ಸುಳ್ಳು ಮಾಹಿತಿ ನೀಡಿ ನಿವೇಶನ ಪಡೆದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಸಚಿವ ಪ್ರಮೋದ್

Update: 2017-09-28 15:13 GMT

ಉಡುಪಿ, ಸೆ.28: ಉಡುಪಿ ನಗರಸಭೆ ವ್ಯಾಪ್ತಿಯ ನಿವೇಶನ ಪಟ್ಟಿಯನ್ನು ಎರಡನೆ ಬಾರಿಗೆ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ಇದರಲ್ಲಿ ಬೋಗಸ್ ಹೆಸರುಗಳಿದ್ದರೆ ತೆಗೆದುಹಾಕಬೇಕು. ಅದರ ನಂತರವೂ ಸುಳ್ಳು ಮಾಹಿತಿ ನೀಡಿ ನಿವೇಶನ ಪಡೆದುಕೊಂಡವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು. ಇದಕ್ಕೆ ಗ್ರಾಮ ಕರಣಿಕರು ಕೂಡ ಜವಾಬ್ದಾರರಾಗುತ್ತಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿವೇಶನ, ವಸತಿ, 94ಸಿ, 94ಸಿಸಿ, ಬಿಪಿಎಲ್, ದೀನ್‌ದಯಾಳ್ ವಿದ್ಯುತ್ತೀಕರಣ ಯೋಜನೆಗಳ ಪ್ರಗತಿ ಪರಿ ಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ನಗರಸಭೆ ವ್ಯಾಪ್ತಿಯಲ್ಲಿ 670 ಕುಟುಂಬಗಳು ಎ ಪಟ್ಟಿಯಲ್ಲಿದ್ದು, ಈಗಾಗಲೇ ಹೆರ್ಗ ಗ್ರಾಮದಲ್ಲಿ 9.34 ಎಕರೆ ಹಾಗೂ ಶಿವಳ್ಳಿ ಗ್ರಾಮದಲ್ಲಿ 1.66 ಎಕರೆ ಜಾಗವನ್ನು ಗುರುತಿಸಲಾಗಿದೆ. ಇದೀಗ ಈ ಜಾಗವನ್ನು ಸಮತಟ್ಟು ಮಾಡುವ ಕಾರ್ಯ ಮಾಡಲಾಗುತ್ತಿದೆ. ಒಟ್ಟು ಈ 11 ಎಕರೆ ಜಾಗದಲ್ಲಿ 465 ಮಂದಿಗೆ ನಿವೇಶನವನ್ನು ವಿತರಿಸಲಾಗುತ್ತದೆ. ಉಳಿದ 205 ಕುಟುಂಬಗಳಿಗೆ ಇನ್ನು ಐು ಎಕರೆ ಜಾಗ ಬೇಕಾಗಿದೆ ಎಂದರು.

ನಗರಸಭೆ ವ್ಯಾಪ್ತಿಯಲ್ಲಿ ಈಗ 450 ನಿವೇಶನಗಳು ಸಿದ್ಧವಾಗಿದ್ದು, ಎ ಪಟ್ಟಿ ಯಲ್ಲಿರುವ ಅರ್ಹ ಫಲಾನುಭವಿಗಳನ್ನು ಇನ್ನು 20 ದಿನಗಳ ಒಳಗೆ ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಿ ಹಕ್ಕುಪತ್ರ ವಿತರಿಸುವ ಕಾರ್ಯ ಮಾಡ ಲಾಗುತ್ತದೆ ಎಂದು ಅವರು ತಿಳಿಸಿದರು.

ಗ್ರಾಮೀಣ ಪ್ರದೇಶಗಳಾದ ನೀಲಾವರ, ಕಳತ್ತೂರು ಸಂತೆಕಟ್ಟೆ, ನಂಚಾರು, ಚೇರ್ಕಾಡಿ, ನಾಲ್ಕೂರು ಗ್ರಾಮಗಳಲ್ಲಿದಲ್ಲಿ 100 ನಿವೇಶನಗಳನ್ನು ವಿತರಿಸುವ ಕಾರ್ಯವನ್ನು ಆರಂಭಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಸುಮಾರು 52 ಎಕರೆ ಜಾಗ ಬೇಕಾಗಿದೆ. ಉಪ್ಪೂರು ಗ್ರಾಮದ ಸುಮಾರು 20 ಎಕರೆ ಜಾಗದ ಕುರಿತಂತೆ ಅರಣ್ಯ ಇಲಾಖೆಯ ತಕರಾರನ್ನು ಇತ್ಯರ್ಥ ಪಡಿಸಲು ಜಿಲ್ಲಾಧಿಕಾರಿ, ಅರಣ್ಯ ಹಾಗೂ ಕಂದಾಯ ಅಧಿಕಾರಿಗಳ ಸಭೆಯನ್ನು ಕರೆಯ ಲಾಗುವುದು ಎಂದು ಅವರು ಹೇಳಿದರು.

750 ಮನೆಗಳಿಗೆ ವಿದ್ಯುತ್: ದೀನ್‌ದಯಾಳ್ ಗ್ರಾಮೀಣ ವಿದ್ಯುತ್ತೀ ಕರಣ ಯೋಜನೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 750 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 450 ಅರ್ಜಿಗಳಿಗೆ ಮಂಜೂ ರಾತಿ ದೊರೆತಿದೆ. ಉಳಿದ 300 ಅರ್ಜಿಗಳಿಗೆ ಹೆಚ್ಚುವರಿ ಮಂಜೂರಾತಿಗಾಗಿ ಸರಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಅಕ್ಟೋಬರ್ ತಿಂಗಳ ಎರಡನೆ ವಾರದಲ್ಲಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ವಿದ್ಯುತ್ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗು ವುದು ಎಂದು ಸಚಿವರು ತಿಳಿಸಿದರು.

94ಸಿ ಹಾಗೂ 94ಸಿಸಿಯಲ್ಲಿ ಉಡುಪಿ ಹೋಬಳಿ ಮಟ್ಟದ ಪ್ರಥಮ ಹಂತದ ಹಕ್ಕುಪತ್ರ ವಿತರಣೆಯನ್ನು ಅ.16ರಂದು ಮತ್ತು ಬ್ರಹ್ಮಾವರ ಹೋಬಳಿ ಮಟ್ಟದ ಎರಡನೆ ಹಂತದ ಹಕ್ಕುಪತ್ರ ವಿತರಣೆಯನ್ನು ನ.4ರಂದು ನಡೆಸಲು ತೀರ್ಮಾನಿ ಸಿದ್ದು, ಆ ದಿನಾಂಕದ ಒಳಗೆ ಆಯಾ ಗ್ರಾಪಂಗಳ ಗ್ರಾಮ ಕರಣಿಕರು ಹಕ್ಕುಪತ್ರ ತಯಾರಿಸುವ ಕೆಲಸ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದರು.

ಈ ಹಕ್ಕುಪತ್ರ ಮಂಜೂರಾಗುವ ನಗರಸಭೆ ಹಾಗೂ ಗ್ರಾಮೀಣ ಪ್ರದೇಶದ ಎಲ್ಲ ಕುಟುಂಬಗಳಿಗೆ ವಿವಿಧ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡಲು ನಾವು ಬದ್ಧರಾಗಿದ್ದೇವೆ. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 103 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬದವರಿಗೆ ಹೊಸ ಮನೆ ಕಟ್ಟಲು ತಲಾ 3.30ಲಕ್ಷ ರೂ. ಮಂಜೂರಾತಿಗೆ ಆದೇಶ ನೀಡಲಾಗಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಉಡುಪಿ ಜಿಪಂ ಸದಸ್ಯ ಜನಾರ್ದನ ತೋನ್ಸೆ, ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್, ಪೌರಾಯುಕ್ತ ಡಿ. ಮಂಜುನಾಥಯ್ಯ ಉಪಸ್ಥಿತರಿದ್ದರು.

1203 ಕುಟುಂಬಗಳಿಗೆ ಬಿಪಿಎಲ್ ಕಾರ್ಡ್
ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ 400 ಬಿಪಿಎಲ್ ಕಾರ್ಡ್‌ಗಳನ್ನು ಅಂಚೆ ಮೂಲಕ ಕಳುಹಿಸಲಾಗಿದೆ. ಉಡುಪಿ ಹೋಬಳಿಯಲ್ಲಿ 748 ಮತ್ತು ಬ್ರಹ್ಮಾವರ ಹೋಬಳಿಯಲ್ಲಿ 455 ಅರ್ಜಿಗಳು ತಹಶೀಲ್ದಾರ್ ಅವರ ಲಾಗಿನ್‌ನಲ್ಲಿದ್ದು, ಅವುಗಳನ್ನು ವಿಲೇವಾರಿ ಮಾಡಿ 20ದಿನಗಳ ಒಳಗೆ ಬಿಪಿಎಲ್ ಕಾಡ್ ತಯಾರಿಸಿ, ಅಂಚೆ ಮೂಲಕ ಕಳುಹಿಸುವಂತೆ ಸೂಚನೆ ನೀಡಲಾಗಿದೆ. ಇನ್ನು 1000 ಅರ್ಜಿಗಳು ಬಾಕಿ ಇದ್ದು, ಅವುಗಳನ್ನು ಮೂರನೆ ಹಂತದಲ್ಲಿ ವಿತರಿಸುವ ಕೆಲಸ ಮಾಡಲಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News