​ನೇತ್ರಾವತಿಯಿಂದ ಕಣ್ಣೂರು ತನಕ ನಾಲ್ಕು ಪಥ ರಸ್ತೆ ನಿರ್ಮಾಣ: ಶಾಸಕ ಜೆ.ಆರ್.ಲೋಬೊ

Update: 2017-10-03 11:51 GMT

ಮಂಗಳೂರು, ಅ.3: ನೇತ್ರಾವತಿ ನದಿಯಿಂದ ಉಳ್ಳಾಲ ಸೇತುವೆ ಬಳಿಯಿಂದ ಅಡ್ಯಾರ್ ಕಣ್ಣೂರು ತನಕ ನಾಲ್ಕು ಪಥ ರಸ್ತೆ ನಿರ್ಮಿಸಲು ಮತ್ತು ಆ ರಸ್ತೆಯಲ್ಲಿ ಜಾಗಿಂಗ್ ಸೈಕಲಿಂಗ್ ಕೂಡಾ ಮಾಡಲು ಅನುಕೂಲವಾಗುವ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ತನ್ನ ಕಚೇರಿಯಲ್ಲಿ ಬೆಂಗಳೂರಿನಿಂದ ಆಗಮಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು 6 ಕಿ.ಮೀ ಉದ್ದದ ರಸ್ತೆ ಇದಾಗಿದ್ದು, ಸುಮಾರು 300 ಎಕರೆ ಪ್ರದೇಶವನ್ನು ಇದು ಹೊಂದಿದೆ. ಇದರ ಸರ್ವೆ ಮಾಡಲು ರಾಜ್ಯ ಸರಕಾರ 25 ಲಕ್ಷ ರೂ. ಬಿಡುಗಡೆ ಮಾಡಿದ್ದು ಇದು ಕಾರ್ಯಗತವಾದರೆ ಮಹತ್ವದ ಯೋಜನೆಯಾಗುವುದರಲ್ಲಿ ಅನುಮಾನವಿಲ್ಲ ಎಂದರು.

ಮುಡಾ ಮೂಲಕ ಟೌನ್ ಪ್ಲಾನಿಂಗ್ ಯೋಜನೆಯ ರೀತಿ ಮಾಡಬೇಕು. ಇದರೊಂದಿಗೆ ನೇತ್ರಾವತಿ ನದಿ, ಮಂಗಳೂರು ಹಳೆ ಬಂದರು ಮೂಲಕ ಸುಲ್ತಾನ್‌ಬತ್ತೇರಿಯಲ್ಲಿ ಸೇತುವೆ ನಿರ್ಮಿಸಿ ಮುಂದೆ ಇದನ್ನು ನವಮಂಗಳೂರು ಬಂದರಿಗೆ ಜೋಡಿಸುವ ಸಾಗಾರ್‌ಮಾಲ ರಸ್ತೆಯನ್ನು ಮಾಡಲು ಉದ್ದೇಶಿಸಿದೆ. ಅಲ್ಲದೆ ಕೂಳೂರು ಬಳಿ ಅಂತಾರಾಷ್ಟ್ರೀಯ ಕ್ರೀಡಾ ವಿಲೇಜ್ ನಿರ್ಮಿಸಿ ಅದರಲ್ಲಿ ಎಲ್ಲ ರೀತಿಯ ಕ್ರೀಡೆಗಳನ್ನೂ ಆಡಲು ಅನುಕೂಲವಾಗಲಿದೆ ಎಂದು ಶಾಸಕ ಜೆ.ಆರ್. ಲೋಬೊ ನುಡಿದರು.

ಸಭೆಯಲ್ಲಿ ಮುಡಾ ಅಧ್ಯಕ್ಷ ಕೆ.ಸುರೇಶ್ ಬಲ್ಲಾಳ್, ಆಯುಕ್ತ ಶ್ರೀನಾಥ್ ರಾವ್, ಕೆಯುಡಿಯುಫ್‌ಸಿ ಅಧಿಕಾರಿ ಅಶೋಕ್ ಭಟ್ ಮತ್ತು ನೆಲ್ಸನ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News