ಇಬ್ಬರು ಸಚಿವರ ನಡುವಿನ ಗುದ್ದಾಟದಿಂದ ಗ್ರಾಮಸ್ಥರು ಅತಂತ್ರ : ಎಸ್‍ಡಿಪಿಐ ಆರೋಪ

Update: 2017-10-10 13:29 GMT

ಬಂಟ್ವಾಳ, ಅ. 10:  ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ಬಂಟ್ವಾಳ ಪುರಸಭೆಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಂಬಂಧಿಸಿ ಇಬ್ಬರು ಸಚಿವರ ನಡುವಿನ ಗುದ್ದಾಟದಿಂದ ಗ್ರಾಮಸ್ಥರು ಅತಂತ್ರರಾಗುವಂತಾಗಿದೆ ಎಂದು ಎಸ್‍ಡಿಪಿಐ ಸದಸ್ಯರು ಮಂಗಳವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.

ಸಚಿವ ಖಾದರ್ ಅವರ ಕುಮ್ಮಕ್ಕಿನಿಂದ ಕಾಂಗ್ರೆಸ್ ಬ್ಯಾನರ್‍ಯಡಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ ಪುರಸಭೆ ಈ ವಿಚಾರದಲ್ಲಿ ಮೌನವಾಗಿದೆ. ಸಚಿವ ಯು.ಟಿ.ಖಾದರ್ ಅವರು ಘಟಕ ನಿರ್ಮಾಣಕ್ಕೆ ವಿರೋಧಿಸುತ್ತಾ ಬಂದರೆ, ಇತ್ತ ಸಚಿವ ರಮಾನಾಥ ರೈ ಅವರು ಘಟಕ ನಿರ್ಮಾಣಕ್ಕೆ ಉತ್ಸಾಹ ತೋರಿದ್ದಾರೆ. ನಮ್ಮ ಸಲಹೆಯಂತೆ ಸಜೀಪನಡು ಪಂಚಾಯತ್ ಆಡಳಿತ ಘಟಕ ನಿರ್ಮಾಣಕ್ಕೆ ಕೆಲವೊಂದು ಷರತ್ತಿನ ಮೇಲೆ ಒಪ್ಪಿದೆ. ಆದರೆ ಪುರಸಭೆ ಮಾತ್ರ ಈ ವಿಚಾರದಲ್ಲಿ ಮುಂದುವರೆದಿಲ್ಲ. ಇಲ್ಲಿ ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದೊಳಗೇ ಗೊಂದಲವಿದೆ ಎಂದು ಸದಸ್ಯ ಮಹಮ್ಮದ್ ಇಕ್ಬಾಲ್ ಗೂಡಿನಬಳಿ ಟೀಕಿಸಿದರು. 

ಸಚಿವದ್ವಯರನ್ನು ಒಟ್ಟಿಗೆ ಕೂರಿಸಿ ಸ್ಥಳೀಯ ಪಂಚಾಯತ್ ಮತ್ತು ಪುರಸಭೆ ಕೂಡಾ ಜಂಟಿ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಇಕ್ಬಾಲ್ ಒತ್ತಾಯಿಸಿದರು. ಈ ಸಂದರ್ಭ ದನಿಗೂಡಿಸಿದ ಎಸ್‍ಡಿಪಿಐ. ಸದಸ್ಯ ಮೊನೀಶ್ ಅಲಿ, ಪುರಸಭೆಯ ಕಸ ವಿಲೇವಾರಿ ದೃಷ್ಟಿಯಿಂದ ಮಹತ್ವದ್ದಾಗಿರುವ ತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಾಣ ಕುರಿತು ಸ್ಪಷ್ಟವಾದ ನಿರ್ಧಾರವನ್ನು ಆಡಳಿತ ಕೈಗೊಳ್ಳಬೇಕು ಎಂದು ಹೇಳಿದರು.

ಪುರಸಭೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ತ್ಯಾಜ್ಯ ಶುದ್ಧೀಕರಣ ಘಟಕವನ್ನು ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ನಿರ್ಮಿಸಲು ಬದ್ಧವಾಗಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಈಗಾಗಲೇ ಸ್ಥಳೀಯರಿಗೆ ಇರಾ ಪಂಚಾಯತ್‍ನ ವ್ಯಾಪ್ತಿಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಕೆಲವರಿಗೆ ನೋಟಿಸನ್ನು ಜಾರಿ ಮಾಡಲಾಗಿದೆ ಅಧ್ಯಕ್ಷ ರಾಮಕೃಷ್ಣ ಆಳ್ವ ಸ್ಪಷ್ಟಪಡಿಸಿದರು.

ಮನೆಮನೆ ಕಸ ಸಂಗ್ರಹಕ್ಕೆ ಪುರಸಭೆಯಲ್ಲಿ ದರ 30 ರೂ. ನಿಗದಿಯಾಗಿದ್ದರೆ ಗುತ್ತಿಗೆದಾರರು 50 ರೂ.ಅನ್ನು ಅನಧಿಕೃತವಾಗಿ ಸಂಗ್ರಹ ಮಾಡುತ್ತಿದ್ದಾರೆ ಎಂದು ಸಭೆಯ ಮುಂದೆ 50 ರೂ.ವಿನ ರಶೀದಿಯನ್ನು ಸದಸ್ಯ ಬಿ.ದೇವದಾಸ ಶೆಟ್ಟಿ ಪ್ರದರ್ಶಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಮನೆ ಮನೆ ಸಂಗ್ರಹದ ಜವಾಬ್ದಾರಿ ಗುತ್ತಿಗೆದಾರರದ್ದು, ಪುರಸಭೆ ಸೂಚನೆಯಂತೆ ಮಾಡುತ್ತಿದ್ದಾರೆ ಎಂದರು. ಇದನ್ನು ಆಕ್ಷೇಪಿಸಿದ ಸದಸ್ಯ ಗೋವಿಂದ ಪ್ರಭು ರಶೀದಿಯಲ್ಲೂ ಪುರಸಭೆ ಬಂಟ್ವಾಳ ನಮೂದು ಮಾಡಲಾಗಿದೆ ಎಂದರು. ಇದೇ ವೇಳೆ ಮಧ್ಯ ಪ್ರವೇಶಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ತಾನು ಖುದ್ದಾಗಿ ನಗರ ಸಂಚರಿಸಿ, ಕಸ ವಿಲೇವಾರಿ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವೆ ಎಂಬ ಭರವಸೆ ನೀಡಿದರು. 

ವಾರ್ಡುವಾರು ಟೆಂಡರ್ ಹಂಚಿಕೆ:
ಕಸ ವಿಲೇವಾರಿಗೆ ಸಂಬಂಧಿಸಿ ಮೂರು ಬಾರಿ ಟೆಂಡರ್ ಕರೆದರೂ ಯಾರೂ ಬಂದಿಲ್ಲ. ಇಂಜಿನೀಯರ್ ಡೊಮೆನಿಕ್ ಡಿಮೆಲ್ಲೋ ಸಭೆಯ ಗಮನ ಸೆಳೆದಾಗ ಪುರಸಭಾ ವ್ಯಾಪ್ತಿಯಲ್ಲಿ ವಾರ್ಡ್‍ವಾರು ಹಂಚಿಕೆ ಮಾಡಿ ಟೆಂಡರ್ ಕರೆಯುವಂತೆ ಸಲಹೆ ನೀಡಿದರು. ಇದಕ್ಕೆ ಸದಸ್ಯರಾದ ಸದಾಶಿವ ಬಂಗೇರ, ಗೋವಿಂದ ಪ್ರಭು, ಪ್ರವೀಣ್, ಗಂಗಾಧರ ಅವರು ಸಹಮತ ವ್ಯಕ್ತ ಪಡಿಸಿದರು. ಈ ಸಲಹೆಯನ್ನು ಸಭೆ ಪರಿಗಣಿಸಿತು.
ಸಭೆ ಮುಕ್ತಾಯವಾಗುವ ಹೊತ್ತಿಗೆ ನಿರ್ಣಯಗಳನ್ನು ಕೈಬರಹದಲ್ಲಿ ದಾಖಲಿಸಿದನ್ನು ನಮಗೆ ತೋರಿಸಿ ಎಂದು ಸದಸ್ಯ ದೇವದಾಸ ಶೆಟ್ಟಿ ಪಟ್ಟು ಹಿಡಿದು ಈ ಕುರಿತು ಜಿಲ್ಲಾಧಿಕಾರಿ ಆದೇಶದ ಪ್ರತಿಯನ್ನು ಪ್ರದರ್ಶಿಸಿದರೆ, ಐದು ದಿನದೊಳಗೆ ನಿರ್ಣಯ ದಾಖಲಿಸಿದ ಮಾಹಿತಿಯನ್ನು ರವಾನಿಸುವ ಕುರಿತ ಪತ್ರವನ್ನು ಅಧ್ಯಕ್ಷ ರಾಮಕೃಷ್ಣ ಆಳ್ವ ಓದಿದರು.

ಚರ್ಚೆಯಲ್ಲಿ ಮೊಹಮ್ಮದ್ ಶರೀಫ್, ಬಿ.ಮೋಹನ್, ಚಂಚಲಾಕ್ಷಿ, ಸುಗುಣ ಕಿಣಿ, ಪ್ರವೀಣ್, ಜಗದೀಶ್ ಕುಂದರ್, ವಸಂತಿ, ಯಾಸ್ಮಿನ್, ಮುಮ್ತಾಝ್ ಪಾಲ್ಗೊಂಡರು. ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಉಪಸ್ಥಿತರಿದ್ದರು.

ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇ ಮಾಡಲು ಸ್ಥಳಾವಕಾಶ ಇಲ್ಲದೆ ಪ್ರಸ್ತುತ ಮಂಗಳೂರು ಮಹಾನಗರಪಾಲಿಕೆಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಾಗಿಸುತ್ತಿದ್ದು, ಮತ್ತು ಕಂಚಿನಡ್ಕದಲ್ಲಿ ಉದ್ದೇಶಿತ ತ್ಯಾಜ್ಯ ಸಂಸ್ಕರಣಾ ಘಟಕ ಪ್ರಾರಂಭಿಸಲು ಇರುವ ಅಡೆತಡೆ ನಿವಾರಿಸಲು ಸಮಯಾವಕಾಶ ಅಗತ್ಯ. ಪ್ರಸ್ತುತ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಹಾಯ ಮಾಡುವಂತ ಪೈರೋಲಿಸಿಸ್ ಯಂತ್ರವನ್ನು ಒದಗಿಸುವಂತೆ ಪರಿಸರ ಇಲಾಖೆಯನ್ನು ಕೋರಲು ಸಭೆ ತೀರ್ಮಾನಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News