ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿ ಬೇಟೆಯಾಡುವುದು ಇನ್ನು ಮುಂದೆ ನಡೆಯೊಲ್ಲ: ಪ್ರಕಾಶ್ ರೈ

Update: 2017-10-10 15:16 GMT

ಕೋಟ, ಅ.10: ಬಿಜೆಪಿ, ಸಂಘ ಪರಿವಾರ ಹಾಗೂ ಇತರ ಸಂಘಟನೆಗಳ ವಿರೋಧ, ಬೆದರಿಕೆ ಹಾಗೂ ಪ್ರತಿಭಟನೆಗಳ ಮಧ್ಯೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಬಹುಭಾಷಾ ಚಿತ್ರ ನಟ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ರೈ ಅವರಿಗೆ ಮಂಗಳವಾರ ಇಲ್ಲಿ ಪ್ರದಾನ ಮಾಡಲಾಯಿತು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಹೇಳಿಕೆ ನೀಡಿದ್ದಾರೆಂಬ ಕಾರಣಕ್ಕೆ ಪ್ರಕಾಶ್ ರೈಯವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ನೀಡಬಾರದೆಂಬ ಒತ್ತಾಯಗಳು ಕೇಳಿಬಂದು ವಿವಾದ ಸೃಷ್ಟಿಯಾಗಿದ್ದವು. ಈ ಮಧ್ಯೆಯೂ ಕೋಟತಟ್ಟು ಗ್ರಾಪಂ, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಸಹಯೋಗದಲ್ಲಿ ಕೋಟ ಕಾರಂತ ಥೀಮ್ ಪಾರ್ಕ್‌ನಲ್ಲಿ ಪ್ರಕಾಶ್ ರೈಯವರಿಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಆದರೆ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೋಟ ರಾಷ್ಟ್ರೀಯ ಹೆದ್ದಾರಿಯಿಂದ ಥೀಮ್ ಪಾರ್ಕ್‌ವರೆಗೆ ನಡೆಸಲು ಉದ್ದೇಶಿಸಿದ್ದ ಮೆರವಣಿಗೆಯನ್ನು ಸಂಘಟಕರು ಕೈಬಿಟ್ಟರು.

"ಇಲ್ಲಿ ಯಾರು ಗೆದ್ದರು-ಸೋತರು ಎಂಬುದು ಮುಖ್ಯವಲ್ಲ. ಕರ್ನಾಟಕದಲ್ಲಿ ನನ್ನ ಹಾಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಒಂಟಿಯಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿ ವೈಯಕ್ತಿಕ ವಿಚಾರಗಳನ್ನು ಹೇಳುತ್ತ ಒಂಟಿಯಾಗಿ ಮಾಡಿ ಬೇಟೆಯಾಡುವುದು ಇನ್ನು ಮುಂದೆ ಈ ನಾಡಿನಲ್ಲಿ ನಡೆಯುವುದಿಲ್ಲ" ಎಂದು ಪ್ರಕಾಶ್ ರೈ ಈ ಸಂದರ್ಭ ಹೇಳಿದರು.

ಕರ್ನಾಟಕ ಜನತೆ, ಸಾಹಿತಿಗಳು, ಪತ್ರಕರ್ತರು, ಹುಟ್ಟೂರ ಪ್ರಶಸ್ತಿ ಸಮಿತಿಗಳಿಂದ ನನಗೆ ಸಿಕ್ಕ ಬಲದಿಂದ ಬಹಳ ಸಂತೋಷವಾಗಿದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಎಲ್ಲೂ ರಾಜಕೀಯ ಮಾತನಾಡುವುದಿಲ್ಲ. ಸಮಾಜದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಇರಬೇಕು ಮತ್ತು ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಹೇಳುವ ಸ್ವಾತಂತ್ರ್ಯ ಇರಬೇಕು ಎಂಬುದೇ ನನಗೆ ಮುಖ್ಯ. ಅದು ಬಿಟ್ಟು ನನಗೆ ಯಾವುದೇ ಪಕ್ಷ ಮುಖ್ಯವಾಗುವುದಿಲ್ಲ ಎಂದರು.

ಬಿಗಿ ಬಂದೋಬಸ್ತ್ : ಕೋಟ ಕಾರಂತ ಥೀಂ ಪಾರ್ಕ್‌ಗೆ ಹೋಗುವ ದಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಖುದ್ದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಯಾವುದೇ ವಾಹನಗಳಿಗೆ ಒಳಗೆ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ. ಪ್ರತಿಯೊಬ್ಬರನ್ನು ತಪಾಸಣೆ ಮಾಡಿಯೇ ಕಳುಹಿಸಲಾಗುತ್ತಿತ್ತು. ಅದೇ ರೀತಿ ಕೋಟ ಥೀಂ ಪಾರ್ಕ್‌ನಲ್ಲೂ ನೂರಾರು ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರಶಸ್ತಿ ಪ್ರದಾನ ಮಾಡುವ ಸಭಾಂಗಣದ ದ್ವಾರಕ್ಕೆ ಮೆಟಲ್ ಡಿಟೆಕ್ಟರ್‌ನ್ನು ಅಳವಡಿಸಲಾಗಿತ್ತು. ಬ್ಯಾಗ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿತ್ತು. ವೇದಿಕೆಯ ಎರಡೂ ಬದಿಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಹೆದ್ದಾರಿಯುದ್ದಕ್ಕೂ ರೈಗೆ ಸ್ವಾಗತ: ಪ್ರಕಾಶ್ ರೈಗೆ ಬೆಂಬಲವಾಗಿ ನಿಂತ ವಿವಿಧ ಸಂಘಟನೆಗಳು ಉಡುಪಿ ಜಿಲ್ಲೆಗೆ ಆಗಮಿಸಿದ ಪ್ರಕಾಶ್ ರೈಗೆ ಕೋಟಕ್ಕೆ ತೆರಳುವ ದಾರಿಯುದ್ದಕ್ಕೂ ಸ್ವಾಗತ ಕೋರಿದವು.

ಮಂಗಳೂರು ಕೂಳೂರು, ಸುರತ್ಕಲ್, ಮುಲ್ಕಿಗಳಲ್ಲಿ ಅಭಿಮಾನಿಗಳು ಪ್ರಕಾಶ್ ರೈಗೆ ಆತ್ಮೀಯ ಸ್ವಾಗತ ನೀಡಿದರೆ, ಹೆಜಮಾಡಿಯಲ್ಲಿ ಕಾಪು ಬ್ಲಾಕ್ ಹಾಗೂ ಯುವ ಕಾಂಗ್ರೆಸ್, ರೋಟರಿ ಕ್ಲಬ್ ಮತ್ತು ದಸಂಸ ಸಂಘಟನೆಗಳ ಮುಖಂಡರು, ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಕರ್ನಾಟಕ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಒಕ್ಕೂಟ ಮುಖಂಡರು, ಕೋಟ ಮೂರುಕೈಯಲ್ಲಿ ಸಿಪಿಎಂ, ಡಿವೈಎಫ್‌ಐ ಮುಖಂಡರು ಹೂಹಾರ ಹಾಕಿ ಪಟಾಕಿ ಸಿಡಿಸಿ ಸ್ವಾಗತಿಸಿದರು. ಬೆಂಬಲ ನೀಡಿ ಸ್ವಾಗತಿಸಿದ ಅಭಿಮಾನಿಗಳಿಗೆ ಪ್ರಕಾಶ್ ರೈ ಕೃತಜ್ಞತೆ ಸಲ್ಲಿಸಿದರು.

ಬಿಜೆಪಿ, ಕಾಂಗ್ರೆಸ್ ಮುಖಂಡರ ಗೈರು!: ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಜನಪ್ರತಿನಿಧಿಗಳು ಮಾತ್ರವಲ್ಲದೆ ಕಾಂಗ್ರೆಸ್ ಜನಪ್ರತಿನಿಧಿಗಳು ಕೂಡ ಗೈರು ಹಾಜರಾಗಿ ರುವುದು ಕಂಡುಬಂತು.

ಕಾರ್ಯಕ್ರಮ ಉದ್ಘಾಟಿಸಬೇಕಾಗಿದ್ದ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯಲ್ಲಿದ್ದರೂ ಕಾರ್ಯಕ್ರಮಕ್ಕೆ ಆಗಮಿಸದೆ ಗೈರು ಹಾಜರಾಗಿದ್ದರು. ಈ ಮೊದಲೇ ರೈಗೆ ಪ್ರಶಸ್ತಿ ನೀಡುವುದನ್ನು ವಿರೋಧಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಕೂಡ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಅದೇ ರೀತಿ ಈ ಪ್ರಶಸ್ತಿಯನ್ನು ಅತ್ಯಂತ ಮುತುವರ್ಜಿಯಿಂದ ಆರಂಭಿಸಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಗೈರುಹಾಜರಿ ಎದ್ದು ಕಾಣುತ್ತಿತ್ತು.
ಅಲ್ಲದೆ ಆಹ್ವಾನ ಪತ್ರಿಕೆಯಲ್ಲಿ ಹೆಸರಿಸಲಾಗಿದ್ದ ಶಾಸಕರಾದ ಹಾಲಾಡಿ ಶ್ರೀನಿವಾಸ ಪೂಜಾರಿ, ಪ್ರತಾಪ್‌ಚಂದ್ರ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ ಬಾಬು, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಗೈರುಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News