ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಜಾಗೃತಿ ಮೂಡಿಸುತ್ತಿರುವ ನವಸಾಕ್ಷರೆ ಪ್ರೇಮಾರಿಗೆ ಗಾಂಧಿ ಗೌರವ ಪ್ರಶಸ್ತಿ

Update: 2017-10-02 11:07 GMT

ಮಂಗಳೂರು, ಅ.1: ಗಾಂಧಿ ಜಯಂತಿಯ ಅಂಗವಾಗಿ ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಜನಜಾಗೃತಿ ಮೂಡಿಸುತ್ತಿರುವ ನವ ಸಾಕ್ಷರೆ ಪ್ರೇಮಾ ಅವರಿಗೆ ಟಾಗೋರ್ ಪಾರ್ಕ್‌ನ ಮಹಾತ್ಮ ಗಾಂಧಿ ಪ್ರತಿಷ್ಠಾನದ ವತಿಯಿಂದ ಇಂದು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಾರ್ಷಿಕ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪುತ್ತೂರು ತಾಲೂಕಿನ ಆಲಂಕಾರು ಗ್ರಾಮದ ಜನಪದ ಕಲಾವಿದೆ ಸಾಕ್ಷರತಾ ಆಂದೋಲನದ ಮೂಲಕ ಅಕ್ಷರ ಕಲಿತು, ಸಾಮಾಜಿಕ ಕಾರ್ಯಕರ್ತರಾದ ಶೀನ ಶೆಟ್ಟಿ, ಕೃಷ್ಣ ಮೂಲ್ಯರ ಪ್ರೇರಣೆಯೊಂದಿಗೆ ತಮ್ಮ ಮನೆಯಿಂದಲೇ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಅವುಗಳನ್ನು ಸಂಸ್ಕರಣೆಯ ಮಾಡುವ ವಿಧಾನವನ್ನು ಅರಿತುಕೊಂಡು ತಮ್ಮ ಪರಿಸರದಲ್ಲಿ ಜನ ಸಾಮಾನ್ಯರಿಗೆ ಪ್ಲಾಸ್ಟಿಕ್ ಸುಡಬೇಡಿ, ಮಣ್ಣಿನೊಂದಿಗೆ ಬೆರಸಬೇಡಿ ಹಾಗೂ ಅದು ಹೇಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಜನರಿಗೆ ತಿಳುವಳಿಕೆ ನೀಡುತ್ತಾ 12 ವರುಷಗಳಿಂದ ಸಾರ್ವಜನಿಕರಿಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿ ಸಾಮಾಜಿಕ ಪರಿವರ್ತನೆ ಕಾರಣರಾಗಿರುವುದನ್ನು ಗಾಂಧಿ ಪ್ರತಿಷ್ಠಾನ ಗುರುತಿಸಿ ಅವರಿಗೆ ಸನ್ಮಾನ ಹಮ್ಮಿಕೊಂಡಿರುವುದಾಗಿ ಸಂಘದ ಕಾರ್ಯದರ್ಶಿ ಡಾ.ಎನ್.ಇಸ್ಮಾಯಿಲ್ ತಿಳಿಸಿದ್ದಾರೆ.

‘‘ಪ್ಲಾಸ್ಟಿಕ್ ಸುಡುವುದರಿಂದ ಯಾವ ಅಪಾಯ ಆಗುತ್ತದೆ ಎನ್ನುವ ಅರಿವು ಮೂಡಿದ ಬಳಿಕ ನಾನು ನಿರಂತರವಾಗಿ ನನ್ನ ಮನೆಯಿಂದಲೇ ಜನರಲ್ಲಿ ಪ್ಲಾಸ್ಟಿಕನ್ನು ಸುಡುವುದು,ಮಣ್ಣಿನಲ್ಲಿ ,ನೀರಿನಲ್ಲಿ ಸೇರಿಸುವುದು ತಪ್ಪು ಎಂದು ಜಾಗೃತಿ ಮುಡಿಸುತ್ತಾ ಇದ್ದೇನೆ ಈ ಕೆಲಸದಲ್ಲಿ ಎಲ್ಲರೂ ಕೈ ಜೋಡಿಸಬೇಕಾಗಿದೆ ’’ ಎಂದು ಸನ್ಮಾ ಸ್ವೀಕರಿಸಿದ ಪ್ರೇಮಾ ತಿಳಿಸಿದ್ದಾರೆ.

ಸಮಾರಂಭದಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ ಸುಧಾರಾಣಿ ಮಾತನಾಡುತ್ತಾ,ಗಾಂಧಿ ತತ್ವದ ಆಚರಣೆಗಳು ತೋರಿಕೆಗೆ ಮಾತ್ರ ಇರಬಾರದು.ಗಾಂಧಿಯ ಅಹಿಂಸೆ,ಸರಳತೆ, ಪರಧರ್ಮ ಸಹಿಷ್ಣುತೆ ಶ್ರೇಷ್ಠ ಆಚರಣೆ ಇಂದಿನ ಸಮಾಜಕ್ಕೂ ಅಗತ್ಯವಾದ ಸಾರ್ವಕಾಲಿಕ ವೌಲ್ಯಗಳಾಗಿವೆ ಅವುಗಳನ್ನು ನಮ್ಮ ಜೀವನದಲ್ಲಿ ಕಾಲದ ಅಗತ್ಯಗಳ ಜೊತೆ ಅಳವಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಟಾಗೋರ್ ಪಾರ್ಕ್ ಮಹಾತ್ಮ ಗಾಂಧಿ ಪ್ರತಿಷ್ಠಾನದ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆಯನ್ನು ಪ್ರೇಮಾರವರನ್ನು ಗೌರವಿಸಲಾಯಿತು. ಉಪಾಧ್ಯಕ್ಷರುಗಳಾದ ಎಂ.ಸೀತಾರಾಮ ಶೆಟ್ಟಿ,ಪ್ರಭಾಕರ ಶ್ರೀಯಾನ್,ಕಾರ್ಯದರ್ಶಿ ಡಾ.ಎನ್.ಇಸ್ಮಾಯಿಲ್ ಹಾಗೂ ನಾಗೇಶ್ ಕಲ್ಲೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News