ಕಾರಂತ್ ಜಾಮೀನು ಅರ್ಜಿ ವಿಚಾರಣೆ: ಶನಿವಾರಕ್ಕೆ ಅಂತಿಮ ಆದೇಶ

Update: 2017-10-06 13:58 GMT

ಪುತ್ತೂರು, ಅ. 6: ಪುತ್ತೂರಿನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಮತ್ತು ಅವಹೇಳನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಷರತ್ತು ಬದ್ಧ ಮಧ್ಯಂತರ ಜಾಮೀನು ಪಡೆದುಕೊಂಡಿದ್ದ ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ಅವರು ಶುಕ್ರವಾರ ಪುತ್ತೂರಿನ ಎಸಿಜೆಎ ನ್ಯಾಯಾಲಯಕ್ಕೆ ಹಾಜರಾಗಿದ್ದು, ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶ ಪ್ರಕಟಣೆಯನ್ನು ಶನಿವಾರಕ್ಕೆ ಕಾಯ್ದಿರಿಸಿದೆ.

ಸಂಪ್ಯ ಠಾಣೆಯ ಎಸ್‌ಐ ಅಬ್ದುಲ್ ಖಾದರ್ ಮತ್ತು ಎಎಸ್‌ಐ ರುಕ್ಮಾ ಹಾಗೂ ಸಿಬ್ಬಂದಿ ಅವರಿಗೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಕಳೆದ ಸೆ.15ರಂದು ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಮತ್ತು ಅವಹೇಳನಕಾರಿ ಭಾಷಣ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟು ಕಳೆದ ಶುಕ್ರವಾರ ಷರತ್ತುಬದ್ದ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದ ಜಗದೀಶ್ ಕಾರಂತ ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಿದ್ದ ವೇಳೆ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ಈ ಹಿನ್ನಲೆಯಲ್ಲಿ ಜಗದೀಶ್ ಕಾರಂತ ಬುಧವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರೂ ವಕೀಲರ ಕಲಾಪ ಬಹಿಷ್ಕಾರ ಪ್ರತಿಭಟನೆಯ ಹಿನ್ನಲೆಯಲ್ಲಿ ಮತ್ತೆ ನ್ಯಾಯಾಲಯ ಜಾಮೀನು ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು.

ಮಧ್ಯಂತರ ಜಾಮೀನು ಷರತ್ತಿನಂತೆ ಕಳೆದ ಶುಕ್ರವಾರದಿಂದ ಪುತ್ತೂರು ನ್ಯಾಯಾಲಯ ವ್ಯಾಪ್ತಿಯಲ್ಲೇ ಉಳಿದುಕೊಂಡಿದ್ದ ಜಗದೀಶ್ ಕಾರಂತ ಬಿಜೆಪಿ ಸಂಘ ಪರಿವಾರದ ಸಂಘಟನೆಗಳ ಪ್ರಮುಖರಾದ ಅರುಣ್‌ಕುಮಾರ್ ಪುತ್ತಿಲ, ರತ್ನಾಕರ ಶೆಟ್ಟಿ , ರವಿರಾಜ್ ಶೆಟ್ಟಿ ಕಡಬ, ಸಚಿನ್ ರೈ ಪಾಪೆಮಜಲು, ಅಜಿತ್ ರೈ ಹೊಸಮನೆ ,ಸುಪ್ರೀತ್ ರೈ ಖಂಡಿಗ, ಸುರೇಶ್ ಆಳ್ವ ಸಾಂತ್ಯ ಮತ್ತಿತರರ ಜೊತೆ ಶುಕ್ರವಾರ ನ್ಯಾಯಾಲಯ ಆವರಣಕ್ಕೆ ಆಗಮಿಸಿ ಬಳಿಕ ತಮ್ಮ ಪರ ವಕೀಲರೊಂದಿಗೆ ಮೂರನೇ ಬಾರಿಗೆ ನ್ಯಾಯಾಲಯಕ್ಕೆ ಹಾಜರಾದರು.

ಜಗದೀಶ್ ಕಾರಂತ  ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಪುತ್ತೂರಿನ ಎಸಿಜೆಎ ನ್ಯಾಯಾಲಯದ ನ್ಯಾಯಾಧೀಶ ಕಿಶನ್.ಬಿ. ಮಡಲಗಿ  ಕೈಗೆತ್ತಿಕೊಂಡಿದ್ದು, ಜಗದೀಶ್ ಕಾರಂತ ರಿಗೆ ಜಾಮೀನು ಮಂಜೂರು ಮಾಡುವಂತೆ ಅವರ ಪರ ವಕೀಲರಾದ ಮಹೇಶ್ ಕಜೆ, ನರಸಿಂಹ ಪ್ರಸಾದ್, ಮುರಳೀಕೃಷ್ಣ, ಚಿನ್ಮಯ ರೈ ಮತ್ತು ಕಿಶೋರ್ ಕೊಳತ್ತಾಯ ವಾದ ಮಂಡಿಸಿದ್ದರು. ಪರ-ವಿರೋಧ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಜಾಮೀನು ಆದೇಶವನ್ನು ಶನಿವಾರಕ್ಕೆ ಕಾಯ್ದಿರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News