ವಿಟ್ಲ: ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಮೇಶ್ ಬಾಯಾರ್ ರಿಗೆ ಎಸ್ಐಒ ವತಿಯಿಂದ ಸನ್ಮಾನ

Update: 2017-09-28 11:53 GMT

ಬಂಟ್ವಾಳ, ಸೆ. 28: ತಾಲೂಕಿನ ವಿಟ್ಲ ಸಮೀಪದ ಕೇಪು ಕಲ್ಲಂಗಳ ಸರಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಉತ್ತಮ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ `ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ'ಗೆ ಭಾಜನರಾದ ರಮೇಶ್ ಎಂ ಬಾಯಾರ್ ರವರಿಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಒ) ಬಂಟ್ವಾಳ ತಾಲೂಕು ವತಿಯಿಂದ ಸನ್ಮಾನ ಮಾಡಲಾಯಿತು.

ಎಸ್ ಐ ಒ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ರಫೀಕ್ ಬೀದರ್ ರವರ ನೇತೃತ್ವದ ಎಸ್ ಐ ಒ ನಿಯೋಗವು, ವಿಟ್ಲ ಕಲ್ಲಂಗಳದಲ್ಲಿರುವ ಅವರ ಶಿಕ್ಷಕ ರಮೇಶ್ ಬಾಯಾರ್ ರವರ ಮನೆಗೆ ತೆರಳಿ ಅಭಿನಂದಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಐ ಒ ರಾಜ್ಯಾಧ್ಷಕ್ಷ ರಫೀಕ್ ಬೀದರ್, ಸರಕಾರಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅಭಿವೃದ್ಧಿಗೆ ನಿಸ್ವಾರ್ಥ ಸೇವೆ ಸಲ್ಲಿಸಿರುವುದರಿಂದ ಅರ್ಹ ಪ್ರಶಸ್ತಿಗೆ ಆಯ್ಕೆಯಾಗಿರುವುದು ತುಂಬಾ ಸಂತಸದ ವಿಷಯ. ಇಂಗ್ಲಿಷ್ ಶಿಕ್ಷಣ ಸಂಸ್ಥೆಗಳ ಭರಾಟೆಯ ಮಧ್ಯೆ ಸರಕಾರಿ ಶಿಕ್ಷಣ ಸಂಸ್ಥೆಯನ್ನು ಕೀಳಾಗಿ ಕಾಣುವ ಮನೋಭಾವವನ್ನು ನಿರ್ಮೂಲನೆ ಮಾಡಲು ಇಂತಹ ಪ್ರಶಸ್ತಿಗಳು ಉತ್ತಮ ಬೆಳವಣಿಗೆ. ಈ ನಿಟ್ಟಿನಲ್ಲಿ ತಾವು ಸೇವೆ ಸಲ್ಲಿಸುತ್ತಿರುವ ಶಿಕ್ಷಣ ಸಂಸ್ಥೆಯು ರಾಷ್ಟ್ರಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ರಮೇಶ್ ಬಾಯಾರ್,  ಪ್ರಶಸ್ತಿಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ನನ್ನ ಮೇಲೆ ಪ್ರೀತಿ ಇಟ್ಟು, ಮನೆ ತನಕ ಬಂದು ಸನ್ಮಾನಿಸಿದ್ದು ತುಂಬಾ ಖುಷಿಯ ಸಂಗತಿ. ತಮ್ಮ ಪ್ರೀತಿಗೆ ಋಣಿಯಾಗಿದ್ದೇನೆ. ಎಸ್ ಐ ಒ ನ ಕೆಲಸಗಳು ಸಮಾಜಕ್ಕೆ ಇನ್ನಷ್ಟು ಉತ್ತಮವಾಗಿರಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್ ಐ ಪಾಣೆಮಂಗಳೂರು ಅಧ್ಯಕ್ಷ ತಮೀಝ್ ಅಲಿ ಕಾರಾಜೆ, ಅಫ್ರೀನ್ ಪರ್ಲಿಯಾ, ಮುಬಾರಿಶ್ ಚೆಂಡಾಡಿ, ಫಾರೂಕ್ ನೀರ್ಕಜೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

ಎಸ್ ಐ ಒ ಜಿಲ್ಲಾ ಕಾರ್ಯದರ್ಶಿ ಇರ್ಷಾದ್ ವೇಣೂರ್ ಸ್ವಾಗತಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News