ಸಮಯದ ಮಹತ್ವ ಎಲ್ಲರಿಗೂ ತಿಳಿದಿರಬೇಕು: ತ್ವಾಖಾ ಅಹ್ಮದ್ ಮುಸ್ಲಿಯಾರ್

Update: 2017-09-30 17:34 GMT

ಉಳ್ಳಾಲ, ಸೆ. 30: ಸಮಯ ಅತೀ ವೇಗವಾಗಿ ಹೋಗುತ್ತಿದೆ, ಇದರ ಮಹತ್ವ ಅರಿತವರು ಒಂದು ಕ್ಷಣವನ್ನೂ ವ್ಯಯಿಸಲು ಅಸಾಧ್ಯ, ಶ್ರೀಮಂತ ರಾದವರೆಲ್ಲರೂ ಪ್ರತೀ ನಿಮಿಷದ ಲೆಕ್ಕಾಚಾರ ಹಾಕಿ ದೊಡ್ಡ ಸ್ಥಾನ ತಲುಪಿದ್ದಾರೆ ಎಂದು ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮಸ್ಲಿಯಾರ್ ಅಭಿಪ್ರಾಯಪಟ್ಟರು.

ಮೇಲಂಗಡಿ ಮುಹಿಯುದ್ದೀನ್ (ಹೊಸಪಳ್ಳಿ) ಮಸೀದಿಯಲ್ಲಿ ಶುಕ್ರವಾರದ ನಮಾಝ್ ಆರಂಭಗೊಂಡು ನಾಲ್ಕು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ನಮಾಝ್ ಗೆ ನೇತೃತ್ವ ನೀಡಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಹರ್ರಂ ಇಸ್ಲಾಮಿಕ್ ಕ್ಯಾಲೆಂಡರ್‌ನ ಹೊಸ ವರ್ಷ ಆರಂಭದ ತಿಂಗಳಾಗಿವೆ, ಕಳೆದು ದಿನಗಳ ಕಹಿ ನೆನಪುಗಳನ್ನು ಮರೆತು ಮುಂದಿನ ದಿನಗಳಲ್ಲಿ ಪ್ರತಿ ಕ್ಷಣವನ್ನೂ ವ್ಯಯಿಸದೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ವ್ಯಾಜ್ಯ, ಘರ್ಷಣೆಯಿಂದ ಯಾರೂ ಏನನ್ನೂ ಸಾಧಿಸಲು ಅಸಾಧ್ಯ. ಯಾವುದೇ ಉತ್ತಮ ಕೆಲಸ ಬಿಕ್ಕಟ್ಟಿನಿಂದ ಆರಂಭಗೊಂಡರೂ ಬಳಿಕ ವಿಜಯದತ್ತ ಸಾಗಲು ಸಹಕಾರಿಯಾಗುತ್ತದೆ ಎನ್ನುವುದಕ್ಕೆ ಮೇಲಂಗಡಿಯಲ್ಲಿ ಆರಂಭಗೊಂಡ ಜುಮಾ ನಮಾಝ್ ಸಾಕ್ಷಿ. ಗಿಡ ನೆಡುವ ಕಾರ್ಯ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಬಾರದು ಎನ್ನುವ ನೆಲೆಯಲ್ಲಿ ಈ ವರ್ಷ ಮಸೀದಿ, ಮದರಸಾ, ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನೆಡಲು ಸೂಚನೆ ನೀಡಲಾಗಿದ್ದು, ಮೇಲಂಗಡಿ ಮಸೀದಿ ಆವರಣದಲ್ಲಿ ಬೆಲೆ ಬಾಳುವ ಗಿಡ ನೆಡಲಾಗುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಹಿನ್ನೆಲೆಯನ್ನ ಮಸೀದಿಯ  ಆವರಣದಲ್ಲಿ ಫಲ ಹಾಗೂ ಬೆಲೆಬಾಳುವ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದರ್ಗಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಕಾರ್ಯದರ್ಶಿ ನೌಷಾದ್ ಅಬೂಬಕ್ಕರ್, ಕೇಂದ್ರ ಜುಮಾ ಮಸೀದಿಯ ಖತೀಬ್ ಶಮೀಮ್ ಸಖಾಫಿ, ಇಬ್ರಾಹಿಂ ಬಾಖವಿ ಕೆ.ಸಿ.ರೋಡು, ಮೇಲಂಗಡಿ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ, ಮಾಜಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಕುಂಞಿಬಾವ, ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್, ಕ್ಷೇತ್ರ ಅರಣ್ಯ ಪಾಲಕ ರವಿಕುಮಾರ್, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಪ್ರಮುಖರಾದ ಯೂಸುಫ್ ಉಳ್ಳಾಲ್, ಅಬ್ದುಲ್ ಹಮೀದ್ ಕೋಡಿ, ಅಯೂಬ್ ಉಳ್ಳಾಲ್, ಯು.ಟಿ.ಮಹಮ್ಮದ್, ಆಸಿಫ್ ಅಬ್ದುಲ್ಲಾ, ಮಹಮ್ಮದ್ ಪಳ್ಳಿಕ್ಕಾನ, ರಿಯಾರ್ ಮಂಗಳೂರು, ಅಮೀರ್, ಯು.ಎಸ್.ಅಬೂಬಕ್ಕರ್, ಇಲ್ಯಾಸ್, ಸಯ್ಯಿದ್ ಇಬ್ರಾಹಿಂ ತಂಙಳ್ ಇನ್ನಿತರರು ಉಪಸ್ಥಿತರಿದ್ದರು.

ಹೊಸಪಳ್ಳಿ ಅಧ್ಯಕ್ಷ ಫಾರೂಕ್ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮದರಸಾ ವಿದ್ಯಾರ್ಥಿ ಸಯೀಫ್ ಕಿರಾಅತ್ ಪಠಿಸಿದರು. ರಹೀಂ ಮುಟ್ಟಿಕ್ಕಲ್ ಕಾರ್ಯಕ್ರಮ ನಿರೂಪಿಸಿದರು.

ನಾಲ್ಕು ವರ್ಷಗಳ ಹಿಂದೆ ಮಸೀದಿಯಲ್ಲಿ ಜುಮಾ ನಮಾಝ್ ಆರಂಭಿಸಿದಾಗ ವಿರೋಧಿಗಳು ಸಂಧಿ, ಗಲ್ಲಿಗಳಲ್ಲಿ ನಿಂತು ದೊಂಬಿ ಎಬ್ಬಿಸಿದ್ದರಿಂದ ಹಲವರ ವಿರುದ್ಧ ಕೇಸು ದಾಖಲಿಸಲಾಗಿತ್ತು, ಸಂದಿಗ್ಧ ಸನ್ನಿವೇಶದಲ್ಲೂ ಧೈರ್ಯದಿಂದ ಜುಮಾಕ್ಕೆ ನೇತೃತ್ವ ನೀಡಿದ್ದ ತ್ವಾಖಾ ಉಸ್ತಾದ್ ಎರಡನೇ ಬಾರಿ ನಮಾಝ್ ಗೆ ನೇತೃತ್ವ ನೀಡಿರುವುದು ಜಮಾಅತರ ಭಾಗ್ಯ - ಫಾರೂಕ್ ಉಳ್ಳಾಲ್, ಮೇಲಂಗಡಿ ಹೊಸಪಳ್ಳಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News