ರಾ.ಹೆದ್ದಾರಿ ಪರಿಹಾರ ವಿತರಣೆಯಲ್ಲಿ ತಾರತಮ್ಯ: ಭೂಸಂತ್ರಸ್ತರಿಂದ ನ.1ರಿಂದ ಹೋರಾಟದ ಎಚ್ಚರಿಕೆ

Update: 2017-10-11 14:34 GMT

ಉಡುಪಿ, ಅ.11: ಕುಂದಾಪುರ-ಕಾರವಾರ ರಾಷ್ಟ್ರೀಯ ಹೆದ್ದಾರಿ66ರ ಭೂ ಸಂತ್ರಸ್ತರಿಗೆ ಪರಿಹಾರಧನ ಹಂಚಿಕೆಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಲು ಅ.30ರೊಳಗೆ ಏಕರೀತಿಯ ದರ ನಿಗದಿಪಡಿಸದಿದ್ದಲ್ಲಿ ನ.1ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ವೌನ ಪ್ರತಿಭಟನೆ ನಡೆಸಲಾಗುವುದು ಎಂದು ಈ ಸಂತ್ರಸ್ತರು ಎಚ್ಚರಿಕೆ ನೀಡಿದ್ದಾರೆ.

ಕುಂದಾಪುರ- ಶೀರೂರು ಭಾಗದ ಭೂಸಂತ್ರಸ್ತರ ಪರವಾಗಿ ಉಡುಪಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲ ಮಂಗೇಶ್ ಶ್ಯಾನುಭಾಗ್, ರಾ.ಹೆ.ಇಕ್ಕೆಲಗಳ ಜಾಗಗಳಿಗೆ ರಾಜ್ಯ ಮುದ್ರಾಂಕ ಹಾಗೂ ನೋಂದಣಿ ಇಲಾಖೆ ಪ್ರಕಾರ ಸೆಂಟ್ಸ್‌ಗೆ 2 ಲಕ್ಷ ರೂ. ಮತ್ತು ಮಾರುಕಟ್ಟೆ ವೌಲ್ಯ ಸುಮಾರು 6ಲಕ್ಷ ರೂ. ಇದೆ. ಆದರೆ ಭೂ ಒತ್ತುವರಿ ಮಾಡಿದ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿ ಕೇವಲ 30ಸಾವಿರ ರೂ. ನಿಗದಿ ಪಡಿಸಿ ಸಂತ್ರಸ್ತರಿಗೆ ಅನ್ಯಾಯ ಎಸಗಿದ್ದಾರೆ ಎಂದು ದೂರಿದರು.

ಇದರಲ್ಲಿ ಕೆಲವರಿಗೆ ಉತ್ತಮ ಪರಿಹಾರ ಮೊತ್ತವನ್ನು ನೀಡಿದ್ದರೆ, ಇನ್ನು ಕೆಲವರಿಗೆ ಕಡಿಮೆ ಹಣ ನೀಡುವ ಮೂಲಕ ವಂಚಿಸಲಾಗುತ್ತಿದೆ. ಒಂದೇ ಗ್ರಾಮದ ಅಕ್ಕಪಕ್ಕದ ಜಾಗಗಳ ಬೆಲೆ ನಿಗದಿಯಲ್ಲೂ ತಾರತಮ್ಯ ಮಾಡಲಾಗಿದೆ. ಭೂ ಸ್ವಾಧೀನ ಕಾಯ್ದೆಯನ್ವಯ ಭೂಮಿಯ ಬೆಲೆಗಳನ್ನು ನಿರ್ಧರಿಸದೆ, ಇಷ್ಟ ಬಂದ ರೀತಿಯಲ್ಲಿ ಬೆಲೆ ನಿಗದಿ ಮಾಡಲಾಗಿದೆ ಎಂದು ಅವರು ಆರೋಪಿಸಿ ದರು.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಎರಡೂ ಬದಿಯ ವ್ಯಾಪಾರಸ್ಥ ರಿಗೆ ಉದ್ಯೋಗವಿಲ್ಲವಾಗಿದೆ. ಮನೆ ಕಳೆದುಕೊಂಡವರಿಗೆ ನೆಲೆ ಇಲ್ಲದಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ವಾಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಭೂ ಸಂತ್ರಸ್ತರಿಗೆ ಆತ್ಮಹತ್ಯೆ ಯೊಂದೇ ದಾರಿ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭೂಸಂತ್ರಸ್ತರಾದ ಬಾಲಕೃಷ್ಣ ಪ್ರಭು ಕೆರ್ಗಾಲು, ಮಂಜುನಾಥ ಉಡುಪ ಕಿರಿಮಂಜೇಶ್ವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News