮಾನಿಸಲಾಯಿತು. ಅದಲ್ಲದೆ ಬೆಂಗಳೂರು ಹಾಲು ಒಕ್ಕೂಟಕ್ಕೆ 5 ಲಕ್ಷಕ್ಕಿಂತ ಹೆಚ್ಚಿನ ಹಾಲಿನ ನಿರ್ವಹಣೆ ವಿಭಾಗದಲ್ಲಿ ಮತ್ತು ಶಿವಮೊಗ್ಗ ಹಾಲು ಒಕ್ಕೂಟಕ್ಕೆ 1ರಿಂದ 5 ಲಕ್ಷದೊಳಗೆ ಹಾಲಿನ ನಿರ್ವಹಣೆ ವಿಭಾಗದಲ್ಲಿ ದಕ್ಷಿಣ ವಲಯ ಮಟ್ಟದಲ್ಲಿ ಉತ್ತಮ ಡೇರಿ ಎಂದು ಗುರುತಿಸಿ ಗೌರವಿಸಲಾಯಿತು ಎಂದರು.

ರಾಜ್ಯದ 14 ಒಕ್ಕೂಟಗಳ ಪೈಕಿ ದ.ಕ.ಒಕ್ಕೂಟಕ್ಕೆ ಮಂಡಳಿಯು ನಿಗದಿಪಡಿಸಿದ ವಿವಿಧ ಮಾನದಂಡದಂತೆ ಪ್ರತೀ ತಿಂಗಳು ನೀಡುವ ರ್ಯಾಂಕಿಂಗ್‌ನಲ್ಲಿ ಪ್ರಥಮ ಸ್ಥಾನವನ್ನು 2014ರಿಂದ ಕಾಯ್ದುಕೊಂಡು ಬಂದಿದೆ ಎಂದ ರವಿರಾಜ ಹೆಗ್ಡೆ, ಮಂಡಳಿಯು ದೇಶೀಯ ಹಾಲಿನ ಬ್ರಾಂಡ್‌ಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಉದ್ದೇಶದಿಂದ ‘ಮಿಲ್ಕ್ ಮಾರ್ಕ್’ ಎಂಬ ಪ್ರಮಾಣ ಪತ್ರವನ್ನು ನೀಡಲು ಆರಂಭಿಸಿದ್ದು, ದ.ಕ.ಜಿಲ್ಲಾ ಒಕ್ಕೂಟಕ್ಕೂ ಈ ಪ್ರಮಾಣ ಪತ್ರ ಲಭಿಸಿದೆ ಎಂದರು.

ಈ ಪ್ರಮಾಣ ಪತ್ರದಂತೆ ವಿಶೇಷ ‘ಲೋಗೋ’ವನ್ನು ಮಂಡಳಿಯು ಬಿಡುಗಡೆ ಮಾಡಿದ್ದು, ಅದನ್ನು ಹಾಲು ಒಕ್ಕೂಟವು ಶೀಘ್ರ ಅಳವಡಿಸಿಕೊಳ್ಳಲಿದೆ ಎಂದು ರವಿರಾಜ ಹೆಗ್ಡೆ ತಿಳಿಸಿದರು.

 ಈ ಸಂದರ್ಭ ವ್ಯವಸ್ಥಾಪಕ ನಿರ್ದೇಶಕರಾದ ಸೀತಾರಾಮ ರೈ ಸವಣೂರು, ಸುರೇಶ್ ಶೆಟ್ಟಿ, ಸುಚರಿತ ಶೆಟ್ಟಿ, ಜಾನಕಿ ಹೆಗ್ಡೆ, ಅಶೋಕ್ ಕುಮಾರ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಆಡಳಿತ ನಿರ್ದೇಶಕ ಡಾ. ಸತ್ಯನಾರಾಯಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News