ಪರ್ಕಳ ಅಪಘಾತ ಪ್ರಕರಣ: ಕರಂದ್ಲಾಜೆ ವಿರುದ್ಧ ಮೊಕದ್ದಮೆ ದಾಖಲಿಸಲು ಆಗ್ರಹ

Update: 2017-10-10 07:14 GMT

ಮಣಿಪಾಲ, ಅ.10: ಹೊಂಡಮಯ ರಾಷ್ಟ್ರೀಯ ಹೆದ್ದಾರಿಯಿಂದಾಗಿ ಪರ್ಕಳದಲ್ಲಿ ಬೈಕ್ ಸ್ಕಿಡ್ ಆಗಿ ಮಗು ಮೃತಪಟ್ಟ ಪ್ರಕರಣದಲ್ಲಿ ತಂದೆಯ ಬದಲು ರಸ್ತೆ ದುರಸ್ತಿ ಮಾಡುವಲ್ಲಿ ನಿರ್ಲಕ್ಷ ತೋರುತ್ತಿರುವ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಜನಪ್ರತಿನಿಧಿಗಳ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಮಂಗಳವಾರ ಮಣಿಪಾಲ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿತು.

ಈ ವೇಳೆ ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಸುದರ್ಶನ್ ಅವರೊಂದಿಗೆ ಮಾತುಕತೆ ನಡೆಸಿದ ಕಾರ್ಯಕರ್ತರು, ಅಪಘಾತದಲ್ಲಿ ಮೃತಪಟ್ಟ ತಂದೆಯ ಬದಲು ಸಂಸದರು, ಜನಪ್ರತಿನಿಧಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಮಗು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಕ್ಕೆ ಕೇಸು ದಾಖಲಿಸುವ ಮೂಲಕ ಇನ್ನಷ್ಟು ಆಘಾತ ನೀಡಿರುವುದು ಸರಿಯಲ್ಲ ಎಂದು ದೂರಿದರು. ಈ ವೇಳೆ ರಸ್ತೆ ಅಪಘಾತಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಯನ್ನು ಪೊಲೀಸ್ ನಿರೀಕ್ಷಕ ಸುದರ್ಶನ್ ಅವರು ಕಾರ್ಯಕರ್ತರಿಗೆ ಮನದಟ್ಟು ಮಾಡಿದರು.

ಬಳಿಕ ಮಾತನಾಡಿದ ಜಯ ಕರ್ನಾಟಕ ಉಡುಪಿ ಜಿಲ್ಲಾಧ್ಯಕ್ಷ ರಮೇಶ್ ಶೆಟ್ಟಿ, ಸಂಸದೆ ಶೋಭಾ ಕರಂದ್ಲಾಜೆ ಇದುವರೆಗೆ ಮಣಿಪಾಲ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳದೆ ಮತ ಹಾಕಿದ ಮತದಾರರಿಗೆ ಮೋಸ ಮಾಡುತ್ತಿದ್ದಾರೆ. ಬೆಂಗಳೂರಿ ನಲ್ಲಿ ಪ್ರತಿಭಟನೆ ನಡೆಸುವ ಇವರಿಗೆ ತನ್ನ ಕ್ಷೇತ್ರ ಸಮಸ್ಯೆ ಬಗ್ಗೆ ಕಾಳಜಿ ಇಲ್ಲ. ಇಲ್ಲಿ ಆಗುತ್ತಿರುವ ಅನ್ಯಾಯಕ್ಕೆ ಜನಪ್ರತಿನಿಧಿಗಳೇ ನೇರ ಹೊಣೆ. ಆದುದರಿಂದ ಒಂದು ತಿಂಗಳ ಒಳಗೆ ಈ ಹೆದ್ದಾರಿಯನ್ನು ದುರಸ್ತಿ ಮಾಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಮುಖಂಡರಾದ ಸುಧಾಕರ್ ರಾವ್, ನಿತ್ಯಾನಂದ ಅಮೀನ್, ಎಸ್.ಎಸ್.ತೋನ್ಸೆ, ಕರುಣಾಕರ ಪೂಜಾರಿ, ವೀರಭದ್ರ ಗಾಣಿಗ ಬೈಂದೂರು, ಯಶೋಧರ ಭಂಡಾರಿ, ಉಮೇಶ್, ವೇದಾವತಿ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News