ವಿವಾದ ಸೃಷ್ಟಿಸಿದ ಆಡಿಯೋ : ಪೊಲೀಸರಿಂದ ವಿಚಾರಣೆ

Update: 2017-10-04 17:13 GMT

ಮಂಗಳೂರು, ಅ. 4: ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಯುವಜನರು ತೀವ್ರವಾದದತ್ತ ಆಕರ್ಷಿತರಾಗುತ್ತಿದ್ದಾರೆ ಎಂಬರ್ಥದ ಆಡಿಯೋವೊಂದು ವಿವಾದ ಸೃಷ್ಟಿಸಿದೆ. ಇಸ್ಮಾಯೀಲ್ ಶಾಫಿ ಎಂಬವರದ್ದು ಎಂದು ಹೇಳಲಾದ ಈ ಆಡಿಯೋ ವ್ಯಾಟ್ಸ್‌ಆ್ಯಪ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು  ಎರಡು ಪತ್ರಿಕೆಗಳು ಮಂಗಳೂರಿನಲ್ಲಿ ಐಸಿಸ್ ಎಂಬ ಶೀರ್ಷಿಕೆಯಲ್ಲಿ ಸುದ್ದಿಯೊಂದನ್ನು ಬುಧವಾರ ಪ್ರಮುಖವಾಗಿ ಪ್ರಕಟಿ ಸಿತ್ತು. ಅದೀಗ ದೊಡ್ಡ ವಿವಾದವಾಗಿ ಬೆಳೆದಿದೆ. 

ಪೊಲೀಸರಿಂದ ವಿಚಾರಣೆ

ದ.ಕ. ಜಿಲ್ಲೆಯಲ್ಲಿ ಉಗ್ರವಾದದತ್ತ ಸೆಳೆಯುವ ಗುಂಪೊಂದು ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿಕೆ ನೀಡಿರುವ ವ್ಯಕ್ತಿಯನ್ನು ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಇಲಾಖೆಯ ಗಮನಕ್ಕೆ ಬಂದಿದೆ. ದ.ಕ. ಜಿಲ್ಲೆಯಲ್ಲಿ ಇಂತಹ ಚಟುವಟಿಕೆ ಇದೆಯೇ ಇಲ್ಲವೋ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಪ್ರತಿಕ್ರಿಯೆ ನೀಡಿದರು.

ಹೇಳಿಕೆ ಪರಿಶೀಲನೆ: ಪೊಲೀಸ್ ಕಮಿಷನರ್‌

ಮಂಗಳೂರಿನಲ್ಲಿ ಉಗ್ರ  ಚಟುವಟಿಕೆಯ ಬಗ್ಗೆ ನೀಡಿರುವ ಹೇಳಿಕೆಯು ಗಮನಕ್ಕೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹೇಳಿಕೆಯು ಬ್ಯಾರಿ ಭಾಷೆಯಲ್ಲಿದ್ದು, ಅದನ್ನು ಭಾಷಾಂತರಿಸಿ ಪರಿಶೀಲನೆ ನಡೆಸುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದ್ದಾರೆ.

ಈ ಬಗ್ಗೆ ಇಸ್ಮಾಯಿಲ್ ಶಾಫಿ ಅವರನ್ನು ಸಂಪರ್ಕಿಸಲು ಪತ್ರಿಕೆ ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News