ಕುರ್‌ಆನ್‌ಗೆ ಅವಮಾನ ಆರೋಪ: ಪ್ರತಿಭಟನಾ ಸಮಾವೇಶ

Update: 2017-10-13 14:28 GMT

ಮಂಗಳೂರು, ಅ.13:  ಪವಿತ್ರ ಗ್ರಂಥ ‘ಕುರ್‌ಆನ್’ಗೆ ಅವಮಾನ ಮಾಡಿರುವ ಪೊಲೀಸ್ ಅಧಿಕಾರಿ ರಕ್ಷಿತ್ ಗೌಡ ಸಹಿತ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು ಎಂದು ಪಿಯುಸಿಎಲ್ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಬಿ.ಡೇಸಾ ಆಗ್ರಹಿಸಿದ್ದಾರೆ.

ಬಂಟ್ವಾಳ ಪೊಲೀಸರು ಆರೋಪಿಯೋರ್ವನ ಮನೆಯ ತಪಾಸಣೆಯ ಸಂದರ್ಭದಲ್ಲಿ ಕುರ್‌ಆನ್‌ಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಮನೆಗೆ ಭೇಟಿ ನೀಡಿದ್ದ ಪೊಲೀಸರು ತಪಾಸಣೆ ನಡೆಸುವ ಸಂದರ್ಭದಲ್ಲಿ  ಪವಿತ್ರ ಗ್ರಂಥ ಕುರ್‌ಆನ್‌ಗೆ ಅವಮಾನ ಮಾಡಿರುವುದು ನಿಜ. ನಮ್ಮ ಸತ್ಯ ಶೋಧನಾ ಸಮಿತಿಯಿಂದ ಇದು ಬಹಿರಂಗವಾಗಿದೆ. ಕಳೆದ 50 ವರ್ಷಗಳಿಂದ ನಾನು ಮಾನವ ಹಕ್ಕುಗಳ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.

ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮುಸ್ಲಿಮರು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಧಾರ್ಮಿಕವಾಗಿ ಎಲ್ಲಾ ಸಮುದಾಯಗಳಲ್ಲೂ ಭಿನ್ನಾಭಿಪ್ರಾಯಗಳು ಇವೆ. ಆದರೆ, ಇಂತಹ ವಿಷಯಗಳಲ್ಲಿ ಮುಸ್ಲಿಮರು ತಮ್ಮೊಳಗಿನ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಸಲಹೆ ನೀಡಿದರು.

ಕುರ್‌ಆನ್‌ಗೆ ಅವಮಾನ ಸಹಿಸೆವು: ಯಾಕೂಬ್ ಸಅದಿ

ಪವಿತ್ರಗ್ರಂಥ ಕುರ್‌ಆನ್‌ಗೆ ಅವಮಾನವನ್ನು ಸಹಿಸುವುದಿಲ್ಲ ಎಂದು ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಯಾಕೂಬ್ ಸಅದಿ ಹೇಳಿದರು.

ಗೋಹತ್ಯೆ ವಿಚಾರ, ಮುಸ್ಲಿಂ ಹುಡುಗಿಯರ ಸ್ಕಾರ್ಪ್ ವಿಚಾರಕ್ಕೆ ಸಂಬಂಧಿಸಿ ಮುಸ್ಲಿಮರ ಭಾವನೆಗಳನ್ನು ಕೆರಳಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ, ಈ ವಿಚಾರದಲ್ಲಿ ನ್ಯಾಯಕ್ಕಾಗಿ ಹೋರಾಟಗಳನ್ನು ಮಾಡಬೇಕಾದ ಸ್ಥಿತಿ ಬಂದಿರುವುದು ದುರದೃಷ್ಟಕರ. ಆಡಳಿತ ವರ್ಗ, ಪೊಲೀಸ್ ಇಲಾಖೆಯಿಂದ ಯಾವಾಗ ನ್ಯಾಯ ಸಿಗುವುದಿಲ್ಲವೋ ಅಂತಹ ಸಂದರ್ಭದಲ್ಲಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದರು.

ಪವಿತ್ರ ಗ್ರಂಥ ಕುರ್‌ಆನ್‌ಗೆ ಮಾಡಿರುವ ಅಗೌರವವನ್ನು ತುಚ್ಚವಾಗಿ ಪರಿಗಣಿಸಲಾಗದು. ಅದನ್ನು ಯಾರೋ ಸ್ವತಃ ಬರೆದ ಗ್ರಂಥವಲ್ಲ. ಅದು ಸಕಲ ಮಾನವ ಕುಲದ ಮಾರ್ಗದರ್ಶನಕ್ಕಾಗಿ ಸೃಷ್ಟಿಕರ್ತನಿಂದ ಅವತೀರ್ಣಗೊಂಡ ಗ್ರಂಥವಾಗಿದೆ. ಆದ್ದರಿಂದ ಯಾವ ಮುಸ್ಲಿಮನೂ ಕೂಡ ಕುರ್‌ಆನ್‌ನ್ನು ಮುಂದಿಟ್ಟು ರಾಜಕೀಯ ಮಾಡಲಾರ. ಕುರ್‌ಆನ್‌ನ ಮೇಲೆ ಕೈ ಇಟ್ಟು ಮಾತನಾಡಲು ಕೂಡ ಯಾರೂ ಧೈರ್ಯ ತೋರುವುದಿಲ್ಲ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಒಕ್ಕೂಟದ ತಂಡ ಮತ್ತು ಪಿ.ಬಿ. ಡೇಸಾ ನೇತೃತ್ವದ ಸತ್ಯ ಶೋಧನಾ ಸಮಿತಿಯ ತಂಡ ಮನೆಗೆ ತೆರಳಿದಾಗಲೂ ಮನೆಯವರು ಕುರ್‌ಆನ್ ನೆಲ ಕ್ಕೆಸೆದಿರುವುದನ್ನು ನಿಜ ಎಂದಿದ್ದಾರೆ. ಆದ್ದರಿಂದ ರಾಜ್ಯ ಸರಕಾರ ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬೇಡಿಕೆ ಈಡೇರುವವರೆಗೆ ಹೋರಾಟ: ಕೆ.ಅಶ್ರಫ್‌

ಪವಿತ್ರ ಗ್ರಂಥ ‘ಕುರ್‌ಆನ್’ನ್ನು ಅವಮಾನ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಹೇಳಿದ್ದಾರೆ.

‘ಕುರ್‌ಆನ್’ನ್ನು ಅವಮಾನ ಮಾಡಿದ ಹಾಗೂ ಅದನ್ನು ವರದಿ ಮಾಡಿದ ಪತ್ರಕರ್ತನನ್ನು ಬಂಧಿಸಿರುವ ಬಂಟ್ವಾಳ ಪೊಲೀಸರ ಕ್ರಮದ ವಿರುದ್ಧ ಗೃಹ ಸಚಿವರು ಸಹಿತ ಜಿಲ್ಲೆಯ ಸಚಿವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದೆವು. ಸಚಿವರಿಂದ ಭರವಸೆ ಸಿಕ್ಕಿದೆಯೇ ಹೊರತು ಈವರೆಗೆ ನ್ಯಾಯ ಸಿಕ್ಕಿಲ್ಲ ಎಂದರು.

ಜಿಲ್ಲೆಯ ಕೆಲವು ಪೊಲೀಸರು ಮುಸ್ಲಿಮರ ಬಗ್ಗೆ ತಾರತಮ್ಯದ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ತಪ್ಪು ಮಾಡಿವರಿಗೆ ಮಾತ್ರ ಶಿಕ್ಷೆಯಾಗಬೇಕು. ಆದರೆ, ನಿರಪರಾಧಿಗಳ ಮೇಲೆ 307 ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುವ ಮತ್ತು ಮುಸ್ಲಿಮರನ್ನು ಅಪರಾಧಿಗಳನ್ನಾಗಿ ನೋಡುವ ಮನೋಸ್ಥಿತಿ ಕೊನೆಗೊಳ್ಳಬೇಕು ಎಂದರು.

ಸೈಯದ್ ಸೈಫುಲ್ಲಾ ತಂಙಳ್ ಮಂಜೇಶ್ವರ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೇಲ್ ಕಂದಕ್, ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಕಾರ್ಪೊರೇಟರ್ ಅಝೀಝ್ ಕುದ್ರೋಳಿ, ಆಲ್ ಇಂಡಿಯಾ ಇಮಾಂ ಕೌನ್ಸಿಲ್‌ನ ಝಫರ್ ಫೈಝಿ, ಪಿಎಫ್‌ಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ಹಮೀದ್ ಕುದ್ರೋಳಿ, ಹಮೀದ್ ಕಂದಕ್, ಸಿದ್ದೀಕ್ ತಲಪಾಡಿ, ಹಿದಾಯತ್ ಮಾರಿಪಳ್ಳ, ಅದ್ದು ಸುರತ್ಕಲ್, ಇಕ್ಬಾಲ್ ಮುಲ್ಕಿ, ಸಿ.ಎಂ.ಮುಸ್ತಫಾ, ಮೊಯ್ದಿನ್ ಮೋನು, ಅಹ್ಮದ್ ಬಾವ ಬಜಾಲ್, ಹಿದಾಯತ್ ಸುರತ್ಕಲ್, ಝಾಕಿರ್ ಉಳ್ಳಾಲ್, ಸೇವಾದಳದ ಅಶ್ರಫ್, ಮುಹಮ್ಮದ್ ಹನೀಫ್ ಯು. ಮೊದಲಾದವರು ಉಪಸ್ಥಿತರಿದ್ದರು.

ಒಕ್ಕೂಟದ ಸದಸ್ಯ ಅಶ್ರಫ್ ಕಿನಾರಾ ಸ್ವಾಗತಿಸಿದರು. ಮನ್ಸೂರ್ ಕುದ್ರೋಳಿ ವಂದಿಸಿದರು.

ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ

ಧಾರ್ಮಿಕ ಗ್ರಂಥ ಕುರ್‌ಆನ್ ಮೌಲ್ಯಚ್ಯುತಿಗೊಳಿಸಿದ ಎಸ್‌ಐ ರಕ್ಷಿತ್ ಗೌಡ ಮತ್ತು ಅವರೊಂದಿಗಿದ್ದ ಇತರ ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯದಿಂದ ಅಮಾನತಿನಲ್ಲಿಟ್ಟು ತನಿಖೆಗೊಳಪಡಿಸಬೇಕು. ಪತ್ರಕರ್ತ ಇಮ್ತಿಯಾಝ್‌ರ ಮೇಲಿನ ಪ್ರಕರಣವನ್ನು ಸರಕಾರ ಹಿಂದಕ್ಕೆ ಪಡೆಯಲು ಆಡಳಿತಕ್ಕೆ ನಿರ್ದೇಶನ ನೀಡಬೇಕು. ಪೊಲೀಸ್ ದೌರ್ಜನ್ಯಕ್ಕೊಳಗಾಗಿರುವ ಅಹ್ಮದ್ ಖುರೇಷಿಯ ಮೇಲಿನ ದೌರ್ಜನ್ಯ ವರದಿಯನ್ನು ಪ್ರಕಟಗೊಳಿಸಬೇಕೆಂದು ಆಡಳಿತಕ್ಕೆ ನಿರ್ದೇಶನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿಸಲ್ಲಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News