ಬಡ್ಡೂರು: ಗ್ರಾಮಸ್ಥರಿಂದ ತಡೆಗೋಡೆ ನಿರ್ಮಿಸಿ ಪ್ರತಿಭಟನೆ

Update: 2017-10-08 17:39 GMT

ಮಂಗಳೂರು, ಅ.8: ಮೇರಮಜಲು ಗ್ರಾಪಂ ವ್ಯಾಪ್ತಿಯ ಬಡ್ಡೂರು ಕೋರ್ದಬ್ಬು ದೇವಸ್ಥಾನದ ಬಳಿಯ ರಸ್ತೆ ಸಂಪರ್ಕ ಪೂರ್ಣಗೊಳಿಸದ ಗ್ರಾಪಂ ಕ್ರಮವನ್ನು ಖಂಡಿಸಿ ಗ್ರಾಮಸ್ತರು ತಡೆಗೋಡೆ ನಿರ್ಮಿಸಿ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ಘಟನೆ ರವಿವಾರ ನಡೆದಿದೆ.

ಬಡ್ಡೂರ್‌ನಿಂದ ಪಕ್ಕಲಪಾದೆಯವರೆಗೆ ರಸ್ತೆ ರಚಿಸಿ 5 ವರ್ಷ ಕಳೆದರೂ ಕೂಡ 4-5 ಮನೆಗಳಿಗೆ ಮಾತ್ರ ಈ ರಸ್ತೆ ಉಪಯೋಗಕ್ಕೆ ಸಿಗುತ್ತಿದೆ. ಉಳಿದ ಸುಮಾರು 200 ಮನೆಗಳಿಗೆ ಈ ರಸ್ತೆ ಸಂಪರ್ಕವು ಮರೀಚಿಕೆಯಾಗಿ ಪರಿಣಮಿಸಿದೆ. ಗ್ರಾಮಸ್ಥರು ಈ ರಸ್ತೆಯನ್ನು ಸಮರ್ಪಕವಾಗಿ ಸಂಪರ್ಕಗೊಳಿಸಬೇಕು ಎಂದು ಒತ್ತಾಯಿಸುತ್ತಾ ಬಂದಿದ್ದರೂ ಕೆಲವು ಪಟ್ಟಭದ್ರ ಹಿತಾಶಕ್ತಿಗಳ ಕುಮ್ಮಕ್ಕಿನಿಂದ ರಸ್ತೆ ಜೋಡಣೆಯಾಗದೆ ಉಳಿದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಮಸ್ಥರ ಈ ಬೇಡಿಕೆಗೆ ಗ್ರಾಪಂ ಸ್ಪಂದಿಸದ ಕಾರಣ ಬಡ್ಡೂರು ದೇವಸ್ಥಾನದ ಬಳಿಯ ರಸ್ತೆಗೆ ತಡೆಗೋಡೆ ನಿರ್ಮಿಸಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವವನ್ನು ಸ್ಥಳೀಯರಾದ ಚಂದ್ರ ಪಕ್ಕಲಪಾದೆ, ಪೂರ್ಣಿಮಾ ಪಕ್ಕಲಪಾದೆ, ಪುಷ್ಪಾ ಬಡ್ಡೂರು, ಲ್ಯಾನ್ಸಿ ಸಲ್ದಾನಾ, ಇಮ್ತಿಯಾಝ್ ಮುಳ್ಳಗುಡ್ಡೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News