ಪುತ್ತೂರಿನ ಸರ್ಕಾರಿ ಶಿಕ್ಷಕರೊಬ್ಬರಿಗೆ 1ಲಕ್ಷ ರೂ. ಮೊತ್ತದ ‘ಉತ್ತಮ ಶಿಕ್ಷಕ’ ಪ್ರಶಸ್ತಿ

Update: 2017-10-04 13:00 GMT

ಪುತ್ತೂರು, ಅ. 4: ಪುತ್ತೂರು ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಅವರಿಗೆ 1ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಲು ಬೆಂಗಳೂರಿನ ವಿದ್ಯಾಮಾತಾ ಫೌಂಡೇಶನ್ ನಿರ್ಧರಿಸಿದೆ ಎಂದು ಫೌಂಡೇಶನ್‌ನ ಅಧ್ಯಕ್ಷ ಪುತ್ತೂರು ತಾಲ್ಲೂಕಿನ ಕೆಯ್ಯೂರಿನ ಭಾಗ್ಯೇಶ್ ರೈ ಅವರು ತಿಳಿಸಿದರು.

ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಕ್ಷಣ, ಉದ್ಯೋಗಕ್ಕೆ ನಮ್ಮ ಸಂಸ್ಥೆ ಹೆಚ್ಚಿನ ಒತ್ತು ನೀಡುತ್ತಿದೆ. ಕಳೆದ ಆಗಸ್ಟ್ 19ರಂದು ಪುತ್ತೂರಿನಲ್ಲಿ ನಡೆಸಿದ ಬೃಹತ್ ಉದ್ಯೋಗ ಮೇಳ ಯಶಸ್ವಿಯಾಗಿದೆ. ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ 6300 ಉದ್ಯೋಗಾರ್ಥಿಗಳ ಪೈಕಿ 1700 ಮಂದಿಗೆ ಅದೇ ದಿನ ನೇರ ನೇಮಕಾತಿಯಾಗಿದೆ. ಉಳಿದವರಿಗೆ ಹಂತ ಹಂತವಾಗಿ ಉದ್ಯೋಗ ಸಿಗಲಿದೆ ಎಂದರು. ಇದೀಗ ಪುತ್ತೂರು ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಸಂಸ್ಥೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಒಂದರಿಂದ ಹತ್ತನೇ ತರಗತಿಯವರೆಗಿನ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಅತ್ಯುತ್ತಮ ಶಿಕ್ಷಕ ಅಥವಾ ಶಿಕ್ಷಕಿಯನ್ನು ಆಯ್ಕೆ ಮಾಡಲಾ ಗುತ್ತದೆ. ಎರಡು ಹಂತದ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೊದಲ ಹಂತದಲ್ಲಿ ವಿದ್ಯಾಮಾತಾ ಫೌಂಡೇಶನ್ ಎಂಬ ಹೆಸರಿನ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಅದು ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಪುತ್ತೂರು ತಾಲ್ಲೂಕಿನ ಸಾರ್ವಜನಿಕರು ಇಲ್ಲವೇ ವಿದ್ಯಾರ್ಥಿಗಳು ತಮ್ಮ ಮೆಚ್ಚಿನ ಶಿಕ್ಷಕರ ಹೆಸರು ಮತ್ತು ವಿವರಗಳನ್ನು ಅದರಲ್ಲಿ ದಾಖಲಿಸಬಹುದು. ಆದರೆ ಸೂಚಕರ ವಿವರವನ್ನು ನೀಡಬೇಕಾಗುತ್ತದೆ ಎಂದರು.

ಈ ಅವಕಾಶ ಅಕ್ಟೋಬರ್ 15ರವರೆಗೆ ಇರುತ್ತದೆ. ಇದಾದ ಬಳಿಕ ಮುಂದಿನ ಹತ್ತು ದಿನಗಳಲ್ಲಿ ನಮ್ಮ ಸಂಸ್ಥೆಯ ತಂಡವೊಂದು ತಾಲ್ಲೂಕಿನಲ್ಲಿ ಸಮೀಕ್ಷೆ ಮಾಡಲಿದೆ. ಇತರ ಜಿಲ್ಲೆಗಳ ತಜ್ಞರ ತಂಡ ಇದರಲ್ಲಿ ಕೆಲಸ ಮಾಡಲಿದೆ. ಈ ತಂಡ ಸಮೀಕ್ಷೆಯಲ್ಲಿ ಕಂಡುಕೊಂಡ ಅಂಶ ಮತ್ತು ಓಟಿಂಗ್ ಪ್ರಕ್ರಿಯೆಯಲ್ಲಿ ಬಂದ ಫಲಿತಾಂಶ ಎರಡನ್ನೂ ತಾಳೆ ಮಾಡಿ ಅಂತಿಮವಾಗಿ ಅತ್ಯುತ್ತಮ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ. ಇದಾದ ಬಳಿಕ ಪುತ್ತೂರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.

ವಿದ್ಯಾಮಾತಾ ಫೌಂಡೇಶನ್‌ನ ಪ್ರಧಾನ ಸಂಚಾಲಕ ಮಹೇಶ್ ಭಟ್ ಎಲ್ಯಡ್ಕ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News