​ ಮಂಗಳೂರು: ರಾಜ್ಯಮಟ್ಟದ ಚೆಸ್ ಸ್ಪರ್ಧೆಗೆ ಚಾಲನೆ

Update: 2017-10-10 14:20 GMT

ಮಂಗಳೂರು, ಅ.10: ನಗರದ ಕೊಡಿಯಾಲಬೈಲ್‌ನ ಸೈಂಟ್ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಯುಕ್ತ ಆಶ್ರಯದಲ್ಲಿ ಕೊಡಿಯಾಲ್‌ಬೈಲ್‌ನ ಸೈಂಟ್ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿರುವ 14ರಿಂದ 17ರ ವಯೋಮಿತಿಯ ರಾಜ್ಯಮಟ್ಟದ ಚದುರಂಗ ಸ್ಪರ್ಧಾಕೂಟಕ್ಕೆ ಇಂದು ಬೆಳಗ್ಗೆ ಚಾಲನೆ ದೊರೆಯಿತು.

ಮೂರು ದಿನಗಳ ಪಂದ್ಯಾವಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಚದುರಂಗ (ಚೆಸ್) ಬುದ್ಧಿವಂತರ ಕ್ರೀಡೆ ಎಂದೇ ಖ್ಯಾತವಾಗಿದೆ. ಈ ರೀತಿಯ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಆಗಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಆಹಾರ ಸಚಿವ ಯು.ಟಿ.ಖಾದರ್, ಚದುರಂಗ ತಾಳ್ಮೆ, ಸಹನೆ ಬುದ್ಧಿಶಕ್ತಿಯನ್ನು ವೃದ್ಧಿಸುವ ಆಟವಾಗಿದೆ. ವಿದ್ಯಾರ್ಥಿಗಳ ಮುಂದಿನ ಬದುಕಿನಲ್ಲಿ ಈ ಎಲ್ಲಾ ಗುಣಗಳನ್ನು ಬೆಳೆಸಿಕೊಳ್ಳಲು ಇಂತಹ ಕ್ರೀಡೆಗಳು ಸಹಕಾರಿ ಎಂದರು.

ಶಾಸಕ ಜೆ.ಆರ್.ಲೋಬೊ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ.ಡೈನಿಶಿಯಸ್ ವಾಸ್, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ದಿವಾಕರ ಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೈ .ಶಿವರಾಮಯ್ಯ, ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಘುನಾಥ, ಸಂತ ಅಲೋಶಿಯಸ್ ಹಿ.ಪ್ರಾ.ಶಾಲೆಯ ಸಂಚಾಲಕ ವಂ.ಎರಿಕ್ ಮಥಾಯಸ್, ಮುಖೋಪಾಧ್ಯಾಯಿನಿ ಫಿಲೋಮಿನಾ ಲೂವಿಸ್, ದೈಹಿಕ ಶಿಕ್ಷಣ ಶಿಕ್ಷಕ ಹರೀಶ್, ಅರುಣ್ ಬ್ಯಾಪ್ಟಿಸ್ಟ್ ಮೊದಲಾದವರು ಉಪಸ್ಥಿತರಿದ್ದರು.

ರೈ-ಖಾದರ್ ಆಟದ ಮೂಲಕ ಪಂದ್ಯಾವಳಿ ಆರಂಭ

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ಆಹಾರ ಸಚಿವ ಯು.ಟಿ.ಖಾದರ್ ಚೆಸ್‌ದಾಳಗಳನ್ನು ಚಲಾಯಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.

ಚದುರಂಗ ಸ್ಪರ್ಧೆಯು 3 ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ 34 ಶೈಕ್ಷಣಿಕ ಜಿಲ್ಲೆಯ ಒಟ್ಟು 600 ಮಂದಿ ಸ್ಪರ್ಧಾಳುಗಳು ಹಾಗೂ 120 ಮಂದಿ ತಂಡದ ನಿರ್ವಾಹಕರು ಭಾಗವಹಿಸಲಿದ್ದಾರೆ. ಈ ಸ್ಫರ್ಧೆಯು 14 ಮತ್ತು 17ರ ವಯೋಮಾನದ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ 4 ಹಂತದಲ್ಲಿ ನಡೆಯಲಿದೆ. ಹಾಗೂ ಅಂತಿಮ ಸುತ್ತಿಗೆ ಆಯ್ಕೆಯಾಗುವ 20 ಮಂದಿ ಕ್ರೀಡಾಳುಗಳು ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ. ಸ್ಫರ್ಧೆಗೆ ರಾಷ್ಟ್ರಮಟ್ಟದ ಅನುಭವಿ ತೀರ್ಪುಗಾರರನ್ನು ನೇಮಕ ಮಾಡಲಾಗಿದೆ.

 ಸಮಾರಂಭದಲ್ಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆಗೈದ ಸಂತ ಆಲೋಶಿಯಸ್ ಶಿಕ್ಚಣ ಸಂಸ್ಥೆಯ 6 ವಿದ್ಯಾರ್ಥಿಗಳಾದ ವಿಯಾನಿ ಆಂಟನಿಯೋ ಡಿಕುನ್ಹ ( ಅಂತಾರಾಷ್ಟ್ರೀಯ ಚೆಸ್ ಆಟಗಾರ ), ಆಶ್ಲೇ ಡಿ ಸೋಜ ( ವೈಟ್ ಲಿಫ್ಟಿಂಗ್), ಪ್ರಸಾದ ಶೆಟ್ಟಿ (ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು), ಕರಣ್ ಗೊಲ್ಲಕೇರಿ (ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ), ಮನೋಹರ ಎಂ. ಪ್ರಭು ( ರಾಷ್ಟ್ರೀಯ ಈಜುಗಾರ) ಅನಿಕೇತ್ ಡಿಸೋಜ ( ರಾಷ್ಟ್ರೀಯ ಈಜುಗಾರ) ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News