ದ.ಕ. ಜಿಲ್ಲೆಯ ಐದು ರಸ್ತೆಗಳು ಚತುಷ್ಪಥವಾಗಿ ಮೇಲ್ದರ್ಜೆಗೆ: ಸಂಸದ ನಳಿನ್

Update: 2017-10-06 14:39 GMT

ಮಂಗಳೂರು, ಅ.6: ಭಾರತ್ ಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ದೃಷ್ಟಿಯಿಂದ ದ.ಕ. ಜಿಲ್ಲೆಯ ಐದು ರಸ್ತೆಗಳು ಎನ್‌ಎಚ್‌ಎಐ ಹಾಗೂ ಹಾಗೂ ಕೇಂದ್ರ ಸರ್ಕಾರದ ಪಿಡಬ್ಲೂಡಿ ಇಲಾಖೆಗಳ ಮೂಲಕ ಚತುಷ್ಪಥ ರಸ್ತೆಗಳಾಗಿ ಮೇಲ್ದರ್ಜೆಗೇರಲಿವೆೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಂಸದರ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಸಚಿವ ಗಡ್ಕರಿಯವರ ಕನಸಿನಂತೆ ಹೈವೇ ಟು ಹೈ ವೇ ಕಲ್ಪಡನೆಯಡಿ, ಮೂಲ್ಕಿಯಿಂದ ಬಿ.ಸಿ.ರೋಡ್ ಹಾಗೂ ಮೆಲ್ಕಾರ್‌ನಿಂದ ತೊಕ್ಕೊಟ್ಟು ವರೆಗಿನ ಚತುಷ್ಪಥ ಕಾಮಗಾರಿಯ ಸಮೀಕ್ಷೆಗೆ ಅ.9ರಂದು ಮಧ್ಯಾಹ್ನ 2ಗಂಟೆಗೆ ಚಾಲನೆ ನೀಡಲಾುತ್ತದೆ ಎಂದು ಅವರು ಹೇಳಿದರು.

ಮುಲ್ಕಿಯಿಂದ ಎಸ್‌ಕೋಡಿ, ಕಟೀಲು, ಪಡುಪೆರಾರ, ಕೈಕಂಬ, ಪೊಳಲಿ ಕ್ರಾಸ್, ಕಲ್ಪನೆ, ಬಿಸಿರೋಡ್ ಹಾಗೂ ಮೆಲ್ಕಾರ್ ಮುಡಿಪು, ತೊಕ್ಕೊಟ್ಟು ವರೆಗೆ ಸರ್ವೇಯಾಗಿ ರಸ್ತೆ ನಿರ್ಮಾಣವಾಗಲಿದೆ. ಉಳಿದಂತೆ ಕಲ್ಲಡ್ಕದಿಂದ ವಿಟ್ಲ ಚೆರ್ವತ್ತೂರು ಮತ್ತು ಗುಂಡ್ಯದಿಂದ ಸುಬ್ರಹ್ಮಣ್ಯಕ್ಕೆ ರಸ್ತೆ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಆಗಿದ್ದು, ಕೇಂದ್ರ ಸರಕಾರದ ಪಿಡಬ್ಲೂಡಿ ಇಲಾಖೆ ಮೂಲಕ ಕೆಲಸ ನಡೆಯಲಿದೆ. ಬಂಟ್ವಾಳದಿಂದ ಸಿದ್ಧಕಟ್ಟೆಯಾಗಿ ಮೂಡುಬಿದಿರೆ ಸಂಪರ್ಕಿಸುವ ರಸ್ತೆಯೂ ಇದರಲ್ಲಿ ಸೇರಿದ್ದು, ಈ ರಸ್ತೆಗೆ ಟೆಂಡರ್ ಇನ್ನೂ ಆಗಿಲ್ಲ. ಈ ಎಲ್ಲ ರಸ್ತೆಗಳು ನಡುವೆ ವಿಭಾಜಕ ಇಲ್ಲದ 35 ಮೀ.ಅಗಲದ ರಸ್ತೆಯಾಗಿವೆ ಎಂದವರು ತಿಳಿಸಿದರು.

ಬಿಸಿರೋಡ್-ಗುಂಡ್ಯ ಕಾಂಕ್ರಿಟ್ ರಸ್ತೆಯ ಭೂಸ್ವಾಧೀನ ಪ್ರಕ್ರಿಯೆ

ಬಿಸಿರೋಡ್‌ನಿಂದ-ಗುಂಡ್ಯವರೆಗಿನ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಭೂ ಸ್ವಾಧೀನದ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಮೇ ಅಂತ್ಯದ ವೇಳೆಗೆ ಸುಮಾರು 15 ಕಿಮೀ ರಸ್ತೆ ಪೂರ್ಣಗೊಳ್ಳಲಿದೆ. 8 ತಿಂಗಳ ಹಿಂದೆಯೇ ಸಂತ್ರಸ್ತರಿಗೆ ಪರಿಹಾರ ನೀಡುವ ಕೆಲಸವೂ ನಡೆದಿದೆ. ಈ ರಸ್ತೆಯ ಸುಮಾರು 17 ಕಿಮೀ ಒತ್ತುವರಿಯಲ್ಲಿ ಅರಣ್ಯ ಇಲಾಖೆಯಿಂದ ಹಾಗೂ ಇತರ ಕೆಲವು ಸಮಸ್ಯೆಗಳಿದ್ದು ಅವುಗಳನ್ನು ಬಗೆಹರಿಸುವ ಭರವಸೆಯನ್ನು ಸಂಸದರು ನೀಡಿದರು.

ಪ್ಲೈಓವರ್ ನಿರ್ಮಾಣ ವಿಳಂಬ: ಅಸಮಾಧಾನ

ನಗರದ ಪಂಪ್‌ವೆಲ್ ಹಾಗೂ ತೊಕ್ಕೊಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಪ್ಲೈಓವರ್ ಕಾಮಗಾರಿ ವಿಳಂಬವಾಗಿ ನಡೆಯುತ್ತಿರುವುದಕ್ಕೆ ಸಂಸದ ನಳಿನ್‌ರವರು ನವಯುಗ್ ನಿರ್ಮಾಣ ಸಂಸ್ಥೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ತರಾಟೆಗೈದರು.  ಕಾಮಗಾರಿ ಸ್ಥಳದಲ್ಲಿಯೂ ಸರ್ವೀಸ್ ರಸ್ತೆ ಗುಂಡಿ ಬಿದ್ದಿದ್ದು, ಗುಂಡಿ ಮುಚ್ಚುವ ಕೆಲಸವನ್ನು ಶೀಘ್ರ ವಾಗಿ ಮುಗಿಸಲುವಂತೆ ಆದೇಶಿಸಿದರು.

ಈ ತಿಂಗಳೊಳಗೆ ಗುಂಡಿ ಮುಚ್ಚಿ: ನಳಿನ್
ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಹೊಂಡಗುಂಡಿಗಳಾಗಿದ್ದು, ಅವುಗಳನ್ನು ಅಕ್ಟೋಬರ್ ಅಂತ್ಯದೊಳಗೆ ಮುಚ್ಚಬೇಕೆಂದು ಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್ಸನ್ ವಿಜಯ್ ಕುಮಾರ್, ಇಂಜಿನಿಯರ್ ಅಜಿತ್ ಕುಮಾರ್, ನವಯುಗ ನಿರ್ಮಾಣ ಸಂಸ್ಥೆಯ ಅಧಿಕಾರಿಗಳು, ಎಲ್‌ಆ್ಯಂಟ್‌ಟಿ ಅಧಿಕಾರಿಗಳು ಉಪಸ್ಥಿತರಿದ್ದರು.

ಅ.16ರಂದು ಪಡೀಲ್ ಕೆಳಸೇತುವೆ ಉದ್ಘಾಟನೆ
ಪಡೀಲ್‌ನಲ್ಲಿ ವಾಹನ ಸವಾರರ ಪರದಾಟಕ್ಕೆ ಕೊನೆಗೂ ಮುಕ್ತಿ ಸಿಗುವ ಹಂತಕ್ಕೆ ಬಂದಿದ್ದು, ನೂತನವಾಗಿ ನಿರ್ಮಾಣವಾದ ರೈಲ್ವೆ ಕೆಳಸೇತುವೆ ಅ.16ರಂದು ಉದ್ಘಾಟನೆಗೆ ದಿನ ನಿಗದಿ ಪಡಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದರು.

ಹೊಸ ಸೇತುವೆ ಉದ್ಘಾಟನೆ ಬಳಿಕ ಈಗಿರುವ ಹೆದ್ದಾರಿ ರಸ್ತೆಯನ್ನು ಬಂದ್ ಮಾಡಲಾಗುವುದು. ರಸ್ತೆಯನ್ನು ದುರಸ್ತಿಗೊಳಿಸುವುದರ ಜತೆಗೆ ರೈಲು ಹಾದುಹೋಗುವಾಗ ಯಾವುದೇ ಗಲೀಜು ಕೆಳಗೆ ಬೀಳಬಾರದೆಂದು ಕಾಂಕ್ರೀಟ್ ಸ್ಲಾಬ್ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News