ತುಳು ಕಲಿಕಾ ತರಬೇತಿ ಕಾರ್ಯಕ್ರಮ ಉದ್ಘಾಟನೆ

Update: 2017-10-13 14:46 GMT

ಮಂಗಳೂರು, ಅ.13: ತುಳು ಭಾಷೆಯನ್ನು ಅತ್ಯಂತ ಸರಳ ರೀತಿಯಲ್ಲಿ ತುಳುವೇತರರಿಗೆ ಮನ ಮುಟ್ಟುವ ರೀತಿಯಲ್ಲಿ ತರಬೇತಿ ಮಾಡುವ ಕಾರ್ಯ ತುಳು ಸಾಹಿತ್ಯ ಅಕಾಡಮಿಯಿಂದ ನಿರಂತರವಾಗಿ ನಡೆಯಲಿ ಎಂದು ಶಾಸಕ ಜೆ.ಆರ್.ಲೋಬೋ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಆಶ್ರಯದಲ್ಲಿ ಉರ್ವದಲ್ಲಿರುವ ಅಕಾಡಮಿಯ ಚಾವಡಿಯಲ್ಲಿ ಶುಕ್ರವಾರ ಆಯೋಜಿಸಲಾದ ತುಳುವೇತರರಿಗೆ ತುಳು ಕಲಿಕಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತುಳು ಭಾಷೆಯನ್ನು ಆಡು ಭಾಷೆಯ ಮೂಲಕ ಕಲಿಸುವ ಕೆಲಸ ಆಗಬೇಕು. ಈ ಮೂಲಕ ತುಳು ಕಲಿಕೆ ತುಳುವೇತರರಿಗೂ ಸುಲಭವಾಗಲಿದೆ. ಮೊದಲ ಬಾರಿಗೆ ಈ ನೆಲೆಯಲ್ಲಿ ತುಳು ಅಕಾಡಮಿಯು ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಇದು ತುಳು ಭಾಷೆಗೆ ಸಲ್ಲಿಸುವ ಬಹುದೊಡ್ಡ ಸೇವೆ ಎಂದು ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು.

ಮಂಗಳೂರು ನಗರ ಪಾಲಿಕೆ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಮಾತನಾಡಿ, ತುಳು ಭಾಷೆ ತುಳುನಾಡಿನ ಸಂಸ್ಕೃತಿಯ ರಾಯಭಾರಿಯಾಗಿದೆ. ಈ ನಿಟ್ಟಿನಲ್ಲಿ ತುಳು ಕಲಿಕೆಯ ಪ್ರಯತ್ನ ಆರಂಭಿಸಿರುವುದು ಶ್ಲಾಘನೀಯ ಎಂದರು.

ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ರೂಪಕಲಾ ಆಳ್ವ ವಿಶೇಷ ಉಪನ್ಯಾಸ ನೀಡಿದರು. ಮಂಗಳೂರು ನಗರ ಪಾಲಿಕೆ ಸದಸ್ಯ ರಾಧಾಕೃಷ್ಣ, ರಿಜಿಸ್ಟ್ರಾರ್ ಚಂದ್ರಹಾಸ್ ರೈ ಉಪಸ್ಥಿತರಿದ್ದರು. ನರೇಶ್ ಸಸಿಹಿತ್ಲು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News