ಗಾಂಧಿ ಹತ್ಯೆಯ ಶಕ್ತಿಯೇ ಗೌರಿಯನ್ನು ಕೊಂದಿತೇ: ಜಿ.ರಾಜಶೇಖರ್

Update: 2017-10-02 15:46 GMT

ಉಡುಪಿ, ಅ.2: ಗಾಂಧಿ ಹತ್ಯೆಯಾದಾಗ ಈ ದೇಶದಲ್ಲಿ ಯಾವ ಶಕ್ತಿ ಸಂಭ್ರ ಮಿಸಿದೆಯೋ ಅದೇ ಸಿದ್ಧಾಂತವನ್ನು ನಂಬಿದ ಜನ, ಗೌರಿ ಲಂಕೇಶ್ ಹತ್ಯೆಯನ್ನು ಈಗ ಸಂಭ್ರಮಿಸುತ್ತಿದ್ದಾರೆ. ಹಾಗಾಗಿ ಗಾಂಧಿಯನ್ನು ಹತ್ಯೆ ಮಾಡಿದ ಶಕ್ತಿಯೇ ಗೌರಿಯನ್ನು ಕೊಂದಿರಬಹುದೇ ಎಂಬುದಾಗಿ ನಾವು ಈಗ ಪ್ರಶ್ನೆ ಮಾಡುತ್ತಿದ್ದೇವೆ ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ತಿಳಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆ ವಿರೋಧಿ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆ ಗಳು ‘ಗಾಂಧಿ ಕೊಂದವರೇ, ಗೌರಿ ಕೊಂದರೇ?’ ಘೋಷವಾಕ್ಯದೊಂದಿಗೆ ಹಂತಕರ ಶೀಘ್ರ ಬಂಧನಕ್ಕೆ ಆಗ್ರಹಿಸಿ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿರುವ ಗಾಂಧಿ ಪ್ರತಿಮೆಯ ಎದುರು ಸೋಮವಾರ ಹಮ್ಮಿಕೊಂಡ ಪ್ರತಿಭಟನೆ ಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಗಾಂಧಿ ಹತ್ಯೆಗೆ ಗೋಡ್ಸೆ ಒಬ್ಬನೇ ಕಾರಣ ಅಲ್ಲ. ಆತ ಕಾರಣ ಪುರುಷ ಮಾತ್ರ. ಗಾಂಧಿ ಹತ್ಯೆಗೆ ಕಾರಣವಾದದ್ದು ಹಿಂದುತ್ವದ ಸಿದ್ಧಾಂತ. ಗಾಂಧಿಯನ್ನು ಕೊಲೆ ಮಾಡುವ ಮೊದಲು ಐದು ಬಾರಿ ಕೊಲೆಯತ್ನ ನಡೆದಿತ್ತು. ಅದನ್ನು ಮಾಡಿರುವುದು ಹಿಂದುತ್ವ ಸಿದ್ಧಾಂತ ಹೊಂದಿದವರೇ ಆಗಿದ್ದಾರೆ. ಹೀಗಾಗಿ ಗಾಂಧಿಯನ್ನು ಕೊಂದದ್ದು ಆರೆಸ್ಸೆಸ್‌ನ ಸಿದ್ಧಾಂತ ಎಂದು ಅವರು ದೂರಿದರು.

ವ್ಯಕ್ತಿ ಸ್ವಾತಂತ್ರದ ಪ್ರತಿಪಾದನೆ, ಮಾನವೀಯ ವೌಲ್ಯಗಳನ್ನು ಎತ್ತಿ ಹಿಡಿ ಯುವ ಪತ್ರಿಕಾ ಧರ್ಮವನ್ನು ಗೌರಿ ಲಂಕೇಶ್ ಅವರು ಪಾಲಿಸಿದ್ದರು. ಹಾಗಾಗಿ ಅವರು ಕೊನೆಯವರೆಗೂ ಸಮಾನತೆಗಾಗಿ, ಕೋಮು ದ್ವೇಷದ ವಿರುದ್ಧ ಬರೆದರು, ಹೋರಾಡಿದರು. ಆ ವೌಲ್ಯವನ್ನು ವಿರೋಧಿಸುವವರೇ ಇಂದು ಈ ದೇಶದಲ್ಲಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಪ್ರಸ್ತುತ ಈ ದೇಶದಲ್ಲಿ ಪತ್ರಿಕಾ ಸ್ವಾತಂತ್ರಕ್ಕೆ ದೊಡ್ಡ ಕುತ್ತು ಬಂದಿದೆ. ಪತ್ರಿಕಾ ಆಡಳಿತ ಮಂಡಳಿಯ ಸೆನ್ಸಾರ್‌ಶಿಪ್ ಮತ್ತು ಪ್ರಭುತ್ವದ ದಂಡ ಶಕ್ತಿಯು ಮಾಧ್ಯಮದ ಸ್ವಾತಂತ್ರಕ್ಕೆ ಅಡ್ಡಿ ಪಡಿಸುತ್ತಿದೆ. ಭಾರತದಲ್ಲಿ ಜನಸಾಮಾನ್ಯರ ಅಭಿವ್ಯಕ್ತಿ ಸ್ವಾತಂತ್ರ, ಬದುಕುವ ಸ್ವಾತಂತ್ರ, ಪತ್ರಿಕಾ ಸ್ವಾತಂತ್ರಕ್ಕೆ ಇಂದು ಬಹಳ ದೊಡ್ಡ ಅಪಾಯ ಎದುರಾಗಿದೆ. ಪ್ರಸ್ತುತ ದೇಶದ ಈ ಸನ್ನಿವೇಶವನ್ನು ನಾವೆಲ್ಲ ಪ್ರತಿರೋಧಿಸಬೇಕಾಗಿದೆ ಎಂದರು.

ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಮಾತನಾಡಿ, ಇಂದು ಗೌರಿಯ ವಿಚಾರಧಾರೆ ದೇಶದಲ್ಲೆಡೆ ಪಸರಿಸಿದೆ. ಗಾಂಧಿಯ ವಿಚಾರಧಾರೆ ಕೊಲ್ಲಲು ಅವರಿಗೆ ಹೇಗೆ ಸಾಧ್ಯವಾಗಿಲ್ಲವೊ ಹಾಗೆ ಗೌರಿಯ ವಿಚಾರಧಾರೆಯನ್ನು ಕೂಡ ಕೊಲ್ಲಲು ಆಗಲ್ಲ. ಪ್ರತಿಯೊಬ್ಬರ ಹಕ್ಕಿಗಾಗಿ ಹೋರಾಡಿದ ಧೀರ ಮಹಿಳೆ ಗೌರಿ ಲಂಕೇಶ್ ಕರ್ನಾಟಕದ ಇನ್ನೊಬ್ಬ ಕಿತ್ತೂರು ಚೆನ್ನಮ್ಮ ಎಂದು ಹೇಳಿದರು.

ದಲಿತ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಗೌರಿ ಹತ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವೌನ ವಹಿಸಿದ್ದಾರೆ. ಅವರ ವಿದೂಷಕ ವರ್ತನೆ ಹಾಗೂ ಹಿಂದುತ್ವದ ರಾಜಕಾರಣವೇ ಗೌರಿಯನ್ನು ಕೊಂದಿದೆ ಎಂಬ ಅನು ಮಾನ ಮೂಡುತ್ತದೆ. ಗೌರಿ ಹತ್ಯೆಯನ್ನು ವ್ಯವಸ್ಥಿತವಾಗಿ ತಿರುಚಿ ನಕ್ಸಲರ ತಲೆ ಕಟ್ಟಲಾಗುತ್ತಿದೆ. ರಾಜಕೀಯಕ್ಕಾಗಿ, ಸಿದ್ಧಾಂತಕ್ಕಾಗಿ, ವಿಚಾರವಾದಿಗಳನ್ನು ಅಭಿವ್ಯಕ್ತಿ ಸ್ವಾತಂತ್ರವನ್ನು ಮಟ್ಟ ಹಾಕುವ ಕೆಲಸವನ್ನು ಸಂಘಪರಿವಾರ ಬಿಟ್ಟರೆ ಬೇರೆ ಯಾರು ಮಾಡುವುದಿಲ್ಲ ಎಂದು ಆರೋಪಿಸಿದರು.

ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್, ಸಿಪಿಎಂ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕೆ.ಶಂಕರ್, ಜಮಾಅತೆ ಇಸ್ಲಾಮಿ ಹಿಂದ್‌ನ ಇದ್ರೀಸ್ ಹೂಡೆ, ಕೆಥೋಲಿಕ್ ಸಭಾದ ವಾಲ್ಟರ್ ಸಿರಿಲ್ ಪಿಂಟೊ, ದಸಂಸ ಮುಖಂಡ ಶ್ಯಾಮ್‌ರಾಜ್ ಬಿರ್ತಿ ಮಾತನಾಡಿದರು.

ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಪ್ರೊ. ಫಣಿರಾಜ್, ಪ್ರೊ. ಸಿರಿಲ್ ಮಥಾಯಸ್, ಹುಸೇನ್ ಕೋಡಿಬೆಂಗ್ರೆ, ಖಲೀಲ್ ಅಹ್ಮದ್, ಮಹಾಬಲ ಕುಂದರ್, ಅಝೀಝ್ ಉದ್ಯಾವರ, ದಿನಕರ ಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.

Full View Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News