ಫಲಿಮಾರು ಪರ್ಯಾಯ: ಕಾರ್ಯಾಲಯ, ವೆಬ್‌ಸೈಟ್ ಉದ್ಘಾಟನೆ

Update: 2017-10-06 16:30 GMT

ಉಡುಪಿ, ಅ.6: ಮುಂದಿನ ಜನವರಿ 18ರಂದು ನಡೆಯಲಿರುವ ಫಲಿಮಾರು ಮಠಾಧೀಶರ ಪರ್ಯಾಯ ಪೀಠಾರೋಹಣಕ್ಕಾಗಿ ಪಲಿಮಾರು ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಾಲಯ ಹಾಗೂ ವೆಬ್‌ಸೈಟ್‌ಗಳ ಉದ್ಘಾಟನೆ ಇಂದು ರಥಬೀದಿಯಲ್ಲಿರುವ ಉಡುಪಿ ಶ್ರೀ ಪಲಿಮಾರು ಮಠದ ವಿದ್ಯಾಮಾನ್ಯ ಸಭಾ ಭವನದಲ್ಲಿ ಇಂದು ಸಂಜೆ ನಡೆಯಿತು.

ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಲಯವನ್ನು ಉದ್ಘಾಟಿಸಿದ ಸಮಿತಿಯ ಗೌರವಾಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಪೇಜಾವರ ಶ್ರೀಗಳು ದಾಖಲೆಯ ಐದನೇ ಪರ್ಯಾಯದ ಕೊನೆಯ ಹಂತದಲ್ಲಿದ್ದು, ಇದೀಗ ನಾವು ಪಲಿಮಾರುಶ್ರೀಗಳ ಪರ್ಯಾಯಕ್ಕೆ ಸಿದ್ಧತೆಯನ್ನು ನಡೆಸಬೇಕಾಗಿದೆ ಎಂದರು.

ಉಡುಪಿಯ ಅಷ್ಟಮಠಗಳ ಪರ್ಯಾಯ ವ್ಯವಸ್ಥೆಯಿಂದಾಗಿ ಉಡುಪಿ ಇಂದು ನಿತ್ಯೋತ್ಸವದ ನಾಡಾಗಿದೆ. ಬತ್ತದ ಉತ್ಸಾಹದೊಂದಿಗೆ ಇಲ್ಲಿ ಎರಡು ವರ್ಷಗಳ ಪರ್ಯಾಯದಲ್ಲಿ ನಿರಂತರ ಕಾರ್ಯಕ್ರಮ ನಡೆಯುತ್ತಿವೆ. ಪರ್ಯಾಯ ಸಂದರ್ಭದಲ್ಲಿ ಉಡುಪಿಯ ಜನತೆ ಜಾತಿ-ಮತ-ಧರ್ಮವನ್ನು ಮರೆತು ಒಗ್ಗಟ್ಟಾಗಿ ಪಾಲ್ಗೊಂಡು ಇದನ್ನು ಯಶಸ್ವಿಗೊಳಿಸುತ್ತಾರೆ. ಪಲಿಮಾರು ಶ್ರೀಗಳ ಪರ್ಯಾಯವೂ ಇದೇ ರೀತಿ ಯಶಸ್ವಿಗೊಳ್ಳುವ ಭರವಸೆ ತಮಗಿದೆ ಎಂದರು.
ಶ್ರೀಪಲಿಮಾರುಶ್ರೀಗಳು ಮುಗ್ದ ಹೃದಯ ಯತಿಯಾಗಿದ್ದಾರೆ. ಒಬ್ಬ ಸಂತನಿಗೆ ಇರಬೇಕಾದ ಹಗುರವಾದ ಅಂತ:ಕರಣವಿದೆ.ಅವರ ಪರ್ಯಾಯವೂ ಜನಪರ ಪರ್ಯಾಯವಾಗಲಿದೆ ಎಂಬ ವಿಶ್ವಾಸ ತಮಗಿದೆ. ಜಗತ್ತಿನಲ್ಲಿ ಇಂದು ಕಲುಷಿತ ವಾತಾವರಣವಿದೆ. ಆಧುನಿಕತೆಯ ಭರಾಟೆಗೆ ಸಿಲುಕಿದ ಯುವ ವರ್ಗದಲ್ಲಿ ಮೂಲಸತ್ವ ಉಳಿದುಕೊಳ್ಳುವಂತೆ ಮಾಡಬೇಕಾಗಿದೆ ಎಂದರು.

ಅಭೂತಪೂರ್ವವಾಗಿ ನಡೆಯುವ ಪರ್ಯಾಯ ಮೆರವಣಿಗೆಯಲ್ಲಿ ಸಮಯೋಚಿತ ಸಂದೇಶಗಳನ್ನು ನೀಡಬೇಕು. ನೀರಿನ ಸದ್ಭಳಕೆಯ ಕುರಿತು ಜಾಗೃತಿ, ಪ್ರಕೃತಿ ರಕ್ಷಣೆಯ ಸಂದೇಶ, ಭಾರತೀಯತೆ ಉಳಿಸಿಕೊಳ್ಳುವ ಸಂದೇಶವನ್ನು ಇದರಲ್ಲಿ ಸಾರಬೇಕು ಎಂದವರು ಸಲಹೆ ನೀಡಿದರು.

ಪಲಿಮಾರು ಪರ್ಯಾಯ ವೆಬ್‌ಸೈಟ್‌ನ್ನು ಉದ್ಘಾಟಿಸಿದ ಸಮಿತಿಯ ಪ್ರಧಾನ ಮಾರ್ಗದರ್ಶಕರಾದ ಡಾ.ಮೋಹನ್ ಆಳ್ವ ಮಾತನಾಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರೂ ಏಕಚಿತ್ತದಿಂದ ಕೆಲಸ ಮಾಡಿ ಈ ಬಾರಿಯ ಪರ್ಯಾಯವನ್ನು ಯಶಸ್ವಿಗೊಳಿಸೋಣ ಎಂದರು.

ಈ ಸಂದರ್ಭದಲ್ಲಿ ಕಟೀಲಿನ ಪ್ರಧಾನ ಅರ್ಚಕ ಹರಿನಾರಾಯಣ ಅಸ್ರಣ್ಣ, ಮಠದ ದಿವಾನ ವೇದವ್ಯಾಸ ತಂತ್ರಿ, ಸಮಿತಿಯ ಕಾರ್ಯಾಧ್ಯಕ್ಷರಾದ ಬಾಲಾಜಿ ರಾಘವೇಂದ್ರ ಆಚಾರ್ಯ ಹಾಗೂ ಸಮಿತಿಯ ಪದಾಧಿಕಾರಿಗಳಾದ ಮಟ್ಟು ಲಕ್ಷ್ಮೀನಾರಾಯಣ ರಾವ್, ರಮೇಶ್ ರಾವ್ ಬೀಡು, ಪದ್ಮನಾಭ ಭಟ್, ಪ್ರಹ್ಲಾದ ರಾವ್ ಉಪಸ್ಥಿತರಿದ್ದರು.

ಬಾಲಾಜಿ ರಾಘವೇಂದ್ರ ಆಚಾರ್ಯ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ಪ್ರೊ.ಎಂ.ಎಲ್.ಸಾಮಗ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News