ತಾಳ್ಮೆ- ಸಹಿಷ್ಣುತೆ ಇದ್ದರೆ ಮಾನಸಿಕ ಸಮತೋಲನ ಸಾಧ್ಯ: ನ್ಯಾ. ರವಿ ನಾಯ್ಕಾ

Update: 2017-10-10 11:53 GMT

ಮಂಗಳೂರು, ಅ.10: ನಮ್ಮೆಲ್ಲ ಸಮಸ್ಯೆಗಳಿಗೆ ನಾವೇ ಕಾರಣರಾಗಿದ್ದು, ತಾಳ್ಮೆ ಹಾಗೂ ಕಷ್ಟ ಸಹಿಷ್ಣುತೆಯ ಗುಣವನ್ನು ಬೆಳೆಸಿಕೊಂಡಾಗ ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ರವಿ ಎಂ. ನಾಯ್ಕಾ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಪಂ ಮತ್ತು ವೆನ್ಲಾಕ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆಯ ಆರ್‌ಎಪಿಸಿಸಿ ಸಭಾಂಗಣದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಮಾನಸಾಧಾರ ಪುನರ್ವಸತಿ ಕೇಂದ್ರ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ನಮ್ಮ ಹಿರಿಯರಲ್ಲಿ ಪ್ರಾಮಾಣಿಕತೆ, ಸಮಯ ಬದ್ಧತೆ, ಕಷ್ಟ ಸಹಿಷ್ಣುತೆ ಇತ್ತು. ಆದರೆ ಇಂದಿನ ಕಾಲದಲ್ಲಿ ನಮಗೆ ಯಾವುದಕ್ಕೂ ಸಮಯಾವಕಾಶವಿಲ್ಲ. ಬೆಳಗೆದ್ದ ಕೂಡಲೇ ಮೊಬೈಲ್, ಲ್ಯಾಪ್‌ಟಾಪ್ ನೋಡುವುದೇ ಆಯಿತು. ತಾಳ್ಮೆ ಎನ್ನುವುದು ನಮ್ಮಲಿಲ್ಲ. ನಮ್ಮ ಸಿಬ್ಬಂದಿಯ ಮೇಲೆಯೇ ನಾವು ರೇಗಾಡುತ್ತೇವೆ. ಇದನ್ನೆಲ್ಲ ತಪ್ಪಿಸಿ ಮಾನಸಿಕ ಸಮತೋಲವನ್ನು ಕಾಯ್ದುಕೊಳ್ಳಬೇಕು ಎಂದರು.

ಮಾನಸಿಕ ಅಸ್ವಸ್ಥರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ‘ಮಾನಸಾಧಾರ’ದಂತಹ ಕಾರ್ಯಕ್ರಮಗಳಿಂದ ಇದು ಸಾಧ್ಯವಾಗಲಿದೆ ಎಂದವರು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ನೆಮ್ಮದಿ ಎಂಬುದು ನಮ್ಮಲ್ಲೇ ಇದೆ. ಮನಸ್ಸು ಎನ್ನುವುದು ಎಲ್ಲವೂ ಆಗಿದೆ. ಭಾವನೆಗಳ ನಿರ್ವಹಣೆಯಲ್ಲಿ ನಾವು ವಿಲರಾದರೆ ಮಾನಸಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ನಿರೀಕ್ಷೆಗಳ ಜತೆ ಬದುಕುವ ಬದಲು ಸವಾಲುಗಳ ಜತೆ ಬದುಕಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಮಾತನಾಡಿ, ಕಾಯಿಲೆ ಮನಸ್ಸಿಗೂ ಬರುತ್ತದೆ, ದೇಹಕ್ಕೂ ಬರುತ್ತದೆ. ಆದರೆ ಮನಸ್ಸಿಗೆ ಬಂದ ಕಾಯಿಲೆಗೆ ಚಿಕಿತ್ಸೆ ನೀಡಬೇಕೆನ್ನುವುದು ಇತ್ತೀಚಿಗಿನವರೆಗೂ ಗೊತ್ತಿರಲಿಲ್ಲ. ಸಾಮಾಜಿಕ ಆರೋಗ್ಯ, ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಹಾಗೂ ಬೌದ್ಧಿಕ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಸ್ವಸ್ಥ ಸಮಾಜ ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ವಕೀಲರ ಸಂಘದ ಅಧ್ಯಕ್ಷ ಎಂ. ಆರ್. ಬಲ್ಲಾಳ್, ಎಸ್‌ಡಿಎಂ ಕಾನೂನು ಕಾಲೇಜಿನ ಕಾನೂನು ನೆರವು ವಿಭಾಗದ ಮುಖ್ಯಸ್ಥೆ ಹಾಗೂ ಉಪ ಪ್ರಾಂಶುಪಾಲೆ ಡಾ.ಬಾಲಿಕಾ, ನೋಡೆಲ್ ಅಧಿಕಾರಿ ಶರ್ೀ, ಡಾ.ರತ್ನಾಕರ ಉಪಸ್ಥಿತರಿದ್ದರು.

ಮಾನಸಿಕ ರೋಗ ತಜ್ಞ ಡಾ.ಪಿ.ವಿ.ಭಂಡಾರಿ, ಡಾ.ರವೀಶ್ ತುಂಗಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News