ಅ.8: ನವಜೀವನ ಸಮಿತಿ ಸದಸ್ಯರ ಸಮಾವೇಶ, ಮದ್ಯವರ್ಜಿತರ ಅಭಿನಂದನಾ ಕಾರ್ಯಕ್ರಮ

Update: 2017-10-03 17:17 GMT

ಬಂಟ್ವಾಳ, ಆ. 3: ರಾಷ್ಟ್ರಪಿತ ಮಹಾತ್ಮಗಾಂಧೀಜಿ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಘಟಕ ಘಟಕ, ರೋಟರಿ ಕ್ಲಬ್ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ನವಜೀವನ ಸಮಿತಿ ಸದಸ್ಯರ ಸಮಾವೇಶ, ಮದ್ಯವರ್ಜಿತರ ಅಭಿನಂದನಾ ಸಮಾವೇಶ ಅ. 8ರಂದು ನಂದಾವರದ ವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದಲ್ಲಿ ನಡೆಯಲಿದೆ ಎಂದು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ್ ಕಾರಂತ ನರಿಕೊಂಬು ಹೇಳಿದ್ದಾರೆ.

ನಗರದ ಪ್ರೆಸಕ್ಲಬ್‌ನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಈ ಸಮಾವೇಶದಲ್ಲಿ ಸುಮಾರು ಒಂದೂವರೆ ಸಾವಿರ ಮಂದಿ ಮದ್ಯವರ್ಜಿತರು ಭಾಗವಹಿಸಲಿದ್ದು, ಅವರಿಗೆ ರೋಟರಿ ಕ್ಲಬ್‌ನ ವತಿಯಿಂದ ಹಣ್ಣಿನ ಸಸಿಗಳನ್ನು ವಿತರಿಸಲಾಗುವುದು ಎಂದರು.

ಈ ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ರಾಜ್ಯದ 74 ಕೇಂದ್ರಗಳಲ್ಲಿ ಜನಜಾಗ್ರತಿ ಜಾಥಾ, ವ್ಯಸನ ಮುಕ್ತರಿಗೆ ಸನ್ಮಾನ, ಹಕ್ಕೊತ್ತಾಯ ಕಾರ್ಯಕ್ರಮ, ಸಮಾವೇಶಗಳನ್ನು ಆಯೋಜಿಸಿ ಸುಮಾರು 10 ಲಕ್ಷ ಜನರಿಗೆ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಬಂಟ್ವಾಳ ತಾಲೂಕಿನಲ್ಲಿ ಈವರೆಗೆ 45 ಮದ್ಯವರ್ಜನ ಶಿಬಿರವನ್ನು ನಡೆಸಲಾಗಿದ್ದು, ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಮದ್ಯಮುಕ್ತರಾಗಿ ದ್ದಾರೆ. ಎಲ್ಲರನ್ನೂ ಮನವೊಲಿಸುವ ಮೂಲಕವೇ ಪರಿವರ್ತನೆಗೊಳಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಕೈಯೂರು ನಾರಾಯಣ ಭಟ್, ತಾಲೂಕು ಯೋಜನಾಧಿಕಾರಿ ಸುನೀತಾ ನಾಯಕ್, ಕೃಷಿ ಅಧಿಕಾರಿ ನಾರಾಯಣ, ಮೇಲ್ವಿಚಾರಕ ಚಂದ್ರಶೇಖರ್, ರೋಟರಿ ಕ್ಲಬ್ ಪದಾಧಿಕಾರಿಗಳಾದ ನಾರಾಯಣ ಹೆಗ್ಡೆ, ಬಸ್ತಿ ಮಾಧವ ಶೆಣೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News