ಗೋರಕ್ಷಣೆಯ ಹೆಸರಿನ ಹಿಂಸೆಗೆ ಗಾಂಧೀಜಿ ವಿರೋಧ:ಪ್ರೊ.ಮುರಳಿಧರ ಉಪಾಧ್ಯ
ಉಡುಪಿ, ಅ.2: ಗೋರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಹತ್ಯೆ ಮಾಡುವುದನ್ನು ತೀವ್ರವಾಗಿ ವಿರೋಧಿಸಿದ್ದ ಗಾಂಧೀಜಿ, ನಾನು ಗೋವಿಗೆ ಪೂಜೆ ಮಾಡುವಂತೆ ಮನುಷ್ಯರನ್ನು ಕೂಡ ಗೌರವಿಸುವುದಾಗಿ ಹೇಳಿದ್ದರು ಎಂದು ಹಿರಿಯ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ತಿಳಿಸಿದ್ದಾರೆ.
ಉಡುಪಿ ಎಂಜಿಎಂ ಕಾಲೇಜು ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಸೋಮವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಹಿಂದೂಸ್ತಾನವನ್ನು ಇಂಗ್ಲಿಷ್ ಸ್ವರಾಜ್ಯ ಆಗಲು ಬಿಡುವುದಿಲ್ಲ ಎಂದು ಗಾಂಧೀಜಿ 1908ರಲ್ಲಿ ಹೇಳಿದ್ದರು. ಆದರೆ ಇಂದು ಇಂಗ್ಲಿಷ್ ಪ್ರಭಾವ ದಿಂದಾಗಿ ಭಾರತದ ಸಾಕಷ್ಟು ಭಾಷೆಗಳು ಅಪಾಯದ ಸ್ಥಿತಿಯಲ್ಲಿವೆ ಎಂದ ಅವರು, ಅಸ್ಪಶ್ಯತೆ ಆಚರಣೆ ಮಾಡುವ ದೇವಸ್ಥಾನಕ್ಕೆ ಪತ್ನಿ ಹೋದ ಕಾರಣಕ್ಕೆ ಸಿಟ್ಟು ಮಾಡಿಕೊಂಡ ಗಾಂಧೀಜಿ ಒಂದು ದಿನ ಉಪವಾಸ ಮಾಡಿದ್ದರು ಎಂದರು.
ಹೃದಯ ಪರಿವರ್ತನೆಯಲ್ಲಿ ಗಾಂಧೀಜಿಗೆ ಸಾಕಷ್ಟು ನಂಬಿಕೆ ಇತ್ತು. ಶಸ್ತ್ರ ಬಲಕ್ಕಿಂತ ಪ್ರೇಮ ಬಲ ಶಕ್ತಿಯುತ ಎಂದು ಅವರು ನಂಬಿದ್ದರು. 1991ರಲ್ಲಿ ಸೋವಿಯತ್ ರಷ್ಯಾ ಗಾಂಧಿವಾದದ ಪ್ರಭಾವದಿಂದ ಒಂದೇ ಒಂದು ಕೊಲೆ, ಹಿಂಸೆ ಇಲ್ಲದೆ 30-40 ಚಿಕ್ಕಪುಟ್ಟ ರಾಷ್ಟ್ರವಾಗಿ ಒಡೆದು ಹೊಯಿತು. ಬರ್ಲಿನ್ ಗೋಡೆಯನ್ನು ಗಾಂಧಿ ಮಾರ್ಗದಲ್ಲಿ ಹಿಂಸೆ ಇಲ್ಲದೆ ಒಡೆದು ಜರ್ಮನಿಯನ್ನು ಒಂದು ಮಾಡಲಾಯಿತು. ಈಗಿನ ಜರ್ಮನಿಯ ಅಧ್ಯಕ್ಷೆ ಸಿರಿಯಾದಿಂದ ಬಂದ ಒಂದು ಲಕ್ಷ ನಿರಾಶ್ರಿತರಿಗೆ ತನ್ನ ದೇಶದಲ್ಲಿ ಆಶ್ರಯ ಕೊಡುವ ಮೂಲಕ ಹಿಂದೆ ಹಿಟ್ಲರ್ ಕಾಲದಲ್ಲಿ ಜರ್ಮನಿ ಮಾಡಿದ ತಪ್ಪಿಗೆ ಈಗ ಪ್ರಾಯಶ್ಚಿತ್ತ ಪಟ್ಟುಕೊಂಡ ರೀತಿಯಲ್ಲಿ ಹೃದಯ ಪರಿವರ್ತನೆಯ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ. ಇದು ಗಾಂಧಿ ಮಾರ್ಗದಲ್ಲಿ ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ಕೆ. ವಹಿಸಿದ್ದರು. ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು.
ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಸ್ವಾಗತಿಸಿ, ವಂದಿಸಿದರು. ಉಪನ್ಯಾಸಕ ಸುಚಿನ್ ಕೋಟ್ಯಾನ್ ಕಾರ್ಯ ಕ್ರಮ ನಿರೂಪಿಸಿದರು.
ದೇಶದಲ್ಲಿ ಅಪಾಯಕಾರಿ ಬೆಳವಣಿಗೆ ಗಾಂಧೀಜಿ ಸತತವಾಗಿ ಮುಸ್ಲಿಮರನ್ನು ಓಲೈಸಿರುವುದರಿಂದ ಅದು ಅವರ ಕೊಲೆಗೆ ನನ್ನನ್ನು ಪ್ರಚೋದಿಸಿತು ಎಂದು ಗೋಡ್ಸೆ ನ್ಯಾಯಾಲಯದಲ್ಲಿ ಹೇಳಿದ್ದನು. ಗಾಂಧೀಜಿ ಸತ್ತಾಗ ಜಿನ್ನಾ ಪ್ರತಿಕ್ರಿಯೆ ನೀಡಿ ಹಿಂದೂ ಧರ್ಮಕ್ಕೆ ಮಾತ್ರ ನಷ್ಟ ಆಯಿತು ಎಂದಿದ್ದರು. ಇಂದು ಮಹಾರಾಷ್ಟ್ರದಲ್ಲಿ ಗೋಡ್ಸೆ ಹೆಸರಿನ ಹರಿಕಥೆಗಳು ಸಾಕಷ್ಟು ಜನಪ್ರಿಯ ಆಗುತ್ತಿವೆ. ಇಂದು ಯಾವುದೇ ತಾತ್ವಿಕ ನಿಲುವುಗಳಿಲ್ಲದೆ ಗೋಡ್ಸೆಯನ್ನು ಒಪ್ಪಿಕೊಳ್ಳುವ ಹೊಸ ತಲೆಮಾರು ಬೆಳೆಯುತ್ತಿದೆ. ಇದು ಬಹಳಷ್ಟು ಅಪಾಯಕಾರಿಯಾಗಿದೆ. ಯಾವುದೇ ಟೀಕೆ ಮಾಡಬಾರದು, ವಿಮರ್ಶೆಗೆ ಅವಕಾಶವೇ ಇಲ್ಲ ಎಂಬ ಸ್ಥಿತಿಗೆ ನಾವು ಇಂದು ತಲುಪುತ್ತಿದ್ದೇವೆ. ಇದು ಗಾಂದೀಜಿ ಕಂಡ ಪ್ರಜಾಪ್ರಭುತ್ವದ ಬೆಳವಣಿಗೆಗೆ ದೊಡ್ಡ ಅಪಾಯ ಎಂದು ಪ್ರೊ.ಮುರಳೀಧರ ಉಪಾಧ್ಯ ಟೀಕಿಸಿದರು.