ಹಿರಿಯ ನಾಗರಿಕರಿಗೆ ನೆಮ್ಮದಿ ಬದುಕು ಕಲ್ಪಿಸಲು ಸಹಕರಿಸಿ: ರೈ

Update: 2017-10-04 14:39 GMT

ಮಂಗಳೂರು, ಅ. 4: ಹಿರಿಯ ನಾಗರಿಕರು ಸಮಾಜದಲ್ಲಿ ನೆಮ್ಮದಿಯ ಬದುಕು ಕಾಣುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರ ಮತುತಿ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಇಂದಿಗೂ ಕುಟುಂಬ ಪದ್ಧತಿ ಗಟ್ಟಿಯಾಗಿರುವುದರಿಂದ ಹಿರಿಯ ನಾಗರಿಕರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ . ಹೆತ್ತವರು ಮತ್ತು ಮಕ್ಕಳ ಸಂಬಂಧ ಕಡಿದು ಹೋದರೆ ಹೆತ್ತವರು ಜೀವನದ ಮುಸ್ಸಂಜೆಯಲ್ಲಿರಬೇಕಾಗುತ್ತದೆ. ಕುಟುಂಬ ಪದ್ಧತಿ ಶಿಥಿಲಗೊಂಡಾಗ ಹಿರಿಯ ನಾಗರಿಕರ ನೆಮ್ಮದಿಯೂ ನಾಶವಾಗುವ ಸಾಧ್ಯತೆ ಇದೆ. ಆದ್ದರಿಂದ ಹಿರಿಯರನ್ನು ಗೌರವಿಸಿ ಪ್ರೀತಿಸುವ ಸಂಪ್ರದಾಯ ಉಳಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

ಜಿಲ್ಲಾ ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ, ವಿಶ್ವಾಸ್ ಟ್ರಸ್ಟ್ ಸ್ಥಾಪಕಿ ಡಾ.ಒಲಿಂಡಾ ಪಿರೇರಾ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಆರ್.ಉಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಉಸ್ಮಾನ್ ಎ. ಉಪಸ್ಥಿತರಿದ್ದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಸ್ವಾಗತಿಸಿದರು.

ಹಿರಿಯ ಸಾಧಕರಿಗೆ ಪ್ರಶಸ್ತಿ ವಿತರಣೆ

ಶಿಕ್ಷಣ ಕ್ಷೇತ್ರದಲ್ಲಿ ಡಾ.ಚಂದ್ರಶೇಖರ ದಾಮ್ಲೆ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಡಾ.ಎಂ.ಪ್ರಭಾ ಅಧಿಕಾರಿ, ನಿವೃತ್ತ ಯೋಧ ಹಿರಿಯ ನಾಗರಿಕ ಪ್ರಶಸ್ತಿಯನ್ನು ಮೇಜರ್ ಲೋಹಿತ್ ಸುವರ್ಣ, ಸಾಹಿತ್ಯ ಕ್ಷೇತ್ರದಲ್ಲಿ ಆದಂ ಹೇಂತರ್, ಕಲಾ ಕ್ಷೇತ್ರದಲ್ಲಿ ಟಿ.ಪ್ರೇಮಲತಾ ರಾವ್, ಕೃಷಿ ಕ್ಷೇತ್ರದಲ್ಲಿ ವಾಸುದೇವ ರೈ, ಸಮಜಸೇವಾ ಕ್ಷೇತ್ರದಲ್ಲಿ ಕೆ.ಮೋನಪ್ಪ ವಿಟ್ಲ, ಕ್ರೀಡಾ ಕ್ಷೇತ್ರದಲ್ಲಿ ಓಬಯ್ಯ ಮೂಲ್ಯ, ಜಾನಪದ ಕ್ಷೇತ್ರದಲ್ಲಿ ಮಾಯಿಲ ಕುತ್ತಾರು, ನಿವೃತ್ತ ಸರಕಾರಿ ಅಧಿಕಾರಿ ಕೆ.ಜಿ.ಬಂಗೇರ ಅವರಿಗೆ ಸಚಿವರು ಹಿರಿಯ ಸಾಧಕರ ಪ್ರಶಸ್ತಿಯನ್ನು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News