ರೌಡಿಸಂ ಮತ್ತು ಮಾದಕ ದ್ರವ್ಯ ತಡೆಗೆ ವಿಶೇಷ ತಂಡ: ಸಚಿವ ಯು.ಟಿ.ಖಾದರ್‌

Update: 2017-10-06 14:49 GMT

ಮಂಗಳೂರು, ಅ. 6: ಉಳ್ಳಾಲ, ಕೊಣಾಜೆ, ನಾಗುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ಮತ್ತು ಮಾದಕ ಪದಾರ್ಥಗಳ ತಡೆಗೆ ವಿಶೇಷ ತಂಡ ರಚನೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶೇಷ ತಂಡ ರಚನೆಗೆ ಸಂಬಂಧಿಸಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿ ಚರ್ಚಿಸಿರುವುದಾಗಿ ತಿಳಿಸಿದರು.

ಮುಕ್ಕಚ್ಚೇರಿಯಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಲಾಗಿದೆ. ರೌಡಿಸಂ ಮತ್ತು ಮಾದಕ ವಸ್ತುಗಳ ಬಗ್ಗೆ ನಿಗಾ ವಹಿಸಿ ಅದನ್ನು ಮಟ್ಟಹಾಕಲಾಗುವುದು ಎಂದು ಖಾದರ್ ತಿಳಿಸಿದರು.

ಈಗಾಗಲೇ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ತಂಡ ಕಾಯಾಚರಣೆ ನಡೆಸುತ್ತಿದೆ. ಎಸಿಪಿ ನೇತೃತ್ವದ 7 ಮಂದಿಯ ವಿಶೇಷ ತಂಡವು ಉಳ್ಳಾಲ, ಕೊಣಾಜೆ ಮತ್ತು ನಾಗುರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಕಾರ್ಯಾಚರಿಸಲಿದೆ. ಸ್ಥಳೀಯರು, ಸಾರ್ವಜನಿಕರು, ಜನಪ್ರತಿಧಿಗಳು ಪೊಲೀಸರ ಕಾರ್ಯಾಚರಣೆಗೆ ಸಹಕಾರ ನೀಡಬೇಕು ಎಂದರು.

ಪ್ರಕರಣದ ಬಗ್ಗೆ ರಾಜಕೀಯ ಮಾಡಬಾರದು. ಮಾಫಿಯ ಮಟ್ಟ ಹಾಕಲು ರಾಜಕೀಯ ಇಚ್ಛಾಶಕ್ತಿ ಇಲ್ಲ ಎನ್ನುವ ಆರೋಪ ಸರಿಯಲ್ಲ. ಕಾಂಗ್ರೆಸ್ ಕೃತ್ಯಗಳನ್ನು ಬೆಂಬಲಿಸುವುದಿಲ್ಲ ಎಂದು ಖಾದರ್ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News