ಲೆವಿನ್ ಸಮೂಹ ಸಂಸ್ಥೆ: ಕಾರ್ಮಿಕರ ಸುರಕ್ಷತಾ ಮಾಹಿತಿ ಕಾರ್ಯಾಗಾರ

Update: 2017-09-30 12:29 GMT

ಬಂಟ್ವಾಳ, ಸೆ. 30: ಪ್ರತಿಯೊಂದು ವಿಷಯದಲ್ಲೂ ಜಾತಿ-ಧರ್ಮ ಎಂದು ವಿಭಜಿಸಿ ನೋಡುವ ಇಂದಿನ ಕಾಲಘಟ್ಟದಲ್ಲಿ ಲೆವಿನ್ ಸಮೂಹ ಸಂಸ್ಥೆಯ ಮಾಲಕರು ಎಲ್ಲ ಜಾತಿ-ಧರ್ಮದ ಕಾರ್ಮಿಕರನ್ನು ಹಾಗೂ ಅವರ ಬಂಧುಗಳನ್ನು ಒಂದೇ ಸೂರಿನಡಿ ಒಟ್ಟು ಸೇರಿಸಿ ವಿಶಿಷ್ಟ ಮಾದರಿಯ ಆಯುಧ ಪೂಜೆ ಕಾರ್ಯಕ್ರಮ ಇಡೀ ಸಮಾಜಕ್ಕೆ ಸಾಮರಸ್ಯದ ಸಂದೇಶವನ್ನು ಸಾರಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಬಂಟ್ವಾಳ ಬೈಪಾಸಿನಲ್ಲಿರುವ ಲೆವಿನ್ ಸಮೂಹ ಸಂಸ್ಥೆಗಳ ವತಿಯಿಂದ  ನಡೆದ ಆಯುಧ ಪೂಜೆ, ಕಾರ್ಮಿಕರ ಸುರಕ್ಷತಾ ಕ್ರಮದ ಬಗ್ಗೆ ಮಾಹಿತಿ ಕಾರ್ಯಾ ಗಾರ ಹಾಗೂ ಕಾರ್ಮಿಕರಿಗೆ ಸಮವಸ್ತ್ರ ಮತ್ತು ಕ್ರೀಡಾಕೂಟದ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಾಮಾಜಿಕ ಸಾಮರಸ್ಯ, ಸಹಿಷ್ಣುತೆ ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ ಹಬ್ಬಗಳ ಆಚರಣೆಯ ಮೂಲಕವಾದರೂ ಸಮಾಜದಲ್ಲಿ ಸುಭಿಕ್ಷೆ ನೆಲೆಸುವ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕಾದ ಅಗತ್ಯವಿದೆ ಎಂದು ಆಶಿಸಿದರು.

ಅಗ್ರಹಾರ ಚರ್ಚ್‌ನ ಧರ್ಮಗುರು ಗ್ರೆಗರಿ ಡಿಸೋಜ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಲೆವಿನ್ ಸಮೂಹ ಸಂಸ್ಥೆ ಕಾರ್ಮಿಕರನ್ನು ತನ್ನ ಕುಟುಂಬದ ಸದಸ್ಯರಂತೆ ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಲೆವಿನ್ ಸಮೂಹ ಸಂಸ್ಥೆಗಳ ಮುಖ್ಯಸ್ಥ, ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಮಿಕರು ಕೇವಲ ಸಂಸ್ಥೆಯ ಕೆಲಸಗಾರರಾಗಿರದೆ, ತಮ್ಮ ಕುಟುಂಬದ ಸದಸ್ಯರಿದ್ದಂತೆ. ಕಾರ್ಮಿಕರಿಂದಲೇ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.

ಸಮಾಜದ ಜನರಿಗೆ ಬೆಳಕು ನೀಡುವ ನಿಟ್ಟಿನಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ಸಂಸ್ಥೆಯ ಕಾರ್ಮಿಕ ವಸಂತ ಪೂಜಾರಿ ಅವರ ಕುಟುಂಬಕ್ಕೆ ಸರಕಾರದ ವತಿಯಿಂದ 5ಲಕ್ಷ ರೂ. ವಿಶೇಷ ಪರಿಹಾರ ಮಂಜೂರು ಮಾಡುವಂತೆ ಇದೇ ವೇಳೆ ಅವರು ಸಚಿವರಿಗೆ ಮನವಿ ಮಾಡಿಕೊಂಡರು.

ಸಂಸ್ಥೆಯ ಮುಖ್ಯಸ್ಥರ ಮಾತೃಶ್ರೀ ಮೋನಿಕಾ ರೋಡ್ರಿಗಸ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ತಾಪಂ ಉಪಾಧ್ಯಕ್ಷ ಬಿ. ಅಬ್ಬಾಸ್ ಅಲಿ, ಜಿಪಂ ಸದಸ್ಯರಾದ ಕೆ. ಶಾಹುಲ್ ಹಮೀದ್, ಬಿ.ಪದ್ಮಶೇಖರ್ ಜೈನ್, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪುರಸಭಾ ಸದಸ್ಯರಾದ ಬಿ.ವಾಸು ಪೂಜಾರಿ, ಗಂಗಾಧರ್, ಪ್ರವೀಣ್ ತಾಪಂ ಮಾಜಿ ಸದಸ್ಯ ಎಪ್ರಿಯಮ್ ಸಿಕ್ವೇರಾ, ಮೆಸ್ಕಾಂ ಅಧೀಕ್ಷಕ ಮಂಜಪ್ಪ, ಕೆಥೋಲಿಕ್ ಸಭಾ ಸಮಿತಿಯ ಅಧ್ಯಕ್ಷ ಸ್ಟ್ಯಾನಿ ಲೋಬೊ, ಕಾಂಗ್ರೆಸ್ ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷ ಜನಾರ್ದನ ಚೆಂಡ್ತಿಮಾರ್, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ಹಿರಿಯರಾದ ವಿಠಲ ಶೆಟ್ಟಿ ಮತ್ತಿತರರು ವೇದಿಕೆಯಲ್ಲಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮೆಸ್ಕಾಂನ ಜ್ಯೂನಿಯರ್ ಇಂಜಿನಿಯರ್ ನಿತಿನ್ ಕುಮಾರ್ ವಿದ್ಯುತ್ ಕಾರ್ಮಿಕರು ನಿರ್ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇತ್ತೀಚೆಗೆ ವಿದ್ಯುತ್ ಅವಘಡದಿಂದ ಮೃತಪಟ್ಟ ಸಂಸ್ಥೆಯ ಕಾರ್ಮಿಕ ವಸಂತ ಪೂಜಾರಿ ಅವರ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ಧನ ಇದೇ ವೇಳೆ ವಿತರಿಸಯಿತು.

ಸಂಸ್ಥೆ ವತಿಯಿಂದ ಕಾರ್ಮಿಕರಿಗೆ ನಡೆಸಲಾದ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಹಾಗೂ ಭಾಗವಹಿಸಿದವರಿಗೆ ಬಹುಮಾನ ವಿತರಿ ಸಲಾಯಿತು. ಆಯುಧಪೂಜೆ ಪ್ರಯುಕ್ತ ಸಂಸ್ಥೆಯ ಕಾರ್ಮಿಕರಿಗೆ ಸಮವಸ್ತ್ರ ಮತ್ತು ಕುಟುಂಬಸ್ಥರಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಲಾಯಿತು. ಪಾಲುದಾರ ರಾಜೇಶ್ ರೋಡ್ರಿಗಸ್ ವಂದಿಸಿ, ಉದ್ಯೋಗಿ ರಾಜೀವ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News