ಮಂಗಳೂರು ವಿವಿ: ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ

Update: 2017-10-13 16:32 GMT

ಕೊಣಾಜೆ, ಅ. 13: 1857 ರಲ್ಲಿ ನಡೆದ ದಂಗೆಯ ನಂತರ 1942ರ ವರೆಗೂ ಬ್ರಿಟೀಷರ ವಿರುದ್ದ ಅಂತಹ ಪರಿಣಾಮಕಾರಿ ಹೋರಾಟಗಳು ನಡೆದಿರಲಿಲ್ಲ. ಆದರೆ ಕ್ವಿಟ್ ಇಂಡಿಯಾ ಚಳುವಳಿಗೆ ಮಹಾತ್ಮ ಗಾಂಧೀಜಿ ಅವರು ಕರೆ ಕೊಟ್ಟ ಬಳಿಕ ಆಗಸ್ಟ್ ನಲ್ಲಿ ಆರಂಭವಾದ ಚಳುವಳಿ ಕೇವಲ ಎರಡು ತಿಂಗಳ ಕಾಲವಷ್ಟೇ ನಡೆದರೂ ಸ್ವಾತಂತ್ರ ಹೋರಾಟದಲ್ಲಿ ಹಲವಾರು ಪರಿಣಾಮಗಳನ್ನು ಸೃಷ್ಟಿ ಮಾಡಿತ್ತು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸುರೇಂದ್ರ ರಾವ್ ಅವರು ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಆಶ್ರಯದಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯ 75ನೇ ವರ್ಷಾಚರಣೆಯ ಅಂಗವಾಗಿ ವಿವಿಯ ಹಳೆ ಸೆನೆಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಭಾರತದ ಇತಿಹಾಸದಲ್ಲಿ ಹಲವಾರು ಚಳುವಳಿ ಹೋರಾಟಗಳು ನಡೆದಿವೆ. ಆದರೆ ಎಲ್ಲಾ ಚಳುವಳಿಗಳಿಗಿಂತಲೂ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳುವಳಿಯು ಹೆಚ್ಚು ಪರಿಣಾಮಕಾರಿಯಾಗಿತ್ತು. ಈ ಚಳುವಳಿಯು ಹೆಚ್ಚಾಗಿ ಯುವ ಸಮುದಾಯ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಿತ್ತು ಜೊತೆಗೆ ಕ್ರಾಂತಿಯುತವಾಗಿತ್ತು ಎಂದು ಹೇಳಿದರು.

ಗಾಂಧೀಜಿ ಅವರು ಹೋರಾಟಕ್ಕೆ ಇಳಿದ ಮರುದಿನವೇ ಬಂಧನವಾದರೂ ಅವರ ನಂತರ ಎರಡನೇ ಹಂತದ, ಮೂರನೇ ಹಂತದ ನಾಯಕರು ಮುಂಚೂಣಿಯಲ್ಲಿದ್ದು ಹೋರಾಟ ಮುಂದುವರಿಯಿತು. ಕ್ವಿಟ್ ಇಂಡಿಯಾ ಚಳುವಳಿಯ ಹೋರಾಟ ನಮ್ಮ ಕರಾವಳಿಯಲ್ಲಿಯೂ ಸಂಘಟನಾತ್ಮಕವಾಗಿ ನಡೆದಿತ್ತು. ಅಮ್ಮೆಂಬಳ ಬಾಳಪ್ಪ ನಂತಹ ಹಲವಾರು ಯುವ ಸಮುದಾಯ ಆ ಸಮಯದಲ್ಲಿ ಬಂಧತನಕೊಳಪಟ್ಟಿದ್ದರು ಎಂದರು.

ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ಉದಯ ಬಾರ್ಕೂರು ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿದ್ಯಾರ್ಥಿ ಹನುಮಂತಪ್ಪ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News