"ಮಾತೃಪೂರ್ಣ" ಯೋಜನೆ ಮಾರ್ಪಾಟು ಒತ್ತಾಯಿಸಿ ಸಭೆ

Update: 2017-10-12 15:52 GMT

ಬಂಟ್ವಾಳ, ಅ. 12: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ "ಮಾತೃಪೂರ್ಣ" ಯೋಜನೆ ತಾಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರಿತಲುಪಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಮಾದರಿಯಲ್ಲಿ ಯೋಜನೆಯನ್ನು ಮಾರ್ಪಾಟು ಮಾಡಬೇಕೆಂದು ಸರಕಾರವನ್ನು ಒತ್ತಾಯಿಸಿ ಗುರುವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಯಿತು.

ಈ ಯೋಜನೆಯಿಂದ ಗರ್ಭಿಣಿಯರು, ಬಾಣಂತಿಯರು ಅಂಗವಾಡಿಗೆ ತೆರಳಿ ಪೌಷ್ಠಿಕಾಂಶ ಸ್ವೀಕರಿಸಲು ಸಾಧ್ಯವಿಲ್ಲ. ಇದು ಅವರಿಗೆ ತ್ರಾಸದಾಯಕವಾಗಿದೆ. ದ.ಕ.ಜಿಲ್ಲೆಗೆ ಈ ಯೋಜನೆ ಸೂಕ್ತವಲ್ಲ ಎಂದು ಸದಸ್ಯ ರಮೇಶ್ ಕುಡ್ಮೇರು ಸಭೆಯ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಒ ಸುಧಾ ಜೋಷಿ ಅವರು ತಾಲೂಕಿನಲ್ಲಿ ಬಹುತೇಕ ಅಂಗವಾಡಿ ಕೇಂದ್ರದಲ್ಲಿ ಅ.2ರಿಂದಲೇ ಈ ಯೋಜನೆ ಕಾರ್ಯಗತವಾಗಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಗುರಿತಲುಪಲು ಸಾಧ್ಯವಾಗುತ್ತಿಲ್ಲ. ಕೆಲ ಅಂಗನವಾಡಿಗಳಿಗೆ ಬೆರಳೆಣಿಕೆಯ ಗರ್ಭಿಣಿಯರು, ಬಾಣಂತಿಯರು ಪೌಷ್ಠಿಕಾಂಶ ಪಡೆಯಲು ಆಗಮಿಸುತ್ತಾರೆ. ಇನ್ನು ಕೆಲವೆಡೆ ಮನೆಗೆ ತಲುಪಿಸುವಂತೆ ವಿನಂತಿಸುತ್ತಿದ್ದಾರೆ. ನಾವು ಈ ಕುರಿತು ಮೇಲಾಧಿಕಾರಿಗಳಿಗೆ ದಿನನಿತ್ಯ ವರದಿ ಸಲ್ಲಿಸಬೇಕಾಗಿದೆ. ಆದರೆ ನಮ್ಮಿಂದ ಗುರಿತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಅಳಿಕೆ ಗ್ರಾಪಂನ ಅಧ್ಯಕ್ಷ ಪದ್ಮನಾಭ ಅವರು ಮಧ್ಯ ಪ್ರವೇಶಿಸಿ ಅಧಿಕಾರಿಗಳು ಸರಕಾರದ ಈ ಯೋಜನೆಯ ಬಗ್ಗೆ ಫಲಾನುಭವಿಗಳ ಮನೆಮನೆಗೆ ತೆರಳಿ ಮಾಹಿತಿ ನೀಡುವ ಮೂಲಕ ಯೋಜನೆಯ ಅನುಷ್ಟಾನಕ್ಕೆ ಸಹಕರಿಸುತ್ತಿದ್ದಾರೆ. ಆದರೆ ಅಂಗನವಾಡಿಯ ಕಾರ್ಯಕರ್ತೆಯರು, ಸಹಾಯಕಿಯರ ವಿರೋಧದಿಂದ ಈಗ ಗೊಂದಲ ಉಂಟಾಗುತ್ತಿದೆ ಎಂದು ಸಭೆಯ ಗಮನ ಸೆಳೆದರು. ಇದನ್ನು ಆಕ್ಷೇಪಿಸಿದ ತಾಪಂ ಸದಸ್ಯ ಯಶವಂತ ಪೊಳಲಿ ಬಾಣಂತಿಯರು 5-6 ಕಿ.ಮೀ. ದೂರದಿಂದ ತೆರಳುತ್ತಿರುವ ಸಂದರ್ಭದಲ್ಲಿ ತೊಂದರೆಯಾದರೆ ಯಾರು ಜವಾಬ್ದಾರಿ ಹೊರುತ್ತಾರೆ ಎಂದು ಪ್ರಶ್ನಿಸಿದರೆ, ಕೆಲವು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯರೇ ಪ್ರತಿನಿತ್ಯ ಕರೆಮಾಡಿ ಕರೆಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಇದರಿಂದ ಈ ಯೋಜನೆಯಲ್ಲಿ ಅವ್ಯವಹಾರಕ್ಕೂ ಎಡೆಮಾಡಿಕೊಡುತ್ತದೆ ಎಂದು ಸದಸ್ಯ ರಮೇಶ್ ಕಡ್ಮೇರು ಗಮನ ಸೆಳೆದರು.

ಪಡಿತರ ಚೀಟಿಗೆ ಸಂಬಂಧಿಸಿ ದಿನಕ್ಕೊಂದರಂತೆ ಸರಕಾರದ ನಿಲುವಿನಿಂದ ಜನ ಸಾಮಾನ್ಯರು ರೋಸಿ ಹೋಗಿದ್ದಾರೆ. ಇನ್ನು ಮುಂದೆ ಪಡಿತರ ಸಾಮಾಗ್ರಿಯೇ ಬೇಡ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿವೆ ಎಂದು ಸದಸ್ಯರು ಸಭೆಯ ಮುಂದೆ ಪಡಿತರ ಸಂಬಂಧಿಸಿ ಸಮಸ್ಯೆಯನ್ನು ಬಿಚ್ಚಿಟ್ಟರು.

ಇಂಟರ್‌ನೆಟ್ ಸೌಲಭ್ಯ ದೊರಕದ ಗ್ರಾಮಗಳನ್ನು ಗುರುತಿಸಿ ಪಟ್ಟಿ ನೀಡುವಂತೆ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಆಹಾರ ಪೂರೈಕೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಕೊನೆಗೆ ಆಹಾರ ಸಚಿವರು ಜಿಲ್ಲೆಯವರೇ ಆಗಿರುವುದರಿಂದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತಾಲೂಕು ಪಂಚಾಯತ್ ಸದಸ್ಯರನ್ನೊಳಗೊಂಡ ನಿಯೋಗ ತೆರಳಲು ನಿರ್ಧರಿಸಲಾಯಿತು.

ಬಿ.ಸಿ.ರೋಡಿನಲ್ಲಿ ಹಳೆ ತಾಲೂಕು ಪಂಚಾಯತ್ ಕಟ್ಟಡವನ್ನು ತೆರವುಗೊಳಿಸುವ ಪ್ರಸ್ತಾಪಕ್ಕೆ ಜಿಲ್ಲಾ ಪಂಚಾಯತ್ ನ್ಯಾಯಲಯದಲ್ಲಿ ತಡೆಯಾಜ್ಞೆ ದೊರೆತಿದೆ. ಈಗಿರುವಾಗ ಕಟ್ಟಡ ತೆರವಿಗೆ ಸಾಧ್ಯವಿದೆಯೇ ಎಂದು ಸದಸ್ಯರಾದ ಉಸ್ಮಾನ್ ಕರೋಪಾಡಿ, ಯಶವಂತ ಪೂಜಾರಿ, ರಮೇಶ್ ಕುಡ್ಮೇರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಹಣಾ ಅಧಿಕಾರಿ ಸಿಪ್ರಿಯಾನ್ ಮಿರಾಂದ ಅವರು, ಅದರ ಬಗ್ಗೆ ನಮ್ಮ ವಕೀಲರು ವಾದ ಮಂಡಿಸುತ್ತಾರೆ, ಈಗಾಗಲೆ ಕಟ್ಟಡ ತೆರವಿಗೆ ಟೆಂಡರ್ ಕರೆಯಲಾಗಿದ್ದು, ಆಪ್ರಕ್ರಿಯೆ ನಡೆಯಲಿದೆ. ಕಟ್ಟಡದಲ್ಲಿ ಕಾರ್ಯಾಚರಿಸುವ ಅಂಗಡಿ ಮಾಲಕರಿಗೆ ಇದರ ಉದ್ದೇಶವನ್ನು ಈ ಮೊದಲೇ ತಿಳಿಸಲಾಗಿದೆ ಎಂದರೆ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವಾಗ ಕೆಲವೊಂದು ಅಡೆತಡೆಗಳು ಸಹಜ. ಸದಸ್ಯರು ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸುವಂತೆ ಉಪಾಧ್ಯಕ್ಷ ಅಬ್ಬಾಸ್ ಅಲಿ ಮನವಿ ಮಾಡಿದರು.

ತಾಲೂಕಿನಲ್ಲಿ ಪ.ಜಾ., ಪಂಗಡ, ಕೊರಗರ ಕಾಲನಿಗಳ, ವಾಸ್ತವ್ಯವಿರುವ ಕುಟುಂಬಗಳ ನಿಖರವಾದ ಅಂಕಿ ಅಂಶದೊಂದಿಗೆ ವಿಸ್ತತವಾದ ವರದಿಯನ್ನು ಸಮಾಜ ಕಲ್ಯಾಣ ಇಲಾಖೆ ತಾಲೂಕು ಪಂಚಾಯತ್‌ಗೆ ಒದಗಿಸಬೇಕೆಂದು ಸದಸ್ಯ ಪ್ರಭಾಕರ್ ಪ್ರಭು ಅವರು ಸಲಹೆ ನೀಡಿದರು.

ತಾಲೂಕು ಪಂಚಾಯತ್ ಸಾಮಾನ್ಯ ಸಭೆ 10.30ಕ್ಕೆ ನಿಗದಿಯಾಗಿದ್ದರೂ ಸುಮಾರು ಒಂದು ತಾಸು ತಡವಾಗಿ ಆರಂಭಗೊಂಡಿತ್ತು, ಅಷ್ಟು ಹೊತ್ತು ಅಧಿಕಾರಿಗಳು, ಸದಸ್ಯರು ಅಧ್ಯಕ್ಷರನ್ನು ಕಾದು ಕುಳಿತರು. ಈ ಹೊತ್ತಿಗೆ ಕಾಂಗ್ರೆಸ್ ಪ್ರತಿಭಟನಾ ಸಭೆ ಬಿ.ಸಿ.ರೋಡಿನಲ್ಲಿ ನಡೆಯುತ್ತಿದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಇದರಲ್ಲಿ ಪಾಲ್ಗೊಂಡಿದ್ದರಿಂದ ತಡವಾಗಿ ಆಗಮಿಸಿದ್ದರು.

ಜಿಪಂ ಸದಸ್ಯ ರವೀಂದ್ರ ಕಂಬಳಿ ಉಪಸ್ಥಿತರಿದ್ದರು. ಸದಸ್ಯರಾದ ಪದ್ಮಶ್ರೀ, ಗೀತಾ ಚಂದ್ರಶೇಖರ್, ಹೈದರ್ ಕೈರಂಗಳ, ಆದಂ ಕುಂಞಿ, ಕುಮಾರ ಭಟ್, ಮಹಾಬಲ ಆಳ್ವ, ಕೊಳ್ನಾಡು ಪಂ.ಅಧ್ಯಕ್ಷ ಸುಭಾಷ್ ಚಂದ್ರ ಶೆಟ್ಟಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಅಧ್ಯಕ್ಷ ಚಂದ್ರಹಾಸ ಕರ್ಕೇರ ಸಭಾಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ ವೇದಿಕೆಯಲ್ಲಿದ್ದರು. ಕಾರ್ಯನಿರ್ವಹಣಾ ಅಧಿಕಾರಿ ಸಿಪ್ರಿಯಾನ್ ಮಿರಾಂದ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News