​ಮಂಗಳೂರಿನಲ್ಲಿ ಆಯುಧ ಪೂಜೆಯ ಸಂಭ್ರಮ

Update: 2017-09-29 05:58 GMT

ಮಂಗಳೂರು, ಸೆ.29: ಆಯುಧ ಪೂಜೆಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಶುಕ್ರವಾರ ಸಂಭ್ರಮ ಮನೆ ಮಾಡಿದೆ. ಸರಕಾರಿ, ಖಾಸಗಿ ಸಂಸ್ಥೆಗಳಲ್ಲದೆ ಬಹುತೇಕ ಎಲ್ಲ ಕಡೆಯೂ ಭಕ್ತರು ಆಯುಧ ಪೂಜೆಯಲ್ಲಿ ಪಾಲ್ಗೊಂಡರು.

ಶುಕ್ರವಾರ ಸರಕಾರಿ ರಜಾ ದಿನವಾದ ಕಾರಣ ಸರಕಾರಿ ಸಂಸ್ಥೆಗಳಲ್ಲಿ ಗುರುವಾರವೇ ಆಯುಧ ಪೂಜೆ ನಡೆದಿದ್ದರೆ, ಖಾಸಗಿ ಸಂಸ್ಥೆ, ಅಂಗಡಿ ಮುಂಗಟ್ಟುಗಳಲ್ಲಿ ವಿಶೇಷವಾಗಿ ಗ್ಯಾರೇಜ್‌ನಲ್ಲಿ ಶುಕ್ರವಾರ ಆಯುಧ ಪೂಜೆ-ಪುನಸ್ಕಾರ ನಡೆಯಿತು. ವಾಹನಗಳಿಗೆ ಹೂವು ಮುಡಿದು ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು. ವಿಜಯ-ದಶಮಿ ಆಯುಧ ಪೂಜೆಯ ನಿಮಿತ್ತ ತರಕಾರಿ ಬೆಳೆಗಳ ಬೆಲೆ ಗಗನಕ್ಕೆ ಏರಿತ್ತು. ಅದರಲ್ಲೂ ಬಾಳೆಹಣ್ಣು, ನಿಂಬೆ, ಸೇಬು, ತೆಂಗಿನಕಾಯಿಯ ಬೆಲೆ ಹೆಚ್ಚಿತ್ತು. ಅದಲ್ಲದೆ ನಗರದ ಪ್ರಮುಖ ರಸ್ತೆಗಳಲ್ಲಿ ಉತ್ತರ ಕರ್ನಾಟಕ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದಿಂದ ಆಗಮಿಸಿದ ವ್ಯಾಪಾರಿಗಳಿಂದ ಹೂವುಗಳನ್ನು ಖರೀದಿಸಲು ಗ್ರಾಹಕರು ಮುಗಿ ಬಿದ್ದರು. ಸೇವಂತಿಗೆ, ಮಲ್ಲಿಗೆ, ಗುಲಾಬಿ ಹೂವುಗಳಿಗೆ ಬೇಡಿಕೆ ಹೆಚ್ಚಿತ್ತು. ಕೆಲವರು ಚೌಕಾಸಿ ಮಾಡಿದರೆ ಇನ್ನು ಕೆಲವರು ವ್ಯಾಪಾರಿಗಳು ಹೇಳಿದ ಬೆಲೆ ಕೊಟ್ಟು ಹೂವು ಖರೀದಿಸುತ್ತಿದ್ದುದು ಕಂಡು ಬಂತು.

ವಾಹನ ಮಾರಾಟದಲ್ಲಿ ಏರಿಕೆ: ಆಯುಧ ಪೂಜೆಯ ಸಂಭ್ರಮದ ಮಧ್ಯೆ ವಾಹನಗಳ ಖರೀದಿ ಭರಾಟೆಯೂ ಬಿರುಸಾಗಿತ್ತು. ಬೈಕ್, ಕಾರು ಸಹಿತ ಇತರ ವಾಹನಗಳನ್ನು ಖರೀದಿಸಲು ಗ್ರಾಹಕರು ಶೋ ರೂಮ್‌ಗಳಿಗೆ ತಡಕಾಡುತ್ತಿದ್ದರು. ವಿಶೇಷ ಆಫರ್‌ಗಳ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದರು.

ಹುಲಿ ನಲಿಕೆಯ ಅಬ್ಬರ: ಈ ಬಾರಿ ಪಿಲಿ ನಲಿಕೆ (ಹುಲಿ ನಲಿಕೆ)ಯ ಅಬ್ಬರ ಕಾಣಿಸಿಕೊಂಡಿವೆ. ಮಂಗಳೂರು ದಸರಾಕ್ಕೆ ಅಲ್ಲಲ್ಲಿ ಕಾಣಿಸುವ ದೀಪಾಲಂಕಾರ ವಿಶೇಷ ಮೆರಗು ನೀಡುತ್ತಿದ್ದರೆ ಹುಲಿಗಳ ಅಬ್ಬರ ಕೂಡ ಹೊಸ ಸಂಭ್ರಮವನ್ನೇ ಸೃಷ್ಟಿಸುತ್ತಿದೆ. ಪೌರಾಣಿಕ ವೇಷಗಳ ಜೊತೆಗೆ ನಾನಾ ಮಾದರಿಯ ಹುಲಿ ವೇಷಗಳು, ಬ್ಯಾಂಡ್, ವಾದ್ಯಗಳು ದಸರಾದ ವೈಭವ ಹೆಚ್ಚಿಸಿವೆ. ನಗರದ ಪ್ರಮುಖ ರಸ್ತೆಗಳಲ್ಲದೆ ಮನೆ ಮನೆಗಳ ಮುಂದೆ ಹುಲಿವೇಷದ ಕುಣಿತ ತಡರಾತ್ರಿಯವರೆಗೂ ನಡೆಯುತ್ತಿವೆ. ಜೊತೆಗೆ ಅಲ್ಲಲ್ಲಿ ಹುಲಿ ನಲಿಕೆ ಸ್ಪರ್ಧೆ ಏರ್ಪಡಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News