ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿ-ಡಾ. ಡಿ.ವೀರೇಂದ್ರ ಹೆಗ್ಗಡೆ

Update: 2017-10-03 17:22 GMT

ಪುತ್ತೂರು, ಅ. 3: ವ್ಯಸನ ಮುಕ್ತ ಸಮಾಜ ನಿರ್ಮಾಣವೇ ನಮ್ಮ ಗುರಿಯಾಗಿದ್ದು, ಜನಜಾಗೃತಿ ವೇದಿಕೆಯು ವ್ಯಸನ ಮುಕ್ತ ಸಮಾಜ ನಿರ್ಮಾಣದ ಎಚ್ಚರಿಕೆ ಗಂಟೆಯಾಗಿ ಕೆಲಸ ಮಾಡುತ್ತಿದೆ. ಮದ್ಯ ವ್ಯಸನಿಗಳನ್ನು ಮುಕ್ತಗೊಳಿಸುವ ವ್ಯಕ್ತಿಗಳಿಗೆ ‘ಜಾಗೃತಿ ಮಿತ್ರ’ ಹಾಗೂ ’ಜಾಗೃತಿ ಅಣ್ಣ’ ಪ್ರಶಸ್ತಿ ನೀಡುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಘೋಷಿಸಿದರು.

ಅವರು ಮಂಗಳವಾರ ಪುತ್ತೂರು ಪುರಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇವುಗಳ ಜಂಟೀ ಆಶ್ರಯದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ‘ಜನಜಾಗೃತಿ ಸಮಾವೇಶ ಮತ್ತು ನವಜೀವನ ಸಮಿತಿ ಸದಸ್ಯರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾವು ಇಂದು ಯೋಚನೆ ಮಾಡುತ್ತಿರುವ ಮದ್ಯಮುಕ್ತ ಸಮಾಜ ಮತ್ತು ಸ್ವಚ್ಚತಾ ಕಾರ್ಯಕ್ರಮದ ಬಗ್ಗೆ 70 ವರ್ಷಗಳ ಹಿಂದೆಯೇ ಮಹಾತ್ಮ ಗಾಂಧೀಜಿ ಅವರು ಯೋಚಿಸಿದ್ದರು. ವ್ಯಸನ ಮುಕ್ತ ಸಮಾಜದ ಬಗ್ಗೆ ಅವರು ಪ್ರತಿಪಾದನೆ ಮಾಡಿದ್ದರು. ಸ್ವಚ್ಚತೆಗೆ ಪ್ರಾಧ್ಯಾನ್ಯತೆ ನೀಡಿದ್ದರು. ಅದನ್ನು ನಾವಿಂದು ಮುಂದುವರಿಸುತ್ತಿದ್ದೇವೆ. ಸಂಘಟಿತ ಸಮಾಜದಿಂದ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಮೂಲಕ ದೇಶಕ್ಕೆ ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.

ದುರಾಭ್ಯಾಸಕ್ಕೆ ಜಾತಿ, ಧರ್ಮಗಳ ಬೇಧವಿಲ್ಲ. ಬಾರ್‌ಗಳಲ್ಲಿ ಸರ್ವಧರ್ಮ ಸಮನ್ವಯತೆಯಿದೆ ಎಂದ ಅವರು ಮನ ಪರಿವರ್ತನೆಯಿಂದ ದುಷ್ಟಟದಿಂದ ಮುಕ್ತಿ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಜನಜಾಗೃತಿ ವೇದಿಕೆಯ ಮೂಲಕ 1128 ಮದ್ಯವರ್ಜನ ಶಿಭಿರಗಳನ್ನು ನಡೆಸಿ ಪರಿವರ್ತಿಸಲಾಗಿದೆ. ವ್ಯಸನ ಮುಕ್ತದ ಕುಟುಂಬ ನೆಮ್ಮದಿ ಕಾಣುವಂತಾಗಿದೆ. ಪಾನಮುಕ್ತ ಹಾಗೂ ಸ್ವಚ್ಛ ಸಮಾಜಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಮದ್ಯದಂಗಡಿ ಮುಕ್ತ ಗ್ರಾಮಗಳು ಹೆಚ್ಚಾಗುತ್ತಿರುವದು ಹೆಮ್ಮೆಯ ವಿಚಾರವಾಗಿದೆ. ಇಂತಹ ಗ್ರಾಮಗಳನ್ನು ಗುರುತಿಸುವ ಕೆಲಸಗಳನ್ನು ನಡೆಯಬೇಕು. ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಹಾಗೂ ಜನಜಾಗೃತಿ ವೇದಿಕೆಯಡಿಯಲ್ಲಿ ಇದನ್ನು ಮಾಡುವುದಾಗಿ ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಸರ್ಕಾರ ಮಾಡಬೇಕಾದ ಯೋಜನೆಗಳನ್ನು ಧರ್ಮಾಧಿಕಾರಿಗಳು ತಾನು ಸಮಾಜಕ್ಕೆ ನೀಡುತ್ತಿದ್ದಾರೆ. ಸ್ವಸಹಾಯ ಸಂಘ, ಜನಜಾಗೃತಿ ವೇದಿಕೆ, ನವಜೀವನ ಸಂಘಟನೆ, ಭಜನೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ತಾಲೂಕಿನಲ್ಲಿ 3500 ಮದ್ಯಮುಕ್ತರಾಗಿದ್ದು, ಈ ಕೀರ್ತಿ ಖಾವಂದರಿಗೆ ಸಲ್ಲುತ್ತದೆ ಎಂದರು.

ಶ್ರೀಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆರ್ಶೀವಚನ ನೀಡುತ್ತಾ ಧರ್ಮ ಮತ್ತು ಸಂಸ್ಕೃತಿ ನಾಣ್ಯದ ಎರಡು ಮುಖವಾಗಿದ್ದು, ಇದರ ರಕ್ಷಣೆಗೆ ಪಾರದರ್ಶಕತೆ ಅವಶ್ಯಕವಾಗಿದೆ. ಖಾವಂದರು ಇವೆರಡ ರಕ್ಷಣೆಯೊಂದಿಗೆ ದೂರದರ್ಶಿತ್ವದ ಚಿಂತನೆಯ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ವಿಶ್ವ ಮಾನವ ಧರ್ಮದ ಪರಿಕಲ್ಪನೆ ಅವರಲ್ಲಿದೆ ಎಂದರು.

ಕೃಷಿ ಮತ್ತು ಋಷಿ ಸಂಸ್ಕೃತಿಯ ಕನಸು ಕಂಡಿರುವ ಖಾವಂದರು ಅದನ್ನು ಯೋಜನೆಯ ಮೂಲಕ ಯಶಸ್ವು ಮಾಡುತ್ತಿದ್ದಾರೆ. ಕ್ಷೇತ್ರದ ಮೂಲಕ ಪಾನಮುಕ್ತರಾದವರು ತಮ್ಮ ಸುತ್ತಲಿರುವ ಇತರ ಅಮಲು ಸೇವಕರನ್ನು ಮುಕ್ತರನ್ನಾಗಿಸುವ ಕೆಲಸ ಮಾಡಬೇಕು. ಕಳ್ಳ ಭಟ್ಟಿ ತಯಾರಿಯನ್ನು ನಿಲ್ಲಿಸಲು ಜನರು ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಮದ್ಯಮುಕ್ತರಾಗಿ ನವಜೀವನ ನಡೆಸುತ್ತಿರುವ 9 ಮಂದಿಯನ್ನು ಗೌರವಿಸಲಾಯಿತು. ಎಲ್ಲಾ ಮದ್ಯಮುಕ್ತರಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಮದ್ಯಮುಕ್ತರಾದ ರವೀ ಕಂಚಿತಡ್ಕ ಮತ್ತು ನೇಮಾಕ್ಷ ಅವರ ಪತ್ನಿ ಪ್ರಮೀಳಾ ಅನಿಸಿಕೆ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸದಸ್ಯ ಭಾಸ್ಕರ ಕೋಡಿಂಬಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ, ರಾಜ್ಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್, ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ, ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ವೇದಿಕೆಯ ವಿವಿಧ ವಲಯದ ಅಧ್ಯಕ್ಷರುಗಳಾದ ಅರುಣ್ ಕುಮಾರ್ ಪುತ್ತಿಲ, ಶರತ್ ಕುಮಾರ್ ಬಾಲ್ಯೊಟ್ಟು, ಸ್ವರ್ಣಲತಾ ಹೆಗ್ಡೆ, ರಾಜಗೋಪಾಲ್ ಕೈಲಾರ್, ನಾರಾಯಣ ರೈ ಕುದ್ಕಾಡಿ, ರಾಕೇಶ್ ರೈ ಕೆಡೆಂಜಿ, ಅಬ್ದುಲ್ ಖಾದರ್ ಮೇರ್ಲ, ಪ್ರಶಾಂತ್ ಮುರ, ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡ ಮತ್ತಿತರರು ಉಪಸ್ಥಿತರಿದ್ದರು.

ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಸ್ ಪಾನ ನಿಷೇಧದ ಹಕ್ಕೊತ್ತಾಯ ಮಂಡಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಪದ್ಮನಾಭ ಶೆಟ್ಟಿ ಸ್ವಾಗತಿಸಿದರು. ತಾಲೂಕು ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ ವಂದಿಸಿದರು. ಲೋಕೇಶ್ ಬೆತ್ತೋಡಿ ನಿರೂಪಿಸಿದರು. ಕಾರ್ಯಕ್ರಮದ ಮುನ್ನ ಪುತ್ತೂರು ಮಹಾಲಿಂಗೇಶ್ವರ ದೇವಳ ಬಳಿಯಿಂದ ಜಾಗೃತಿ ಜಾಥಾ ನಡೆಸಲಾಯಿತು. ಜಾಥಾಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಆಧ್ಯಕ್ಷ ಎನ್. ಸುಧಾಕರ ಶೆಟ್ಟಿ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News