ಸರಕಾರದ ಸಾಧನೆ ಸಹಿಸದೆ ಅಪಪ್ರಚಾರ, ಕೋಮು ಘರ್ಷಣೆ, ಹಿಂಸೆಯ ಮೊರೆ ಹೋದ ಬಿಜೆಪಿ - ಸಚಿವ ರೈ

Update: 2017-10-09 09:04 GMT

ಮಂಗಳೂರು, ಅ.9: ರಾಜ್ಯ ಸರಕಾರದ ಸಾಧನೆ ಸಹಿಸದೆ ಅಪಪ್ರಚಾರ, ಕೋಮು ಘರ್ಷಣೆ, ಹಿಂಸೆ , ಅನೈತಿಕ ಪೊಲೀಸ್ ಗಿರಿಗೆ ಬಿಜೆಪಿ ಮೊರೆ ಹೋಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮೊದಲು ಚುನಾವಣೆಯ ಸಂದರ್ಭದಲ್ಲಿ ನೀಡಿದ ಪ್ರಣಾಳಿಕೆಯ ಶೇ. 95ಕ್ಕೂ ಅಧಿಕ ಭರವಸೆ ಈಡೇರಿಸಿದೆ. ಪ್ರಣಾಳಿಕೆಯಲ್ಲಿ ನೀಡದ ಸಾಲಮನ್ನಾದಂತಹ ಕೆಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇವುಗಳನ್ನು ಸಹಿಸಿಕೊಳ್ಳಲು ಆಗದ ಬಿಜೆಪಿಯ ಸ್ಥಿತಿ ನೀರಿನಿಂದ ಹೊರತೆಗೆದ ಮೀನಿನಂತೆ ಆಗಿದೆ. ಆ ಕಾರಣದಿಂದ ಕಾಂಗ್ರೆಸ್ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕೋಮು ಘರ್ಷಣೆ ಸೃಷ್ಟಿಸಲು ಉದ್ದೇಶ ಪೂರ್ವಕವಾಗಿ ಅಮಾಯಕರ ಕೊಲೆ, ಹಿಂಸೆಗಳಲ್ಲಿ ತೊಡಗಿದ್ದಾರೆ.  ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ ಗಿರಿಯಲ್ಲಿ ಸಂಘ ಪರಿವಾರ ತೊಡಗಿಕೊಂಡಿದೆ ಎಂದು ರಮಾನಾಥ ರೈ ಟೀಕಿಸಿದರು.

ಬಿಜೆಪಿಗೆ ಕರಾವಳಿಯಲ್ಲಿ ನೆಲೆ ಕಳೆದುಕೊಳ್ಳುವ ಭೀತಿ:- ಕರಾವಳಿಯಲ್ಲಿ ಬಿಜೆಪಿಗೆ ಭದ್ರತೆಯ ವಾತಾವರಣ ಮಾಯವಾಗಿದೆ. ನಿಗದಿಯಾಗಿದ್ದ ಅಮಿತ್ ಶಾ ಕಾರ್ಯಕ್ರಮ ಇದ್ದಕ್ಕಿದ್ದಂತೆ ರದ್ದಾಗಿದೆ. ನೆಲೆ ಕಳೆದುಕೊಳ್ಳುವ ಭೀತಿ ಆರಂಭವಾಗಿದೆ ಅದಕ್ಕಾಗಿ ಕೋಮು ಹಿಂಸೆಯ ರಾಜಕೀಯದಲ್ಲಿ ತೊಡಗಿದ್ದಾರೆ.

ವಿನಾಯಕ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಜೊತೆ ಬಿಜೆಪಿ ಮುಖಂಡರು ಹಲ್ಲು ಗಿಂಜುತ್ತಾ ತಿರುಗಾಡುತ್ತಿದ್ದಾರೆ. ಹರೀಶ್ ಪೂಜಾರಿ ಕೊಲೆ, ಕಾರ್ತಿಕ್ ರಾಜ್ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಆರೋಪ ಹೊರಿಸಲಾಯಿತು. ಆದರೆ ತನಿಖೆಯ ಬಳಿಕ ಸತ್ಯ ಜನರಿಗೆ ಗೊತ್ತಾಗಿದೆ. ಈ ರೀತಿಯ ಕೃತ್ಯಗಳೊಂದಿಗೆ ಬಿಜೆಪಿ ರ್ಯಾಡಿಕಲ್‌ಗಳ ಕೂಟವಾಗಿ ಪರಿವರ್ತನೆ ಗೊಂಡಿದೆ. ಅಲ್ಲಿ ಯಾರು ಇಂತಹ ಕೃತ್ಯಗಳಲ್ಲಿ ಹೆಚ್ಚು ತೊಡಗುತ್ತಾರೆ ಅಂತಹವರಿಗೆ ಪಕ್ಷದಲ್ಲಿ ದೊಡ್ಡ ಹುದ್ದೆ,  ಕಡಿಮೆ ಕೃತ್ಯ ಮಾಡಿದವರಿಗೆ ಹಂತ ಹಂತವಾಗಿ ವಿವಿಧ ಹುದ್ದೆಗಳನ್ನು ನೀಡಲಾಗುತ್ತಿದೆ. ಕೇರಳದಲ್ಲಿ ಅಮಿತ್‌ ಶಾ ಮುಖ್ಯ ಮಂತ್ರಿಯ ರಾಜೀನಾಮೆ ಕೇಳಲು ಹೊರಟಿದ್ದಾರೆ. ಗುಜರಾತಿನಲ್ಲಿ ಮೋದಿ ಮುಖ್ಯ ಮಂತ್ರಿಯಾಗಿದ್ದಾಗ, ಅಮಿತ್ ಶಾ ಸಚಿವ ರಾಗಿದ್ದಾಗ ನರಮೇದ ನಡೆದ ಸಂದರ್ಭದಲ್ಲಿ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆಯೇ ?ಎಂದು ರಮಾನಾಥ ರೈ ಪ್ರಶ್ನಿಸಿದರು.

ಮುಖ್ಯಮಂತ್ರಿ ಆದಿತ್ಯನಾಥ್ ಕರ್ನಾಟಕ ರಾಜ್ಯದ ಬಗ್ಗೆ ಟೀಕೆ ಮಾಡುವ ಮೊದಲು ಉ.ಪ್ರ.ದಲ್ಲಿ ಉತ್ತಮ ಆಡಳಿತ ನೀಡಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕರ್ನಾಟಕ ರಾಜ್ಯದ ಬಗ್ಗೆ ಟೀಕೆ ಮಾಡುವ ಮೊದಲು ಯು.ಪಿಯಲ್ಲಿ ಉತ್ತಮ ಆಡಳಿತ ನೀಡಲಿ. ಅವರ ಆಡಳಿತದಲ್ಲಿ ಮಕ್ಕಳು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ನಿರಂತವಾಗಿ ನಡೆಯುತ್ತಿದೆ. ಬೇಟಿ ಬಚಾವೋ ಬೇಡಿ ಪಡಾವೋ ಎನ್ನುವ ಬಿಜೆಪಿ ಮುಖಂಡರ ಆಡಳಿತ ಇರುವ ರಾಜ್ಯದಲ್ಲಿ ಮಹಿಳೆಯರ, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಅದನ್ನು ಆದಿತ್ಯನಾಥ್ ತಡೆಯಲಿ ಎಂದು ರಮಾನಾಥ ರೈ ಯೋಗಿ ಆದಿತ್ಯನಾಥ್ ಟೀಕೆಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಹಿಂದು ಧರ್ಮದ ರಕ್ಷಣೆ ಮುತಾಲಿಕ್‌ಗೆ ಪಾರುಪತ್ಯ ವಹಿಸಲು ಮುತಾಲಿಕ್ ಯಾರು..? :- ಹಿಂದು ಧರ್ಮದ ಹೆಸರಿನಲ್ಲಿ ಜನರು ಏನು ಮಾಡಬೇಕು ಎನ್ನಲು ಮುತಾಲಿಕ್ ಯಾರು..? ಹಿಂದು ಧರ್ಮ ರಕ್ಷಣೆಯ ಪಾರುಪತ್ಯ ಮುತಾಲಿಕ್‌ ಗೆ ನಿಡಲಾಗಿದೆಯೇ ..? ಜನಸಾಮಾನ್ಯರ ಬಳಿಗೆ ತೆರಳಿ ಅವರ ಅಗತ್ಯಗಳಿಗೆ ಸ್ಪಂದಿಸಿ ಸಹಾಯ ಮಾಡಿ ನಾಯಕರಾಗುವುದು ಕಷ್ಟದ ದಾರಿ. ಅದಕ್ಕಾಗಿ ಕೆಲವರು ಕೆಟ್ಟ ಕೆಲಸ ಮಾಡಿಯಾದರೂ ಹೆಸರು ಪಡೆಯಲು ಪ್ರಯತ್ನಿಸುತ್ತಾರೆ. ಅಂತಹ ವ್ಯಕ್ತಿಗಳ ಬಗ್ಗೆ ಮಾತನಾಡಿದರೆ ಅವರಿಗೆ ಇನ್ನಷ್ಟು ಪ್ರಚಾರ ಸಿಗುತ್ತದೆ. ಅದೇ ಅವರಿಗೆ ಬೇಕಾಗಿರುವುದು. ಜನರ ಹಿತವಲ್ಲ ಎಂದು ರಮಾನಾಥ ರೈ ಟೀಕಿಸಿದರು.

ಜಿಲ್ಲೆಯಲ್ಲಿ ರೌಡಿ ನಿಗ್ರಹ, ಮಾದಕ ದ್ರವ್ಯ ಬಳಕೆ ನಿಗ್ರಹಕ್ಕೆ ವಿಶೇಷ ಪೊಲೀಸ್ ತಂಡ ರಚನೆ ಆಗಿದೆ. ಮಾದಕ ಪದಾರ್ಥ ಮಾರಾಟ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಗಲೂ ಇತ್ತು ಈಗಲೂ ಇದೆ ಅದರ ನಿಯಂತ್ರಣಕ್ಕೆ ಸರಕಾರ ವಿಶೇಷ ಪ್ರಯತ್ನ ನಡೆಸುತ್ತಿದೆ ಎಂದು ರಮಾನಾಥ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮನಪಾ ಮೇಯರ್ ಕವಿತಾ ಸನಿಲ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಜಿಲ್ಲಾ ಕಾಂಗ್ರೆಸ್‌ನ ಮುಖಂಡರಾದ ಕೋಡಿಜಾಲ್ ಇಬ್ರಾಹೀಂ, ಶಶಿಧರ ಹೆಗ್ಡೆ, ನವೀನ್ ಡಿ ಸೋಜಾ, ಯುವ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ವಿಶ್ವಾಸ್ ದಾಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News