ಏಕರೂಪದ ಮರಳು ದರ ನಿಗದಿಗೆ ಮನವಿ

Update: 2017-10-06 16:36 GMT

ಉಡುಪಿ, ಅ.6: ಜಿಲ್ಲೆಯಲ್ಲಿ ಮರಳಿಗೆ ಏಕರೂಪದ ದರ ನಿಗದಿ ಪಡಿಸಿ, ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮರಳು ಸಿಗುವಂತೆ ಮಾಡಬೇಕು ಎಂದು ಜಯಕರ್ನಾಟಕ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ಒತ್ತಾಯಿಸಿದೆ.

ಸಂಘಟನೆಯ ಜಿಲ್ಲಾಧ್ಯಕ್ಷ ರಮೇಶ್ ಕೆ. ಶೆಟ್ಟಿ ನೇತೃತ್ವದ ನಿಯೋಗವೊಂದು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಉಡುಪಿ ತಾಲೂಕಿನಲ್ಲಿ ಮರಳು ಪ್ರತಿ ಯುನಿಟ್‌ಗೆ 1,700ರೂ.ಗಳಿದ್ದರೆ, ಅದೇ ಕುಂದಾಪುರ ಮತ್ತು ಬೈಂದೂರು ತಾಲೂಕುಗಳಲ್ಲಿ ಪ್ರತಿ ಯೂನಿಟ್‌ಗೆ 3,500ರೂ.ಗಳನ್ನು ನಿಗದಿ ಪಡಿಸಲಾಗಿದೆ. ಇದರಿಂದ ಬಡ ಕೂಲಿ ಕಾರ್ಮಿಕ ವರ್ಗದ ಜನರಿಗೆ ಬಹಳ ತೊಂದರೆ ಉಂಟಾಗಿದ್ದು, ಸರಕಾರ ನೀಡುವ 1.50 ಲಕ್ಷ ರೂ. ಮೊತ್ತದಲ್ಲಿ ಮರಳು ಪಡೆಯಲು ಕಷ್ಟವಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಆದುದರಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲೆಯಾದ್ಯಂತ ಏಕರೂಪದ ದರವನ್ನು ನಿಗದಿ ಪಡಿಸಿ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮರಳು ಸಿಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಸಂಘಟನೆಯ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ನಿಯೋಗದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ನಿರಂಜನ್ ಹೆಗ್ಡೆ, ಬಿ.ಸುಧಾಕರ ರಾವ್, ನಿತ್ಯಾನಂತ ಅಮೀನ್, ಕರುಣಾಕರ ಪೂಜಾರಿ, ಅಕ್ಬರ್ ಪಾಶಾ, ವೇದಾವತಿ ಪ್ರತಾಪ್‌ಚಂದ್ರ ಹೆಗ್ಡೆ, ಅಣ್ಣಪ್ಪ ಕುಲಾಲ್, ಜಯಶ್ರೀ ಶಿವರಾಮ್, ಶರತ್ ಶೆಟ್ಟಿ, ಸುಬ್ರಹ್ಮಣ್ಯ ಪೂಜಾರಿ ಬೈಂದೂರು, ವೀರಭದ್ರ ಗಾಣಿಗ ಮುಂತಾ ದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News