ಕುಮಾರವ್ಯಾಸನ ಬಳಿಕ ಎಲ್ಲರ ಮನಸ್ಸಿನಲ್ಲಿ ನೆಲೆನಿಂತ ಕವಿ ಪಾರ್ತಿಸುಬ್ಬ: ಡಾ.ಪ್ರಭಾಕರ ಜೋಶಿ

Update: 2017-10-08 07:35 GMT

ಕಾಸರಗೋಡು, ಅ.7: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಯಕ್ಷಗಾನ ಕವಿಗಳನ್ನು ಅಲಕ್ಷಿಸಿದ್ದು ಬಹುದೊಡ್ಡ ದುರಂತ. ಯಕ್ಷಗಾನ ಕವಿಗಳನ್ನು ಪ್ರಾದೇಶಿಕಗೊಳಿಸಿ ಅವರನ್ನು ಒಂದು ವಲಯಕ್ಕೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ಪಾರ್ತಿ ಸುಬ್ಬನಂತಹ ಯಕ್ಷಗಾನ ಕವಿಗಳಿಗೆ ಕುಮಾರವ್ಯಾಸ, ರತ್ನಾಕರವರ್ಣಿಯವರಂತಹ ಕವಿಶ್ರೇಷ್ಠರ ಮನ್ನಣೆ ಸಿಗಲೇಬೇಕಾಗಿದೆ. ಯಾಕೆಂದರೆ ಕುಮಾರವ್ಯಾಸನ ಬಳಿಕ ಜನಮಾನಸದಲ್ಲಿ ಅಚ್ಚಳಿಯದೆ ನೆಲೆನಿಂತ ಮತ್ತೊಬ್ಬ ಕವಿ ಪಾರ್ತಿಸುಬ್ಬ ಎಂದು ಯಕ್ಷಗಾನದ ಹಿರಿಯ ಅರ್ಥಧಾರಿ, ವಿದ್ವಾಂಸ, ಡಾ. ಎಂ. ಪ್ರಭಾಕರ ಜೋಶಿ ಅಭಿಪ್ರಾಯ ಪಟ್ಟರು. \

ಡಾ.ಪಿ.ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ ಇದರ ಪ್ರಾಯೋಜಕತ್ವದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಸಹಕಾರದೊಂದಿಗೆ ನಡೆದ ಯಕ್ಷಕವಿ ಕಾವ್ಯಯಾನ ವಿಶೇಷೋಪಾನ್ಯಾಸ ಕಾರ್ಯಕ್ರಮದಲ್ಲಿ ಅವರು ಯಕ್ಷಗಾನ ಮತ್ತು ಪಾರ್ತಿಸುಬ್ಬ ಎಂಬ ವಿಷಯದಲ್ಲಿ ಮಾತನಾಡುತ್ತಿದ್ದರು.

ತೆಂಕುತಿಟ್ಟು ಯಕ್ಷಗಾನಕ್ಕೆ ಸುಂದರ ಚೌಕಟ್ಟನ್ನು ಪಾರ್ತಿಸುಬ್ಬ ನಿರ್ಮಿಸಿದ್ದಾನೆ. ಹಾಗೆ ನಿರ್ಮಿಸುವಲ್ಲಿ ಅವನಿಗೆ ರಾಮನಾಟಂ, ಕಥಕ್ಕಳಿ ಈ ಮುಂತಾದ ಕಲೆಗಳ ಪ್ರಭಾವವಾಗಿವೆ. ಅದೇರೀತಿ ಜೈಮಿನಿ ಭಾರತ, ತೊರವೆ ರಾಮಾಯಣ, ಕೃಷ್ಣ ಚರಿತೆ ಈ ಮುಂತಾದ ಕೃತಿಗಳಿಂದ ಪಾರ್ತಿಸುಬ್ಬ ಪ್ರಭಾವಿತನಾಗಿದ್ದಾನೆ. ರಾಮನಾಟಂನ ದಟ್ಟ ಪ್ರಭಾವ ಪಾರ್ತಿಸುಬ್ಬನ ಪ್ರಸಂಗಗಳಲ್ಲಿ ದಟ್ಟವಾಗಿದ್ದು ವೃತ್ತಗಳ ಬಳಕೆ, ಮಣಿಪ್ರವಾಳ ಶೈಲಿಗಳು ಅದನ್ನು ರುಜುಗೊಳಿಸುತ್ತವೆ. ಪಾರ್ತಿಸುಬ್ಬನ ಕಾಲ ಮತ್ತು ದೇಶದ ಕುರಿತು ಬಹುದೊಡ್ಡ ಚರ್ಚೆಯಾಗಿದ್ದು, ಇದರಿಂದ ಯಕ್ಷಗಾನಕ್ಕೆ ಲಾಭವೇ ಆಯಿತು. ಕವಿ ಪರಿಚಯ ನಾಡಿಗಾಯ್ತು ಎಂದು ಡಾ. ಎ. ಪ್ರಭಾಕರ ಜೋಶಿ ನುಡಿದರು.

‘ಯಕ್ಷಗಾನ ಮತ್ತು ಕೀರಿಕ್ಕಾಡು ವಿಷ್ಣು ಮಾಸ್ಟರ್’ ಎಂಬ ವಿಷಯದಲ್ಲಿ ಯಕ್ಷಗಾನ ಅರ್ಥಧಾರಿ, ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗಣರಾಜ ಕುಂಬಳೆ ಮಾತನಾಡಿ; ಕೀರಿಕ್ಕಾಡು ವಿಷ್ಣು ಮಾಸ್ಟರ್ ಕುಗ್ರಾಮದಿಂದ ಬೆಳೆದು ಬಂದ ಅನನ್ಯ ಪ್ರತಿಭೆ. ಕೇವಲ ಐದನೇ ತರಗತಿಯ ಔಪಚಾರಿಕ ಶಿಕ್ಷಣ ಪಡೆದ ಅವರು, ಶಾಲಾ ಮಕ್ಕಳಿಗೆ ಮಾತ್ರವಲ್ಲದೆ, ಊರಿಗೆ, ಯಕ್ಷಗಾನ ಕ್ಷೇತ್ರಕ್ಕೆ ಮಾಸ್ಟರ್ ಆದರು. ಸುಮಾರು ಎಂಬತ್ತೆಂಟರಷ್ಟು ಯಕ್ಷಗಾನ ಪ್ರಸಂಗಗಳನ್ನು, ಮೂರು ಕಾದಂಬರಿಗಳನ್ನು, ಕವನ ಸಂಕಲನಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ ಅವರು ಯಕ್ಷಗಾನ ಅರ್ಥಧಾರಿಯಾಗಿ, ವೇಷಧಾರಿಯಾಗಿ ಮಾಡಿದ ಸೇವೆ ಗಮನಾರ್ಹ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಅರವಿಂದ ಕೃಷ್ಣನ್, ಕಥಕ್ಕಳಿ ಮತ್ತು ಯಕ್ಷಗಾನಕ್ಕೆ ಹಲವು ಸಾಮ್ಯತೆಗಳಿದ್ದರೂ ಕಥಕ್ಕಳಿಯು ವಿದ್ವಾಂಸರಿಗೆ ಮಾತ್ರ ಸೀಮಿತವಾದ ಕಲೆ. ಆದರೆ ಯಕ್ಷಗಾನವು ಸಂಭಾಷಣೆಯ ಮೂಲಕ ಜನಪದರನ್ನು ತಲುಪಿದ ಕಲೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ಯಕ್ಷಗಾನ ಅರ್ಥಧಾರಿ ಡಾ. ರಮಾನಂದ ಬನಾರಿ ಮಾತನಾಡಿ, ಯಕ್ಷಗಾನ ಕವಿಗಳ ಮಹತ್ವವನ್ನು, ಯಕ್ಷಗಾನ ಸಾಹಿತ್ಯ ಮೌಲ್ಯವನ್ನು ಹೊಸ ತಲೆಮಾರಿಗೆ ತಿಳಿಸುವ ಯಕ್ಷಕವಿ ಕಾವ್ಯಯಾನ ಸರಣಿ ಕಾರ್ಯಕ್ರಮವು ಅರ್ಥಪೂರ್ಣವಾದುದು. ಪಾರ್ತಿಸುಬ್ಬನು ಹಾಕಿ ಕೊಟ್ಟ ಪಥದಲ್ಲಿ ಬೆಳೆದು ಬಂದ ಹಲವಾರು ಯಕ್ಷಗಾನ ಕವಿಗಳು ತಾವು ಬೆಳೆದು, ಯಕ್ಷಗಾನವನ್ನು ಬೆಳೆಸಿದರು. ಕೀರಿಕ್ಕಾಡು ವಿಷ್ಣು ಮಾಸ್ಟರ್ ಕೂಡ ಅಂತಹ ಪ್ರಮುಖರಲ್ಲಿ ಒಬ್ಬರು ಎಂದರು.

ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತಾ ಎಸ್. ಶುಭಾಶಂಸನೆ ಮಾಡಿದರು. ದಿತಿ ಜಿ.ಬಿ., ಪವಿತ್ರಾ ಇ., ಸುನೀತಾ ಬಿ., ಅನುರಾಧಾ ಕೆ., ವೃಂದಾ ಬಿ.ಜಿ., ಕಾವ್ಯಾ ಪಿ., ಶ್ರಧ್ಧಾ ಭಟ್ ನಾಯರ್ಪಳ್ಳ ಇವರಿಂದ ಯಕ್ಷಕಾವ್ಯಯಾನ ನಡೆಯಿತು.

 ಅಡೂರು ಉಮೇಶ್ ನಾಯಕ್, ತೆಕ್ಕೆಕರೆ ಶಂಕರನಾರಾಯಣ ಭಟ್, ಎಸ್.ವಿ.ಭಟ್, ರಾಧಾಕೃಷ್ಣ ಕೆ. ಉಳಿಯತಡ್ಕ, ದಿವ್ಯಾ ಉಪಸ್ಥಿತರಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೊಜಕ ಡಾ.ಧನಂಜಯ ಕುಂಬಳೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಸಂಯೋಜಕ ಡಾ.ರತ್ನಾಕರ ಮಲ್ಲಮೂಲೆ ಸ್ವಾಗತಿಸಿದರು. ಡಾ ರಾಧಾಕೃಷ್ಣ ಬೆಳ್ಳೂರು ವಂದಿಸಿದರು. ಉಪನ್ಯಾಸಕಿ ಬಬಿತಾ ಎ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News