ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳನ್ನು ಗುರುತಿಸಲು ಆದ್ಯತೆ: ನಿಗಮದ ಅಧ್ಯಕ್ಷ ಎಸ್.ಮಾರೆಪ್ಪ

Update: 2017-10-12 15:58 GMT

ಉಡುಪಿ, ಅ.12: ಸಾಮಾಜಿಕ ಸ್ವಾಸ್ಥವನ್ನು ಕಾಪಾಡುವ ಸಫಾಯಿ ಕರ್ಮಚಾರಿಗಳ ಹಿತವನ್ನು ಕಾಪಾಡುವ ಹೊಣೆ ಸಮಾಜದ್ದು. ಈ ಗುರುತರ ಹೊಣೆ ನಿರ್ವಹಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ದೇಶದಲ್ಲೇ ಮೊದಲನೆ ಯದಾಗಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು, 85 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಯನ್ನು ರೂಪಿಸಿದೆ ಎಂದು ನಿಗಮದ ಅಧ್ಯಕ್ಷ ಎಸ್. ಮಾರೆಪ್ಪ ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಮಾರೆಪ್ಪ, ಗುರುವಾರ ಸಫಾಯಿ ಕರ್ಮಚಾರಿಗಳ ಕಾಲೋನಿಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಗಳನ್ನು ಪರಿಶೀಲಿಸಿದರಲ್ಲದೇ ಬಳಿಕ ಮಣಿಪಾಲದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಜಿಲ್ಲೆಯಲ್ಲಿ ಪೌರಕಾರ್ಮಿಕರ ಸ್ಥಿತಿಗತಿಯ ಕುರಿತು ಸಮಾಲೋಚನೆ ನಡೆಸಿದರು.

ಸೌಲಭ್ಯಗಳನ್ನು ಅರ್ಹರಿಗೆ ನೀಡಲು ಮೊದಲು ಅವರನ್ನು ಗುರುತಿಸುವ ಕೆಲಸವಾಗಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಮಾತ್ರ ಸಫಾಯಿ ಕರ್ಮಚಾರಿಗಳಲ್ಲ. ಸರಕಾರಿ ಕಚೇರಿಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಸ್ವಚ್ಛತೆಯ ಕರ್ತವ್ಯ ನಿರ್ವಹಿಸುವವರಿಗೂ ಗುರುತು ಚೀಟಿ ಒದಗಿಸುವ ಕೆಲಸವಾಗಬೇಕು ಎಂದರು.

ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅನೈರ್ಮಲ್ಯತೆ ಉಡುಪಿಯಲ್ಲಿ ಕಡಿಮೆ ಯಿದೆ. ಇಲ್ಲಿ ಸಫಾಯಿ ಕರ್ಮಚಾರಿಗಳಿಗೆ ಪ್ರತ್ಯೇಕ ಕಾಲೋನಿಗಳಿಲ್ಲ ಎಂಬುದು ಒಳ್ಳೆಯ ಬೆಳವಣಿಗೆ. ಆದರೂ ಸಫಾಯಿ ಕರ್ಮಚಾರಿಗಳನ್ನು ಗುರುತಿಸುವ ಕೆಲಸ ಇಲ್ಲೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದಲೂ ಇವರಿಗೆ ಸೌಲ್ಯಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ 1.40 ಲಕ್ಷ ಜನರನ್ನು ಸಫಾಯಿ ಕರ್ಮಚಾರಿಗಳಾಗಿ ಗುರುತಿಸಿದ್ದು, ಆದರೂ ಇವರ ಸಂಖ್ಯೆ 2.5 ಲಕ್ಷದಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ ಎಂದರು.

ನಿಗಮದ ಕ್ರಿಯಾ ಯೋಜನೆ ಅಡಿಯಲ್ಲಿ ಹಲವಾರು ಯೋಜನೆಗಳಿಗೆ- ಸಫಾಯಿ ಕರ್ಮಚಾರಿಗಳ ಸಮಗ್ರ ಕಾಲೋನಿ ಅಭಿವೃದ್ಧಿ ಯೋಜನೆ, ಕೌಶಲ್ಯ ಅಭಿವೃದ್ಧಿ ಯೋಜನೆ, ಆಶ್ರಯ ಯೋಜನೆ, ಉದ್ಯಮಶೀಲತೆ ಯೋಜನೆ, ನೇರ ಸಾಲ ಯೋಜನೆ- ರಾಜ್ಯ ಸರಕಾರ ಒಟ್ಟು 85 ಕೋಟಿ ರೂ. ವಿನಿ ಯೋಗಿಸಲು ಮುಂದಾಗಿದೆ ಎಂದು ಮಾರೆಪ್ಪ ತಿಳಿಸಿದರು.

ಶಿಕ್ಷಣದಿಂದ ಮಾತ್ರ ಇವರ ಬದುಕು ಬದಲಾಯಿಸಲು ಸಾಧ್ಯವಿದ್ದು, ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಷ್ಠಿತ ಖಾಸಗಿ ಶಾಲಾ ಪ್ರವೇಶಕ್ಕೆ ಶೇ.5 ಮೀಸಲಾತಿ ಲ್ಯವಾಗಿಸುವ ಹೊಣೆ ಸಮಾಜ ಕಲ್ಯಾಣ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ್ದು ಎಂದು ಮಾರೆಪ್ಪ ಹೇಳಿದರು.

ಸಮುದಾಯ ಭವನದ ನಿರ್ಮಾಣ, ರಸ್ತೆ ನಿರ್ಮಾಣ, ಚರಂಡಿ ವ್ಯವಸ್ಥೆ, ಶೌಚಾಲಯದ ನಿರ್ಮಾಣ ಆಗಬೇಕು. ಮೊದಲು ಈ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಪೌರ ಕಾರ್ಮಿಕರಿಗೆ ಭವಿಷ್ಯ ನಿಧಿ ನೀಡುವ ಸಂಬಂಧ ತಪ್ಪುಗಳಾದರೆ ಸ್ಥಳೀಯ ಸಂಸ್ಥೆ ಮುಖ್ಯಸ್ಥರೇ ಹೊಣೆಗಾರರಾಗಿದ್ದು, ಗುತ್ತಿಗೆದಾರರನ್ನು ಬೊಟ್ಟು ಮಾಡುವಂತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಅವರು, ಭವಿಷ್ಯ ನಿಧಿ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕವನ್ನಿರಿಸಿ ಕಾರ್ಮಿಕರಿಗೆ ಭವಿಷ್ಯ ನಿಧಿ ದೊರೆಯುವಂತೆ ಕ್ರಮವಹಿಸಬೇಕು ಎಂದವರು ಅಧಿಕಾರಿಗಳಿಗೆ ತಿಳಿಸಿದರು.

ಪೌರ ಕಾರ್ಮಿಕರು ಹಾಗೂ ಸಫಾಯಿ ಕಾರ್ಮಿಕರ ಭವಿಷ್ಯದ ಬೆಳಕಾಗಿರುವ ಅವರ ಭವಿಷ್ಯ ನಿಧಿಯನ್ನು ಸರಿಯಾಗಿ ಪಾವತಿಸದ ನಗರ ಸ್ಥಳೀಯ ಸಂಸ್ಥೆಗಳ ಸಂಬಂಧಿತ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು. ಅವರುಗಳು ದುಡಿದ ಸಂಬಳದಲ್ಲಿ ಭವಿಷ್ಯನಿಧಿಯನ್ನು ಕಡಿತ ಮಾಡಿದ ಬಳಿಕ ಕಟ್ಟದಿದ್ದರೆ ಅದೊಂದು ಕ್ರಿಮಿನಲ್ ಅಪರಾಧ ಎಂದು ಅವರು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ನಿಗಮದ ಸದಸ್ಯರಾದ ಭಾನುಪ್ರಸಾದ್, ಬಿ.ಎ. ಕೇಶವಮೂರ್ತಿ, ನಗರಸಭೆಯ ಪೌರಾಯುಕ್ತ ಡಿ. ಮಂಜುನಾಥ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅರುಣ ಪ್ರಭ, ಮುಖ್ಯಾಧಿಕಾರಿಗಳಾದ ಗೋಪಾಲಕೃಷ್ಣ, ರಾಯಪ್ಪ, ಮೇಬಲ್ ಡಿಸೋಜಾ ಮುಂತಾದವರು ಉಪಸ್ಥಿತದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News