ಬಡವರ ಪರವಾಗಿರದ ಬಿಜೆಪಿ, ಕಾಂಗ್ರೆಸ್: ಬಜಾಲ್‌

Update: 2017-10-03 16:01 GMT

ಮಂಗಳೂರು, ಅ. 3: ಕಳೆದ 25 ವರ್ಷಗಳ ಅವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ದೀರ್ಘ ಕಾಲ ಆಳ್ವಿಕೆ ನಡೆಸಿದ ಕಾಂಗ್ರೆಸ್ ಬಡ ನಿವೇಶನರಹಿತರ ಬಗ್ಗೆ ಎಳ್ಳಷ್ಟೂ ಕಾಳಜಿ ವಸುತ್ತಿಲ್ಲ. ಈ ಮಧ್ಯೆ ಒಂದು ಅವಧಿಯಲ್ಲಿ ಬಿಜೆಪಿ ಅಧಿಕಾರಕ್ಕೇರಿದರೂ ನಿವೇಶನರಹಿತರ ಕೂಗಿಗೆ ಸ್ಪಂದಿಸಿಲ್ಲ. ಬಡವರ ಪರವಾಗಿ ತಾವಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್, ಬಿಜೆಪಿ ಉಳ್ಳವರ ಪರವಾಗಿ ಕಾರ್ಯನಿರ್ವಸುತ್ತಿದೆಯೇ ಹೊರತು ಬಡಜನರ ಪರವಾಗಿ ಅಲ್ಲ ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ಕಾರ್ಯದರ್ಶಿ ಸುನಿಲ್‌ಕುಮಾರ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಲಶೇಖರದಲ್ಲಿ ಜರಗಿದ ನಿವೇಶನ ರಹಿತರ ಹಕ್ಕೊತ್ತಾಯ ಚಳವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಡವರಿಗೆ ಭೂಮಿ, ನಿವೇಶನ ನೀಡುವಲ್ಲಿ ಮೀನ-ಮೇಷ ಎಣಿಸುತ್ತಿರುವ ಕಾಂಗ್ರೆಸ್, ಬಿಜೆಪಿಗರು ಸಾವಿರಾರು ಎಕರೆ ಭೂಮಿಗಳನ್ನು ಶ್ರೀಮಂತರಿಗೆ ನೀಡಲು ಉತ್ಸುಕರಾಗಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರೂ ಸೇರಿ ಬಡ ನಿವೇಶನರಹಿತರ ಬದುಕಿನಲ್ಲಿ ಚೆಲ್ಲಾಟವಾಡುವ ಮೂಲಕ ಬಡವರಿಗೆ ದ್ರೋಹವೆಸಗಿದ್ದಾರೆ ಸುನಿಲ್‌ಕುಮಾರ್ ಬಜಾಲ್ ಹೇಳಿದರು.

ಹಲವಾರು ಭಾಗ್ಯಗಳನ್ನು ರಾಜ್ಯದ ಜನತೆಗೆ ಘೋಷಣೆ ಮಾಡುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವಾಗಲೀ, ಒಳ್ಳೆಯ ದಿನಗಳು ಬರಲಿದೆ ಎಂದು ಜನರಿಗೆ ಮಂಕುಬೂದಿ ಎರಚಿ ಅಧಿಕಾರಕ್ಕೇರಿದ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರವಾಗಲೀ ಯಾಕೆ ಬಡವರಿಗೆ ಮನೆ ನಿವೇಶನ ಒದಗಿಸಲು ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಸಿಪಿಎಂ ದ.ಕ. ಜಿಲ್ಲಾ ಮುಖಂಡ ವಸಂತ ಆಚಾರಿ, ಜೆ. ಬಾಲಕೃಷ್ಣ ಶೆಟ್ಟಿ, ಸಂತೋಷ್ ಶಕ್ತಿನಗರ ಅವರು ಮಾತನಾಡಿ ಮಂಗಳೂರು ಮಹಾನಗರ ಪಾಲಿಕೆಯ ವೈಫಲ್ಯವನ್ನು ಖಂಡಿಸಿದರು.ನಿವೇಶನರಹಿತರ ಹೋರಾಟ ಸಮಿತಿಯ ಅಧ್ಯಕ್ಷೆ ಮಂಜುಳಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೋರಾಟ ಸಮಿತಿಯ ಹೇಮಾವತಿ ಸ್ವಾಗತಿಸಿದರು. ಕವಿತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News