ಮಡಿವಾಳ ಸಮುದಾಯದಿಂದ ಹೋರಾಟದ ಎಚ್ಚರಿಕೆ

Update: 2017-10-09 14:37 GMT

ಪುತ್ತೂರು, ಅ. 9: ರಾಜ್ಯದಲ್ಲಿ ಸುಮಾರು 15ರಿಂದ18 ಲಕ್ಷದಷ್ಟು ಇರುವ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಗೆ ಈ ತನಕ ಸ್ಪಂದನೆ ಸಿಗದ ಕಾರಣ ನಮ್ಮ ಬೇಡಿಕೆ ಈಡೇರುವ ತನಕ ರಾಜ್ಯದಾದ್ಯಂತ  ಪ್ರತಿಭಟನೆ, ಹೋರಾಟ ನಡೆಸಲಾಗುವುದು ಎಂದು ಪುತ್ತೂರು ತಾಲ್ಲೂಕು ಮಡಿವಾಳರ ಸಂಘದ ಅಧ್ಯಕ್ಷ ಪಿ.ಎನ್. ಸುಭಾಶ್ಚಂದ್ರ  ಎಚ್ಚರಿಸಿದ್ದಾರೆ.

ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ , ರಾಜಕೀಯವಾಗಿ ಅತ್ಯಂತ ಕೆಳಸ್ತರದಲ್ಲಿರುವ ಹಿಂದುಳಿದ ಸಮುದಾಯವಾದ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಕೂಡಲೇ ಶಿಫಾರಸು ಮಾಡುವಂತೆ ಆಗ್ರಹಿಸಿ ರಾಜ್ಯ ಮಂಡವಾಳ ಸಂಘದ ಆಶ್ರಯದಲ್ಲಿ ಕಳೆದ 2014ರ ಜನವರಿ 5ರಂದು ಬೆಂಗಳೂರಿನಲ್ಲಿ, 2016ರ ಫೆ.1ರಂದು ಕೂಡಲಸಂಗಮದಲ್ಲಿ, 2017ರ ಫೆ.1ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಅವರು ನೀಡಿರುವ ವಾಗ್ದಾನವನ್ನು ಇನ್ನೂ ಈಡೇರಿಸಿಲ್ಲ. ಈ ತನಕ ಯಾವುದೇ ಪೂರಕ ಪ್ರತಿಕ್ರಿಯೆಯೂ ದೊರೆತಿಲ್ಲ . ಇದರಿಂದಾಗಿ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ ಎಂದರು.

ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಪ್ರತಿಭಟನೆ ಇಂದಿನಿಂದಲೇ ಆರಂಭಗೊಂಡಿದೆ. ಆರಂಭಿಕ ಹಂತವಾಗಿ ಇಂದು ರಾಜ್ಯದ ಪ್ರತೀ ತಾಲ್ಲೂಕು ಕಚೇರಿಗಳ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ. ಅ.30ರಂದು ಎರಡನೇ ಹಂತದಲ್ಲಿ ರಾಜ್ಯದ ಪ್ರತಿ ಜಿಲ್ಲಾ ಕೆಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ನ.10ರಂದು ಬೆಂಗಳುರಿನ ಪ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 30 ಮಂದಿ ಮಡಿವಾಳ ಸಮುದಾಯದ ಜನರಿದ್ದಾರೆ ಎಂದ ಅವರು ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ತಾಲೂಕು ಮಡಿವಾಳರ ಸಂಘದ ಪ್ರಧಾನ ಕಾರ್ಯದರ್ಶಿ ರಘುನಾಥ ನೆಲ್ಯಾಡಿ, ಉಪಾಧ್ಯಕ್ಷರಾದ ಉಮಾನಾಥ ಪಿ.ಬಿ, ಇಂದುಶೇಖರ ಪಿ.ಬಿ, ಸುಬ್ಬಣ್ಣ ನೂಜಿ, ಕಾರ್ಯಕಾರಿ ಸಮಿತಿ ಸದಸ್ಯ ಚಿತ್ತರಂಜನ್ ಬೆಳ್ಳಾರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News