ದುಬೈಯಿಂದ ಅಕ್ರಮ ಚಿನ್ನ ಸಾಗಾಟ: ನಾಲ್ವರು ಆರೋಪಿಗಳ ಸೆರೆ

Update: 2017-10-13 15:37 GMT

ಮಂಗಳೂರು, ಅ. 13: ದುಬೈಯಿಂದ ಮಂಗಳೂರಿಗೆ ಅಕ್ರಮವಾಗಿ 16 ಚಿನ್ನದ ಬಿಸ್ಕತ್‌ಗಳನ್ನು ಸಾಗಾಟ ಮಾಡುತ್ತಿದ್ದಾರೆ ಎನ್ನಲಾದ ನಾಲ್ವರು ಆರೋಪಿ ಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಹಾಗೂ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಗೋವಾದ ಅಬ್ದುಲ್ ವಹೀದ್ (32), ತಮಿಳುನಾಡಿನ ಬಾಸಿತ್ (40), ಭಟ್ಕಳದ ಶಿರಾಲಿ ನಿವಾಸಿಗಳಾದ ಆತಿಕ್ ರಹ್ಮಾನ್ (37) ಹಾಗೂ ಲಿಯಾಖತ್ ಅಕ್ಬರಿ (42) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಬಂಧಿತರಿಂದ ಸುಮಾರು 57.5 ಲಕ್ಷ ರೂ. ಮೌಲ್ಯದ  ಚಿನ್ನ ವಶಪಡಿಸಿಕೊಂಡಿದ್ದಾರೆ. ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 4.30ಕ್ಕೆ ಬಂದಿಳಿದ ವಿಮಾನದಲ್ಲಿ ಅಕ್ರಮ ಚಿನ್ನದ ಬಿಸ್ಕತ್ ಸಾಗಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಸಾಕ್ಸ್‌ನಲ್ಲಿಟ್ಟು ಸಾಗಾಟ

ಬ್ದುಲ್ ವಹೀದ್, ಬಾಸಿತ್, ಆತಿಕ್ ರಹ್ಮಾನ್ ಬಳಿಯಿಂದ ಒಟ್ಟು 9 ಚಿನ್ನದ ಬಿಸ್ಕತ್ತುಗಳನ್ನು ಹಾಗೂ ಲಿಯಾಖತ್ ಅಕ್ಬರಿ ಬಳಿಯಿಂದ 7 ತುಂಡು ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಚಿನ್ನವನ್ನು ಸಾಕ್ಸ್‌ನಲ್ಲಿ ತುಂಬಿಸಿ ಸಾಗಾಟ ಮಾಡಿದ್ದರು. ದೊಡ್ಡ ಗಾತ್ರದ ಶೂ ಧರಿಸಿದ್ದ ಅವರನ್ನು ಅನುಮಾನದ ಮೇರೆಗೆ ತಪಾಸಣೆಗೊಳಪಡಿಸಿದಾಗ ಈ ಅಕ್ರಮ ಸಾಗಾಟ ಪತ್ತೆಯಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಡಿಆರ್‌ಐ ಉಪನಿರ್ದೇಶಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News