ಸಂಸದೆ ಶೋಭಾಗೆ ಕಪ್ಪು ಬಾವುಟ ಪ್ರದರ್ಶಿಸಲು ಯತ್ನ: ಕರಾವೆ, ಕೆಕೆವಿ ಕಾರ್ಯಕರ್ತರ ಬಂಧನ, ಬಿಡುಗಡೆ

Update: 2017-10-05 17:26 GMT

ಉಡುಪಿ, ಅ.5: ಅತ್ಯಂತ ದು:ಸ್ಥಿತಿಗೆ ತಲುಪಿ, ಜನರ ಜೀವಗಳಿಗೂ ಎರವಾಗುತ್ತಿರುವ ಮಲ್ಪೆ-ತೀರ್ಥಹಳ್ಳಿ ರಾ.ಹೆದ್ದಾರಿ 169ಎನ್ನು ದುರಸ್ತಿಗೊಳಿಸಲು ವಿಫಲರಾದ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಪ್ರಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಕಾರ್ಮಿಕ ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಇಂದು ಉಡುಪಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಶೋಭಾ, ಹೊಟೇಲ್ ಡಯಾನಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಎಸ್‌ಟಿ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುವಾಗ ‘ಸಂಸದೆಯಾಗಿ ನಿಷ್ಕೃಿಯರಾಗಿರುವ’ ಶೋಭಾಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟಿಸಲು ಇವರು ಮಾಡಿಕೊಂಡ ಸಿದ್ಧತೆಗಳನ್ನು ಪೊಲೀಸರು ವಿಫಲಗೊಳಿಸುವಲ್ಲಿ ಯಶಸ್ವಿಯಾದರು.

ಡಯಾನ ಹೊಟೇಲ್‌ನತ್ತ ಬರಲು ಪ್ರಯತ್ನಿಸಿದ ಕರಾವೆಯ ಅನ್ಸಾರ್ ಅಹ್ಮದ್ ಹಾಗೂ ಕೆಕೆವಿಯ ರವಿ ಶೆಟ್ಟಿ ಸೇರಿದಂತೆ 6-7ಮಂದಿ ಕಾರ್ಯಕರ್ತರನ್ನು ಅಜ್ಜರಕಾಡು ಬಳಿಯೇ ತಡೆದು ಬಂಧಿಸಿದ ಪೊಲೀಸರು, ಅವರನ್ನು ಪೊಲೀಸ್ ವ್ಯಾನಿನಲ್ಲಿ ತುಂಬಿ ನಗರ ಠಾಣೆಗೆ ಕರೆದೊಯ್ದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಶೋಭಾ ಕರಂದ್ಲಾಜೆ ವಿರುದ್ಧ ಘೋಷಣೆಗಳನ್ನು, ಧಿಕ್ಕಾರವನ್ನು ಕೂಗಿದರು.

ಶೋಭಾ ಅವರು ಸಂಸದೆಯಾಗಿ ತನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಇದರಿಂದ ಮಣಿಪಾಲದಿಂದ ಪರ್ಕಳದವರೆಗಿನ ರಸ್ತೆ ಸಂಚಾರಕ್ಕೆ ಅಸಾಧ್ಯ ರೀತಿಯಲ್ಲಿ ಹಾಳಾಗಿದೆ. ಇದರಿಂದ ಒಂದೂವರೆ ವರ್ಷದ ಮಗುವೊಂದು ಕಳೆದ ಸೋಮವಾರ ಪ್ರಾಣ ಕಳೆದು ಕೊಳ್ಳುವಂತಾಯಿತು ಎಂದವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News