ರಾಜ್ಯ ಸರಕಾರಕ್ಕೆ 50 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ; ಹೊಸ ಸ್ನಾತಕೋತ್ತರ ಕೋರ್ಸ್, ವಿವಿಧ ಕಾರ್ಯಕ್ರಮ

Update: 2017-10-11 15:13 GMT

ಮಂಗಳೂರು, ಅ.11: ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿಗೆ 150 ವರ್ಷಾಚರಣೆಯೊಂದಿಗೆ ವಿವಿಧ ಕಾರ್ಯಕ್ರಮಗಳಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಮತ್ತು ಬ್ಯಾಂಕಿಂಗ್ , ಹಣಕಾಸು, ವಿಮೆ ಸೇರಿದಂತೆ ಆರ್ಥಿಕ ಸಂಸ್ಥೆಗಳ ಬಗ್ಗೆ ಉನ್ನತ ಮಟ್ಟದ ಅಧ್ಯಯನ ನಡೆಸಲು ನೂತನ ಅಧ್ಯಯನ ವಿಭಾಗ ‘ಸ್ಕೂಲ್ ಆಫ್ ಫೈನಾನ್ಸ್ ಆ್ಯಂಡ್ ಎನಾಲಿಟಿಕ್ಸ್ ’ಸ್ನಾತ ಕೋತ್ತರ ಪದವಿಯನ್ನು ಆರಂಭಿಸಲಾಗುವುದು ಮತ್ತು ವರ್ಷಾಚರಣೆಯ ಸಂದರ್ಭದಲ್ಲಿ 50 ಕೋಟಿ ರೂ. ಗಳ ವಿಶೇಷ ಅನುದಾನಕ್ಕೆ ಮುಖ್ಯ ಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಕೆ. ಭೈರಪ್ಪ ಹಾಗೂ ಮಾಜಿ ಮುಖ್ಯ ಮಂತ್ರಿ ಮತ್ತು ಕಾಲೇಜಿನ 150ನೆ ವರ್ಷಾಚರಣೆ ಸಮಿತಿಯ ಗೌರವಾಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಜಂಟಿ ವಿ.ವಿ ಕಾಲೇಜಿನಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ವರ್ಷಾಚರಣೆಯ ಯೋಜನೆಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರವಿಂದ್ರ ಕಲಾ ಭವನದ ಉದ್ಘಾಟನೆಯೊಂದಿಗೆ ಫೆಬ್ರವರಿ ತಿಂಗಳಿನಿಂದ ಚಾಲನೆ ನೀಡಲಾಗುವುದು. ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಡಾ.ಯು.ಆರ್.ರಂಗನಾಥ್ ಅವರ ನೆನಪಿನಲ್ಲಿ ಈಗಿರುವ ಗ್ರಂಥಾಲಯವನ್ನು ಉನ್ನತೀಕರಿಸಿ ಪುನರ್ ನಾಮಕರಣ ಮಾಡಲಾಗುವುದು. ಈ ಗ್ರಂಥಾಲಯದಲ್ಲಿ ಅಪೂರ್ವ ಕೃತಿಗಳ ಪತ್ರಾಗಾರ ಹಾಗೂ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗುವುದು. ಕಾಲೇಜಿನ ವಾಣಿಜ್ಯ ಸಂಕೀರ್ಣದ ಹಿಂದುಗಡೆ ಇರುವ ಖಾಲಿ ಜಾಗದಲ್ಲಿ ಬಯಲು ರಂಗ ಮಂದಿರ ನಿರ್ಮಾಣ ಮಾಡಿ ಒಳಾಂಗಣ ಕ್ರೀಡೆಗಳಿಗೆ ಅನುಕೂಲವಾಗುವಂತೆ ನಿರ್ಮಿಸಲಾಗುವುದು. ಡಾ.ದಯಾನಂದ ಪೈ ಕಟ್ಟಡದ ಮೊದಲ ಅಂತಸ್ತಿನಲ್ಲಿ ನಿರ್ಮಾಣಗೊಳ್ಳುತ್ತಿರುವ ತರಗತಿ ಕೊಠಡಿಗಳ ಕಾಮಗಾರಿ ಪ್ರಗತಿಯಲ್ಲಿದೆ.

ಮುಂದೆ ಈ ಕಟ್ಟಡದ ಮೇಲಿನ ಅಂತಸ್ತಿನಲ್ಲಿ ಸಭಾ ಭವನ ನಿರ್ಮಾಣ ಮತ್ತು ತರಗತಿ ಕೊಠಡಿಗಳನ್ನು ನಿರ್ಮಿಸಲಾಗುವುದು.ಕಾಲೇಜಿನ ಸ್ಮರಣ ಸಂಚಿಕೆ ಮಿಸಲೇನಿ ಎನ್ನುವ ಶೀರ್ಷಿಕೆಯಡಿ ಪ್ರಕಟವಾದ ಸ್ಮರಣ ಸಂಚಿಕೆಯನ್ನು ರವೀಂದ್ರ ಕಲಾ ಭವನದಲ್ಲಿ ನವೀಕರಣ ಗೊಂಡ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು. ಕಾಲೇಜು ಮಿಸಲೇನಿಯಲ್ಲಿ ಪ್ರಕಟವಾದ ಹಿರಿಯ ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಕೆಲವೊಂದು ಆಯ್ದ ಲೇಖನಗಳನ್ನು ಒಂದು ಅಥವಾ ಎರಡು ಸಂಪುಟದಲ್ಲಿ ಪ್ರಕಟಿಸಲಾಗುವುದು.150 ವರ್ಷದ ನೆನಪಿಗಾಗಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸುವ ಯೋಜನೆ, ಅಶೋಕ ನಗರದಲ್ಲಿ ಅತಿಥಿ ಗೃಹವನ್ನು ನಿರ್ಮಿಸುವ ಯೋಜನೆ ಹೊಂದಲಾಗಿದೆ.150ನೆ ವರ್ಷವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲು ಕಾಲೇಜಿನ ಹಳೆ ವಿದ್ಯಾರ್ಥಿ ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ ಯವರ ಗೌರವಾಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಕುಲಪತಿ ಭೈರಪ್ಪ ತಿಳಿಸಿದರು.

ಕಾಲೇಜಿನ ಫಲಿತಾಂಶದ ಬಗ್ಗೆ ಮೊಯ್ಲಿ ಶ್ಲಾಘನೆ:- ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜು ವಿಶ್ವ ವಿದ್ಯಾನಿಲಯಕ್ಕೆ ಹಸ್ತಾಂತರ ಆಗುವ ಹಿಂದಿನ ವರ್ಷಗಳಲ್ಲಿ ಶೇ 25ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದ ಕಾಲೇಜಿನಲ್ಲಿ ಈಗ ಉತ್ತಮ ಫಲಿತಾಂಶ ದಾಖಲಾಗುತ್ತಿದೆ 2016-17ರಲ್ಲಿ ಬಿ.ಎ.ಪದವಿಯಲ್ಲಿ ಶೇ 92,ಬಿಎಸ್ಸಿಯಲ್ಲಿ ಶೇ 82.2, ಬಿ.ಕಾಂನಲ್ಲಿ ಶೇ 87 ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ 100 ಫಲಿತಾಂಶದಾಖಲಾಗಿರುವುದು ಸಂಸ್ಥೆಯ ಶೈಕ್ಷಣಿಕ ಪ್ರಗತಿಯನ್ನು ತೋರಿಸುತ್ತದೆ ಎಂದು ವೀರಪ್ಪ ಮೊಯ್ಲಿ ಶ್ಲಾಘಿಸಿದರು.

ಕಾಲೇಜಿನ ದಿನದ ಭಿತ್ತಿ ಪತ್ರಿಕೆಯಲ್ಲಿ ಕವನ ಬರೆಯುತ್ತಿದ್ದೆ :- ‘‘ಕಾಲೇಜಿನ ದಿನಗಳಲ್ಲಿ ಕಾಲೇಜಿನ ಭಿತ್ತಿಪತ್ರಿಕೆಗೆ ನಾನು ಕವನ ಬರೆಯುತ್ತಿದ್ದೆ ....’’ಎಂದು ಹೇಳಿದ ವೀರಪ್ಪ ಮೊಯ್ಲಿ ತಮ್ಮ ಕಾಲೇಜಿನ ದಿನದಲ್ಲಿ ರಚಿಸಿದ ಕವನದ ಕೆಲವು ಸಾಲುಗಳನ್ನು ವಾಚಿಸಿದರು.

150 ವರ್ಷದ ಇತಿಹಾಸ ಹೊಂದಿರುವ ಕಾಲೇಜಿನಲ್ಲಿ ಈ ಸಂದರ್ಭದಲ್ಲಿ ವಿಶ್ವ ದರ್ಜೆಯ ಪದವಿಯನ್ನು ನೀಡುವ ಕೋರ್ಸ್‌ನ್ನು ಕುಲಪತಿಯ ಸಹಕಾರ ದೊಂದಿಗೆ ಆರಂಭಿಸುವ ಯೋಜನೆ ಇದೆ ಎಂದು ಮೊಯ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಸಚಿವ ಎಂ.ಲೋಕೇಶ್ ಸಿಂಡಿಕೇಟ್ ಸದಸ್ಯ ಮೋಹನ್ ಚಂದ್ರ ನಂಬಿಯಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರ್ಮಣ್ಣ ನಾಯ್ಕ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಅನುಪಮ ಅನಂತ ಮೂರ್ತಿ , ಕಾಲೇಜಿನ ಪ್ರಾಂಶುಪಾಲರಾದ ಡಾ.ಉದಯ ಕುಮಾರ್, ಮನಪಾ ಸದಸ್ಯ ಶಶಿಧರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News