ಉಡುಪಿ ವಿಷನ್ 2025: ಜಿಲ್ಲೆಯ ಸಮಗ್ರ ಅಭಿವೃದ್ಧಿಗೊಂದು ಮುನ್ನೋಟ

Update: 2017-10-04 16:19 GMT

ಉಡುಪಿ, ಅ.4: ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ. ಟಿಎಂಪೈ ಹಾಲ್‌ನಲ್ಲಿ ಬುಧವಾರ ನಡೆದ ವಿಷನ್-2025 ಕಾರ್ಯಾಗಾರದಲ್ಲಿ ಐದು ವಿಷಯಗಳ ಬಗ್ಗೆ ಗುಂಪು ರಚಿಸಿ ವಿವರವಾದ ಚರ್ಚೆ ನಡೆಯಿತು. ಕರ್ನಾಟಕ-2025 ಸ್ವರೂಪ ದರ್ಶನದ ದಾಖಲೆ ಮುಂದಿನ ಏಳು ವರ್ಷಗಳಲ್ಲಿ ಕರ್ನಾಟಕಕ್ಕೆ ಆಡಳಿತ ತಂತ್ರವನ್ನು ಒದಗಿಸುವ ಉದ್ದೇಶ ಹೊಂದಿದ್ದು, ಪ್ರಾದೇಶಿಕ ಹಾಗೂ ಜಿಲ್ಲಾ ಅಭಿವೃದ್ಧಿಗೆ ಮುನ್ನುಡಿಯಾಗುವ ಸಾಧ್ಯತೆಯನ್ನು ಹೊಂದಿದೆ.

ಎಲ್ಲ ಐದು ಗುಂಪುಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಇ-ಗವರ್ನೆನ್ಸ್, ಕಂದಾಯ ಇಲಾಖೆ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಿಗೆ ತಾಂತ್ರಿಕವಾಗಿ ಹಾಗೂ ಮಾನವ ಸಂಪನ್ಮೂಲಗಳನ್ನು ನೀಡಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ನೇರವಾಗಿ ಫಲಾನುಭವಿಗಳೊಂದಿಗೆ ಸಂಪರ್ಕ ಸಾಧಿಸುವ ಅತಿ ಪ್ರಮುಖ ಇಲಾಖೆಗಳು ಇವಾಗಿದ್ದು, ಇವುಗಳನ್ನು ಜನಸ್ನೇಹಿಯನ್ನಾಗಿಸುವ ಅಗತ್ಯವನ್ನು ಸಚಿವರು ಪ್ರತಿಪಾದಿಸಿದರು.

ಶಿಕ್ಷಣ:  ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಆರೋಗ್ಯದ ಕುರಿತ ಚರ್ಚೆಯಲ್ಲಿ ಶಿಕ್ಷಣದ ಕುರಿತು ನಡೆದ ಚರ್ಚೆಯಲ್ಲಿ ಮಕ್ಕಳಿಗೆ ಉತ್ತಮ ಜ್ಞಾನ, ಕೌಶಲ್ಯಭರಿತ ಶಿಕ್ಷಣವನ್ನು ನೀಡಬೇಕು ಹಾಗೂ ಪ್ರತಿ ಗ್ರಾಪಂನಲ್ಲಿ 1ನೇ ತರಗತಿ ಯಿಂದ ಪಿಯುಸಿವರೆಗಿನ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಬೇಕು. ಪ್ರಾಥಮಿಕ ಶಿಕ್ಷಣದಲ್ಲಿ ಯಾವುದಾದರೂ ಒಂದು ಭಾಷೆಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಆದಷ್ಟು ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಗಮನ ನೀಡಬೇಕು ಹಾಗೂ ಖಾಸಗಿ ಶಾಲೆಗಳಿಗೆ ಸರಕಾರ ಅನುಮತಿ ನೀಡುವುದನ್ನು ನಿಲ್ಲಿಸಬೇಕು. ಅಲ್ಲದೇ ಪ್ರಾಥಮಿಕ ಶಿಕ್ಷಣದಿಂದ ಪಿಯುಸಿ ತನಕದ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಹೆಚ್ಚಿನ ತಂತ್ರಜ್ಞಾನವನ್ನು ಶಾಲೆಗಳಲ್ಲಿ ಬಳಸಬೇಕು ಮತುತಿ ಇ-ಲೈಬ್ರೆರಿ, ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲಿ ನೀಡಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಚರ್ಚೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಜಿಲ್ಲೆಯ ಹಿಂದುಳಿದ ವರ್ಗದ, ಕುಗ್ರಾಮದ ಹಲವು ವಿದ್ಯಾರ್ಥಿಗಳು ಶಾಲೆಯ ಮುಖವನ್ನೇ ನೋಡಿರುವುದಿಲ್ಲ. ಅವರು ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು. ಅವರ ಹೆತ್ತವರೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮನವೊಲಿಸುವ ಕಾರ್ಯವನ್ನು ಕೈಗೊಳ್ಳಬೇಕು ಎಂಬ ಅನಿಸಿಕೆ ಚರ್ಚೆಯ ವೇಳೆ ವ್ಯಕ್ತವಾಯಿತು.

ಆರೋಗ್ಯ: ಆರೋಗ್ಯದ ಕುರಿತ ಚರ್ಚೆಯಲ್ಲಿ ಸರಕಾರಿಆಸ್ಪತ್ರೆಗಳಲ್ಲಿ ಉತ್ತಮ ಸೇವೆಯನ್ನು ನೀಡಬೇಕು. ಆಂಬುಲೆನ್ಸ್ ಒದಗಿಸಬೇಕು. ಲೈಂಗಿಕ ಶಿಕ್ಷಣದ ಕುರಿತು ಮಕ್ಕಳಿಗೆ ಸರಿಯಾದ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜನ್ನು ಸ್ಥಾಪಿಸುವಂತಾಗಬೇಕು ಹಾಗೂ ಪ್ರತಿ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಓದಿದ ವೈದ್ಯರು ಕಡ್ಡಾಯವಾಗಿ 24 ಗಂಟೆ ಸೇವೆ ಸಲ್ಲಿಸು ವಂತಾಗಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಖಾಲಿ ಇರುವ ನರ್ಸ್ ಹುದ್ದೆಯನ್ನು ಭರ್ತಿಗೊಳಿಸಬೇಕೆಂಬ ಬೇಡಿಕೆಗಳು ಬಂದವು.

ವಿಷನ್-2025 ಕಾರ್ಯಾಗಾರದಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ, ಕಚ್ಚಾ ವಸ್ತು ಆಧಾರಿತ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಕೈಗಾರಿಕೆಗಳನ್ನು ಸ್ಥಾಪಿಸುವ ವಿಧಾನಗಳನ್ನು ಸರಳೀಕರಿಸಬೇಕು ಎಂಬ ಒತ್ತಾಯ ಕೇಳಿಬಂತು. ತಾಂತ್ರಿಕ ಆಧಾರಿತ ಮೂಲ ಸೌಕರ್ಯಗಳನ್ನು ಹೆಬ್ರಿ, ಪೆರ್ಡೂರು, ಬ್ರಹ್ಮಾವರ, ಬೈಂದೂರು ಮುಂತಾದ ಕೈಗಾರಿಕಾ ವಲಯಗಳಿಗೆ ನೀಡ ುವಂತೆ ಪ್ರಸ್ತಾಪ ವ್ಯಕ್ತವಾಯಿತು.

ಆಹಾರ ಉತ್ಪನ್ನ ಪಾರ್ಕ್ ರಚಿಸಬೇಕು, ಸಂಪನ್ಮೂಲ ಆಧಾರಿತ ಮೀನು ಸಂಸ್ಕರಣಾ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು. ಈ ಸಂಬಂಧ ಕಾರ್ಪೋರೇಟ್ ಕ್ಷೇತ್ರದಿಂದ ತರಬೇತಿ ನೀಡುವಿಕೆಯಿಂದ ಉದ್ಯಮಶೀಲತೆಯನ್ನು ಬೆಂಬಲಿಸ ಬೇಕು. ಜೊತೆಗೆ ಉನ್ನತ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಮಾರ್ಗದರ್ಶನವು ಪ್ರಮುಖ ಕಾರ್ಪೋರೇಟ್ ಕ್ಷೇತ್ರದಿಂದ ಲ್ಯವಿರಬೇಕು ಎಂಬ ಒತ್ತಾಯ ಚರ್ಚೆಯ ವೇಳೆ ವ್ಯಕ್ತವಾಯಿತು.

ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದ ಅಪ್ಲೀಕೇಶನ್(ಆ್ಯಪ್)ಅನ್ನು ಸರಕಾರದಿಂದ ಅಭಿವೃದ್ದಿ ಪಡಿಸಬೇಕು. ತಾಂತ್ರಿಕತೆ ಅಭಿವೃದ್ಧಿಗೆ ಐಟಿ ಪಾರ್ಕ್ ಸಣ್ಣ ಪ್ರಮಾಣದಲ್ಲಿ ಹಾಗೂ ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸುವುದು, ಸಾರ್ವಜನಿಕರಿಗೆ ವೈ-ಪೈ ಸೇವೆಯನ್ನು ಒದಗಿಸಬೇಕು ಎಂಬ ಬೇಡಿಕೆ ಕೇಳಿಬಂತು.

ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಹೆಚ್ಚಿನ ಮೂಲ ಸೌಕರ್ಯ ಕೊಡಿ. ಅವರಿಗೆ ತಂತ್ರಜ್ಞಾನದ ತರಬೇತಿಯನ್ನು ನೀಡಿ ಪೊಲೀಸ್ ಠಾಣೆಯನ್ನು ಜನಸ್ನೇಹಿಯನ್ನಾಗಿಸಿ ಎಂಬ ಅಭಿಪ್ರಾಯ ವ್ಯಕ್ತವಾಯಿತಲ್ಲದೇ, ತ್ವರಿತ ನ್ಯಾಯದಾನಕ್ಕೆ ಇ ತಂತ್ರಜ್ಞಾನದ ನೆರವು ಪಡೆಯಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.

ಗ್ರಾಮೀಣಾಭಿವೃದ್ಧಿಯಡಿ ನೀರು, ನೈರ್ಮಲ್ಯ, ರಸ್ತೆ ಸಂಪರ್ಕಕ್ಕೆ ಒತ್ತು ನೀಡಬೇಕು. ನಗರ ಮತ್ತು ಗ್ರಾಮೀಣ ಅಸಮತೋಲನ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಬ್ಯಾಂಕಿಂಗ್ ನೆರವು ವೈಯಕ್ತಿಕ ನೆಲೆಯಲ್ಲಿ ಲ್ಯವಾಗ ಬೇಕು. ಮೀನುಗಾರಿಕೆ ನಿರ್ವಹಣೆಗೆ ಮೀನು ಉತ್ಪತ್ತಿಯನ್ನು ಸಂರಕ್ಷಿಸಬೇಕು. ಘನ ತ್ಯಾಜ್ಯ ವಿಲೇಗೆ ಮೂಲದಲ್ಲೇ ಪರಿಹಾರ ದೊರೆಯಬೇಕು. ಕೃಷಿ ಪ್ರಸಕ್ತ ಸಂದರ್ಭದಲ್ಲಿ ಹಲವು ಸವಾಲು, ಸಂದಿಗ್ಧತೆಯನ್ನು ಎದುರಿಸುತ್ತಿದ್ದು ಇರುವ ಯೋಜನೆಗಳ ಸದ್ಬಳಕೆ ಅತ್ಯಗತ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಚಿಂತಕರು, ಬುದ್ಧಿಜೀವಿ ಗಳು, ಶಿಕ್ಷಣ ತಜ್ಞರು, ವಿವಿಧ ಸಮುದಾಯಗಳ ಮುಖಂಡರು ಗುಂಪು ಚರ್ಚೆಯಲ್ಲಿ ಪಾಲ್ಗೊಂಡರು. ವಿಷನ್ ಡಾಕ್ಯುಮೆಂಟ್, ಅಭಿವೃದ್ಧಿ ಯೋಜನೆಗಳ ರೂಪುರೇಷೆಗೆ ಮಾರ್ಗದರ್ಶಿ ಸೂತ್ರವಾಗಲಿದೆ ಎಂದು ಕಾರ್ಯಾಗಾರದ ಸಮಾರೋಪದಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹೇಳಿದರು. ಸಿಇಒ ಶಿವಾನಂದ ಕಾಪಶಿ ವಂದಿಸಿದರು.

ಪೊಲೀಸ್ ವ್ಯವಸ್ಥೆ ಆಧುನೀಕರಣಗೊಳ್ಳಲಿ

2025ರ ವೇಳಗೆ ಪೊಲೀಸ್ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಗಳೊಂದಿಗೆ, ಆಧುನೀಕರಣಗೊಳ್ಳಬೇಕು ಎಂಬ ಅಭಿಪ್ರಾಯ ಬುಧವಾರ ಮಣಿಪಾಲದಲ್ಲಿ ನಡೆದ ವಿಷನ್-2025ರ ಚರ್ಚೆಯ ವೇಳೆ ವ್ಯಕ್ತವಾಯಿತು.

ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿನ ಸುಧಾರಣೆ ಕುರಿತು ಎಂಐಟಿ ಪ್ರಾಧ್ಯಾಪಕ ಪ್ರೊ.ಬಾಲಕೃಷ್ಣ ಮದ್ದೋಡಿ ಮಾತನಾಡಿ, ವಿದೇಶಗಳಲ್ಲಿ ಒಂದು ಮಿಲಿಯನ್ ನಾಗರೀಕರಿಗೆ 150ರಿಂದ 200 ಮಂದಿ ಪೊಲೀಸ್ ಸಿಬ್ಬಂದಿ ಗಳಿದ್ದರೆ, ರಾಜ್ಯದಲ್ಲಿ ಈ ಪ್ರಮಾಣ ಕೇವಲ 15ರಷ್ಠಿದೆ. ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ನೇಮಕಾತಿ ನಡೆಯಬೇಕು ಎಂದರು.

ಉಡುಪಿ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಶೇ.60ರಷ್ಟು ಮಂದಿ ಹೊರ ಜಿಲ್ಲೆಯವರು. ಅವರು ವರ್ಗಾವಣೆ ಕೋರಿ ತಮ್ಮ ಜಿಲ್ಲೆಗಳಿಗೆ ಹೋಗುವು ದರಿಂದ ಜಿಲ್ಲೆಯಲ್ಲಿ ಪೊಲೀಸ್‌ರ ಪ್ರಮಾಣ ಕಡಿಮೆಯಾಗುತ್ತಿದೆ. ನೇಮಕ ಗೊಂಡ ಕನಿಷ್ಠ 15 ವರ್ಷ ಜಿಲ್ಲೆಯಲ್ಲಿಯೇ ಸೇವೆ ಸಲ್ಲಿಸುವ ನಿಯಮವನ್ನು ಅಳವಡಿಸಬೇಕು. ಪೊಲೀಸರಿಗೆ ಹಾಗೂ ಪೊಲೀಸ್ ಸ್ಟೇಶನ್‌ಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಸೈಬರ್ ಅಪರಾಧ ತಡೆಗಟ್ಟಲು ಪ್ರತ್ಯೇಕ ಸೈಬರ್ ಠಾಣೆ, ಪ್ರತಿ ತಾಲೂಕಿಗೆ ಒಂದು ಮಹಿಳಾ ಪೊಲೀಸ್ ಠಾಣೆ ಇರಬೇಕು.

ಪ್ರತಿ 10 ವರ್ಷಕ್ಕೊಮ್ಮೆ ಪೊಲೀಸ್ ಬಲ ಹೆಚ್ಚಿಸಬೇಕು, ಪೋಲೀಸ್ ಐಟಿ ವಿಭಾಗ ಮತ್ತು ಕೋರ್ಟ್ ನಡುವೆ ಇ-ಕನೆಕ್ಟ್ ಪ್ರಾರಂಭಿಸಬೇಕು. ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರಗಳು ಹಾಗೂ ವಾಹನಗಳನ್ನು ಒದಗಿಸಬೇಕು. ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಎಲ್ಲಾ ವಲಯಗಳಲ್ಲಿ ಎಫ್‌ಎಸ್‌ಎಲ್ ಸೌಲ್ಯ ಒದಗಿಸಬೇಕು, ಏಕರೂಪ ಪೊಲೀಸ್ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಪ್ರೊ.ಮದ್ದೋಡಿ ಸಲಹೆ ನೀಡಿದರು.

ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟಂತೆ ಹೆಚ್ಚುವರಿ ನ್ಯಾಯಾಲಯಗಳ ಹಾಗೂ ಸಿಬ್ಬಂದಿಗಳ ನಿಯೋಜನೆ ಆಗಬೇಕು. ಸಣ್ಣ ಪುಟ್ಟ ಪ್ರಕರಣಗಳು ಶೀಘ್ರ ವಿಲೇವಾರಿ ಆಗಬೇಕು. ಇಂಗ್ಲೆಂಡ್ ಮಾದರಿಯ ಜ್ಯೂರಿ ವ್ಯವಸ್ಥೆ ಅಳವಡಿಕೆ ಯಾಗಬೇಕು. ತಾಲೂಕಿಗೆ ಒಂದು ಕೋರ್ಟ್ ಸ್ಥಾಪನೆಯಾಗಬೇಕು, ದಂಡ ವಿಧಿಸುವ ಪ್ರಮಾಣ ಅಧಿಕವಾಗಬೇಕು. ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಸುವುದರಿಂದ ಅಪಘಾತ ಪ್ರಕರಣಗಳ ಪತ್ತೆ ಸುಲಭವಾಗಲಿದೆ.

ಅಪರಾಧಿಗಳಿಗಾಗಿ ಜಿಲ್ಲೆಗೆ ಒಂದರಂತೆ ಪುರ್ನವಸತಿ ಕೇಂದ್ರ ಆರಂಭ ಗೊಳ್ಳಬೇಕು. ನ್ಯಾಯಾಂಗವಿಚಾರಣೆ, ಪ್ರಕರಣಗಳ ತನಿಖೆಯಲ್ಲಿ ಮಾಧ್ಯಮ ಗಳಿಗೆ ಸ್ಪಷ್ಟ ನಿರ್ಬಂಧ ವಿಧಿಸಬೇಕು. ಸಾಧ್ಯವಾದಲ್ಲಿ ಪೊಲೀಸ್ ಠಾಣೆಗಳ ಹೆಸರನ್ನು ಬದಲಿಸಿ ಜನಸ್ನೇಹಿಗೊಳಿಸಿ ಎಂದು ಪ್ರೊ.ಮದ್ದೋಡಿ ಹೇಳಿದರು.

ನಂತರ ನಡೆದ ಸಂವಾದದಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪು ಗೊಳ್ಳಬೇಕು. ಪೊಲೀಸರಿಗೆ ವಾರಾಂತ್ಯದಲ್ಲಿ ಕಡ್ಡಾಯವಾಗಿ ಯೋಗ ಅಥವಾ ಮಾನಸಿಕ ಒತ್ತಡ ಕಡಿಮೆ ಮಾಡುವ ವ್ಯಾಯಾಮ ಅಳವಡಿಸಬೇಕು. ಪೊಲೀಸ್ ಜನಸಂಪರ್ಕ ಸಭೆಗಳು ನಡೆಯಬೇಕು. ಒಟ್ಟಿನಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ನೊಂದವರಿಗೆ ಪರಿಹಾರ ಒದಗಿಸುವ ಕೇಂದ್ರಗಳಾಗಿ ಪೊಲೀಸ್ ಠಾಣೆಗಳು ರೂಪುಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News