ಹಿರಿಯ ನಾಗರಿಕರಿಗೆ ನ್ಯಾಯ ಮರೀಚಿಕೆ: ಡಾ.ಶ್ಯಾನುಭಾಗ್

Update: 2017-10-12 13:49 GMT

ಉಡುಪಿ, ಅ.12: ಕರ್ನಾಟಕ ಹಿರಿಯ ನಾಗರಿಕ ಪೋಷಣೆ ಮತ್ತು ಸಂರಕ್ಷಣೆ ಕಾಯಿದೆಯಡಿ ನ್ಯಾಯ ಮಂಡಳಿಗಳು ನೀಡಿರುವ ಆದೇಶವನ್ನು ಅನುಷ್ಠಾನ ಮಾಡಬೇಕಾಗಿರುವ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಯಿಂದ ಹಿರಿಯರಿಗೆ ನ್ಯಾಯ ಮರೀಚಿಕೆಯಾಗಿದ್ದು, ಆದೇಶ ಅನುಷ್ಠಾನಗೊಳಿ ಸದ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ನ್ಯಾಯಾಲಯದ ಮೆಟ್ಟಿಲು ಏರಲಾಗುವುದು ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ತಿಳಿಸಿದೆ.

ನ್ಯಾಯ ಯಾಚಿಸಿ ಪ್ರತಿಷ್ಠಾನವನ್ನು ಸಂಪರ್ಕಿಸಿದ 23 ಹಿರಿಯರಲ್ಲಿ ಎಂಟು ಮಂದಿ ಈಗಾಗಲೇ ಮೃತಪಟ್ಟಿದ್ದು, ಉಳಿದವರಲ್ಲಿ ಹೆಚ್ಚಿನವರು ಹಾಸಿಗೆ ಹಿಡಿದು ನ್ಯಾಯದ ನಿರೀಕ್ಷೆಯಲ್ಲಿದ್ದಾರೆ. ಇವುಗಳಲ್ಲಿ ಕೆಲವೊಂದು ಪ್ರಕರಣಗಳಲ್ಲಿ ಹಿರಿಯರ ಪರ ಆದೇಶವಾಗಿ ವರ್ಷಗಳಾದರೂ ಇನ್ನೂ ಅದರ ಅನುಷ್ಠಾನ ಆಗಿಲ್ಲ. ಹಾಗಾಗಿ ನ್ಯಾಯಾಲದ ಮೊರೆ ಹೋಗುವುದು ಒಂದೆ ನಮ್ಮ ಮುಂದಿ ರುವ ದಾರಿ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಭಾಗ್ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಗಳೂರಿನ ಗಿರಿಜಾ ಬಳೆಗಾರ ಮಂಗಳೂರಿನ ಕದ್ರಿ ಸಹಕಾರಿ ಬ್ಯಾಂಕಿ ನಲ್ಲಿ ಠೇವಣಿ ಇರಿಸಿದ್ದ 2 ಲಕ್ಷ ರೂ. ಹಣವನ್ನು ರಾಮ ಪೂಜಾರಿ ಎಂಬಾತ ಲಪಾಟಯಿಸಿದ್ದನು. ಈ ಬಗ್ಗೆ ಮಂಗಳೂರು ಎಸಿ ಕೋರ್ಟ್ ಆಕೆಯ ಹಣ ತೆಗೆಸಿಕೊಡುವಂತೆ ಕೊಣಾಜೆ ಪೊಲೀಸ್ ಠಾಣೆಗೆ ಆದೇಶ ನೀಡಿ 6 ತಿಂಗಳೇ ಕಳೆದಿದೆ. ಇದೀಗ ಮರಣ ಶಯ್ಯೆಯಲ್ಲಿರುವ ಗಿರಿಜಾ ಆದೇಶ ಪಾಲನೆಯಾಗ ದಿರುವುದನ್ನು ಗಮನಿಸಿ ಆ ಹಣ ನನಗೆ ಸಿಗದಿದ್ದರೂ ತೊಂದರೆ ಇಲ್ಲ ಅನಾಥ ಶ್ರಮಕ್ಕಾದರೂ ಕೊಡಿಸಿ ಎಂದು ಬೇಡಿಕೊಳ್ಳುತ್ತಿರುವುದಾಗಿ ಡಾ. ಶ್ಯಾನುಭಾಗ್ ತಿಳಿಸಿದರು.

ಈ ಕಾಯಿದೆಯಡಿ ಒಂದು ಪ್ರಕರಣಗವನ್ನು 90ದಿನಗಳ ಒಳಗಡೆ ಇತ್ಯರ್ಥ ಪಡಿಸಬೇಕೆಂಬ ನಿಯಮ ಇದ್ದರೂ ಈವರೆಗೆ ರಾಜ್ಯದಲ್ಲಿ ಎರಡೇ ಪ್ರಕರಣವನ್ನು ಮಾತ್ರ 90 ದಿನಗಳಲ್ಲಿ ಇತ್ಯರ್ಥ ಪಡಿಸಿ ಆದೇಶ ನೀಡಲಾಗಿದೆ. ಈ ಕಾಯಿದೆ ಸರಿಯಾಗಿ ಅನುಷ್ಠಾನ ಆಗುತ್ತಿರುವುದು ಉಡುಪಿ ಜಿಲ್ಲೆಯಲ್ಲಿ ಮಾತ್ರ. ಇಲ್ಲಿನ ಜಿಲ್ಲಾಡಳಿತ ನಾಲ್ಕು ತಿಂಗಳೊಳಗೆ ಆದೇಶ ಹೊರಡಿಸಿ ಅನುಷ್ಠಾನವನ್ನು ಕೂಡ ಮಾಡುತ್ತಿದೆ. ಉಡುಪಿ ಜಿಲ್ಲೆ ಬಿಟ್ಟು ಬೇರೆ ಯಾವ ಜಿಲ್ಲೆ ಯಲ್ಲೂ ಈ ಕಾಯಿದೆ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ ಎಂದು ಅವರು ದೂರಿದರು.

ಕಣ್ಣೀರಿಟ್ಟ ಹಿರಿಯ ಜೀವ: ಪತ್ನಿ ಹಾಗೂ ಮಗಳಿಂದ ಮನೆಯಿಂದ ಹೊರಗೆ ದೂಡಲ್ಪಟ್ಟ ಮಂಡ್ಯದ ನಿವೃತ್ತ ಪ್ರಾಂಶುಪಾಲ ಡಿ.ಶಿವಣ್ಣ ಪರ ಕಾಯಿದೆ ಯಲ್ಲಿ ಆದೇಶ ಆಗಿದ್ದರೂ ಇನ್ನು ನ್ಯಾಯ ಸಿಗದ ಬಗ್ಗೆ ಅವರು ಕಣ್ಣೀರಿಟ್ಟರು.

ನನ್ನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಹಳೆಯ ಬಟ್ಟೆಯನ್ನು ಕೊಡದೆ ಮನೆಯಿಂದ ಹೊರಗೆ ಹಾಕಿದರು. ಏಳುವರೆ ತಿಂಗಳು ಹೊಟೇಲಿನಲ್ಲಿ ಕಳೆದ ನಾನು ಈ ಬಗ್ಗೆ ಮಂಡ್ಯ ಎಸಿ ಕೋರ್ಟ್‌ನಲ್ಲಿ ದೂರು ನೀಡಿದೆ. ಅಲ್ಲಿ ಮನೆ ಖಾಲಿ ಮಾಡಿಸಿ ಕೊಡುವಂತೆ ಆದೇಶ ನೀಡಲಾಯಿತು. ಈ ಬಗ್ಗೆ ಸಂಬಂಧ ಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದೆ. ಆದರೂ ನನಗೆ ನ್ಯಾಯ ಸಿಕ್ಕಿಲ್ಲ. ಪೊಲೀಸರು ಕಂದಾಯ ಇಲಾಖೆಗೆ ಹೋಗಿ ಹೇಳಿದರೆ, ಎಸಿ ಬಳಿ ಹೋದರೆ ಅವರು ಪೊಲೀಸರ ಬಳಿ ಹೋಗಲು ಹೇಳುತ್ತಿದ್ದಾರೆ ಎಂದರು.

ಇದೇ ಚಿಂತೆಯಲ್ಲಿ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದೇನೆ. ಇಷ್ಟು ಹೋರಾಟ ಮಾಡಿಯೂ ನನಗೆ ನ್ಯಾಯ ಸಿಕ್ಕಿಲ್ಲ. ನನ್ನನ್ನು ಮನೆ ಯಿಂದ ಹೊರಗೆ ಹಾಕಿ ನನ್ನ ಜೀವನವನ್ನೇ ಸರ್ವನಾಶ ಮಾಡಿದವರಿಗೆ ನನ್ನ ಒಂದು ಕೋಟಿ ಆಸ್ತಿ ಸಿಗಬಾರದು ಎಂದು ಬೇರೆಯವರಿಗೆ ವಿಲ್ ಬರೆದಿಟ್ಟಿದ್ದೇನೆ. ಈ ಕಾಯಿದೆ ಜಾರಿಯಲ್ಲಿದ್ದರೂ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಪೊಲೀಸರಿಗೆ ಈ ಕಾಯಿದೆಯ ಬಗ್ಗೆ ಅರಿವೇ ಇಲ್ಲ. ಇದರಿಂದ ಹಿರಿಯರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಅವರು ದೂರಿದರು.

‘ವೀಸಾ ಪರಿಶೀಲಿಸದೆ ವಿದೇಶದಲ್ಲಿ ಮನೆಕೆಲಸಕ್ಕೆ ಬರಬೇಡಿ’
ಸೌದಿ ಅರೆಬಿಯಾದಲ್ಲಿ ಮನೆ ಕೆಲಸಕ್ಕೆ ಹೋಗಿ ನರಕಯಾತನೆ ಅನುಭವಿಸಿ ಪ್ರತಿಷ್ಠಾನದ ನೆರವಿನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಲು ಸಹಕರಿಸಿದ ಕರ್ನಾ ಟಕ ಎನ್‌ಆರ್‌ಐ ಫೋರಂನ ರೋಶನ್ ರೊಡಿಗ್ರಸ್ ಮಾತನಾಡಿ, ಗಲ್ಫ್ ದೇಶಗಳಲ್ಲಿ ಭಾರತ ಬಿಟ್ಟರೆ ಪಾಕಿಸ್ತಾನ, ಬಾಂಗ್ಲಾದೇಶದ ಮಹಿಳೆಯರು ಮನೆ ಕೆಲಸಕ್ಕೆ ಬರುತ್ತಿಲ್ಲ. ನಮ್ಮ ಕಳ್ಳ ಸಾಗಾಣಿಕೆಯ ಮೂಲಕ ಮಹಿಳೆಯರನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ಇದರಲ್ಲಿ ಅರೆಬಿಯನ್ನರ ಯಾವುದೇ ತಪ್ಪಿಲ್ಲ. ನಮ್ಮವರೆ ಹಣದ ಆಸೆಗಾಗಿ ನಮ್ಮ ಮಹಿಳೆಯರನ್ನು ಬಲಿಕೊಡುತ್ತಿದ್ದಾರೆ. ನಾವು ಈ ವ್ಯವಸ್ಥೆ ಯನ್ನು ಸರಿಪಡಿಸಿಕೊಳ್ಳಬೇಕಾಗಿದೆ. ನಮ್ಮ ಮಹಿಳೆಯರು ಗಲ್ಫ್ ದೇಶಕ್ಕೆ ಹೋಗಿ ದುಡಿಯಬೇಕಾದ ಅವಶ್ಯಕತೆ ಇಲ್ಲ, ಇಲ್ಲಿಯೇ ಸಾಕಷ್ಟು ಅವಕಾಶಗಳಿವೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಮನೆ ಕೆಲಸದ ವಿಸಾಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News