ಅ.3: ದ.ಕ. ವಿಷನ್ 2025 ಕುರಿತು ಕಾರ್ಯಾಗಾರ

Update: 2017-10-01 13:57 GMT

ಮಂಗಳೂರು, ಅ.1: ರಾಜ್ಯ ಸರಕಾರವು ಮುಂದಿನ ಏಳು ವರ್ಷಗಳಲ್ಲಿ ಅನುಷ್ಠಾನಗೊಳಿಸಬಹುದಾದ ಮಹತ್ವಾಕಾಂಕ್ಷೆಯ ದೀರ್ಘಾವಧಿ ಅಭಿವೃದ್ಧಿ ಮಾರ್ಗಸೂಚಿಯನ್ನು ನವಕರ್ನಾಟಕ 2025(ವಿಷನ್ 2025) ಎಂಬ ಹೆಸರಿನಡಿ ಅನುಷ್ಠಾನಕ್ಕೆ ತರಲಿದೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಷನ್ 2025 ಯೋಜನೆ ತಯಾರಿಸಲು ಚಾಲನೆ ದೊರೆತಿದ್ದು, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಲು ಅ.3ರಂದು ಬೆಳಗ್ಗೆ 10:30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ.

ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಸಮಾಜದ ವಿವಿಧ ವಲಯದ ಗಣ್ಯರು, ತಜ್ಞರು, ಪರಿಣಿ ತರು, ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು, ಜನಸಾಮಾನ್ಯರು ಒಳಗೊಂಡಂತೆ ಪ್ರತಿಯೊಬ್ಬ ಸಾರ್ವಜನಿಕ ಪಾಲುದಾರನ ಅಭಿಪ್ರಾಯ ಕ್ರೋಢೀಕರಿಸಿ ಮುಂದಿನ ಏಳು ವರ್ಷಗಳ ಅಭಿವೃದ್ಧಿಯ ಮುನ್ನೋಟಕ್ಕೆ ಈ ವಿಷನ್ ಯೋಜನೆ ತಯಾರಿಸಲಾಗುತ್ತಿದೆ.

ಡಿಸೆಂಬರ್ ಅಂತ್ಯದೊಳಗೆ ಸಿದ್ಧವಾಗುವ ಈ ದಾಖಲೆಯಲ್ಲಿನ ಜನಾಭಿಪ್ರಾಯ ಅಂಶಗಳೇ ಮುಂದಿನ ಏಳು ವರ್ಷದ ಅಭಿವೃದ್ಧಿಯ ಪಥವನ್ನು ಗುರುತಿ ಸಲಿದೆ. ಅಭಿವೃದ್ಧಿಯ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಆಶೋತ್ತರಗಳೊಂದಿಗೆ ಸಮನ್ವಯತೆ ಸಾಧಿಸುವ ಆಶಯ ಹೊಂದಲಾಗಿದೆ. ಈ ಮುನ್ನೋಟ ತಯಾರಿಕೆ ಜಿಲ್ಲಾಮಟ್ಟದಿಂದ ರಾಜ್ಯಮಟ್ಟದ ಹಂತದಲ್ಲಿ ರೂಪುಗೊಳ್ಳಲಿದ್ದು, ಪ್ರಾದೇಶಿಕ, ಭೌಗೋಳಿಕ ಹಾಗೂ ಸ್ಥಳೀಯ ಅಭಿವೃದ್ಧಿಗೆ ಧ್ವನಿಯಾಗಲಿದೆ.

13 ವಿಷಯಗಳ ಆಧರಿಸಿ, ವಿಷನ್ 2025 ಮುನ್ನೋಟಕ್ಕೆ ಜನಾಭಿಪ್ರಾಯ ಸಂಗ್ರಹಣೆಗೆ ರಾಜ್ಯ ಸರಕಾರ ವೇಳಾಪಟ್ಟಿ ಸಿದ್ಧಪಡಿಸಿದೆ. ಕೃಷಿ, ಮೂಲ ಸೌಕರ್ಯಗಳು, ಉದ್ಯೋಗ ಮತ್ತು ಕೌಶಲ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ, ನಗರಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕಾನೂನು ಮತ್ತು ಸುವ್ಯವಸ್ಥೆ, ಮಾಹಿತಿ ತಂತ್ರಜ್ಞಾನ, ಸೇವೆಗಳು, ಆಡಳಿತ ಸೇರಿದಂತೆ 5 ಪ್ರಮುಖ ಕ್ಷೇತ್ರಗಳನ್ನು ಆಧರಿಸಿ 13 ವಿಷಯಗಳ ಅಭಿವೃದ್ಧಿಗೆ ಮುನ್ನೋಟ ರಚನೆ ಯಾಗಲಿದೆ. ಈ ನಿಟ್ಟಿನಲ್ಲಿ ಆಯಾ ವಿಷಯಗಳನ್ನು ಆಧರಿಸಿ ಸಮಿತಿಗಳನ್ನು ರಚಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಪ್ರಸಕ್ತ ಕಾಲಕ್ಕೆ ತಕ್ಕಂತೆ ಆಗಬೇಕಾದ ಬದಲಾವಣೆ ಮತ್ತಿತರ ಕಾರ್ಯಗಳ ಕುರಿತು ಚರ್ಚೆ, ಸಂವಾದ, ಅಭಿಪ್ರಾಯ ಮಂಡನೆ ನಡೆಯಲಿದೆ.

ವಿಷನ್ 2025 ಜಿಲ್ಲೆಯ ಪ್ರತಿಯೊಬ್ಬ ನಾಗರಿಕರ ಆಶಯ, ಭರವಸೆಗಳನ್ನು ಮತ್ತು ನಿರೀಕ್ಷೆಗಳನ್ನು ಪ್ರತಿಬಿಂಭಿಸಲು ಉತ್ತಮ ವೇದಿಕೆಯಾಗಲಿದೆ. ಸಾರ್ವಜನಿಕರ ಸಲಹೆ ಮತ್ತು ಅಭಿಪ್ರಾಯ ಪಡೆಯುವ ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ನಾಗರಿಕರು ಭಾಗವಹಿಸಿ ಅಭಿವೃದ್ಧಿ ಕುರಿತಾದ ಸಲಹೆಗಳನ್ನು ಲಿಖಿತವಾಗಿಯೂ ಜಿಲ್ಲಾಧಿಕಾರಿ ಕಚೇರಿಗೆ ನೀಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News