'ಸಾಲಮನ್ನಾ ಪ್ರಾಮಾಣಿಕರಿಗೂ ಸಿಗಬೇಕು'

Update: 2017-10-13 17:27 GMT

ಪುತ್ತೂರು, ಅ. 13: ರಾಜ್ಯ ಸರಕಾರ ಮಾಡಿರುವ ರೈತರ ಸಾಲ ಮನ್ನಾ ಯೋಜನೆಯಲ್ಲಿ ಸಮಯಕ್ಕೆ ಸರಿಯಾಗಿ, ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿದವರು ಈ ಸೌಲಭ್ಯದಿಂದ ವಂಚಿತರಾಗಿದ್ದು, ಅವರಿಗೂ ಸಾಲಮನ್ನಾ ಸೌಲಭ್ಯ ಸಿಗುವಂತೆ ಸರಕಾರವನ್ನು ಆಗ್ರಹಿಸುವ ನಿರ್ಣಯವನ್ನು ಶುಕ್ರವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಕೈಗೊಳ್ಳಲಾಯಿತು.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಸಹಕಾರ ಇಲಾಖೆಯ ಅಧಿಕಾರಿ ಮಾಹಿತಿ ನೀಡಿ, ತಾಲೂಕಿನಲ್ಲಿ ಒಟ್ಟು 17502 ರೈತರು ಸಾಲಮನ್ನಾ ಸೌಲಭ್ಯ ಪಡೆದಿದ್ದು, ರು.80.50 ಕೋಟಿ ರೈತರ ಸಾಲಮನ್ನಾ ಆಗಿದೆ. ಆದರೆ ತಾಂತ್ರಿಕ ಕಾರಣಗಳಿಂದ 1813 ಮಂದಿ ಸಾಲಮನ್ನಾ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇವರ 9.06ಕೋಟಿ ಸಾಲಮನ್ನಾ ಆಗಬೇಕಿತ್ತು. ಸಾಲಮನ್ನಾ ಸೌಲಭ್ಯ ಎಲ್ಲರಿಗೂ ದೊರೆಯಬೇಕು. ಅದರಲ್ಲೂ ಪ್ರಮಾಣಿಕವಾಗಿ ಸಾಲ ಮರುಪಾವತಿ ಮಾಡಿದ ಕುಟುಂಬಗಳಿಗೆ ಈ ಸೌಲಭ್ಯ ದೊರೆಯಲೇ ಬೇಕು. ಈ ಬಗ್ಗೆ ಸರಕಾರವನ್ನು ಆಗ್ರಹಿಸಲು ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದರು.

ಬೆಟ್ಟಂಪಾಡಿಯ ಕೊರಿಂಗಿಲ ಎಂಬಲ್ಲಿ ರಾತೋರಾತ್ರಿ ಕೊಳವೆ ಬಾವಿಯೊಂದನ್ನು ಕೊರೆಯಲಾದ ವಿಚಾರಕ್ಕೆ ಸಂಬಂಧಿಸಿ ಶಕುಂತಳಾ ಶೆಟ್ಟಿ ಜಿ.ಪಂ. ಇಂಜಿನಿಯರ್ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇಲ್ಲಿನ ಕುಡಿಯುವ ನೀರು ಯೋಜನೆಯ ಕೊಳವೆ ಬಾವಿ ಲೋಕೋಪಯೋಗಿ ಇಲಾಖೆ ರಚಿಸಿದ ಸೇತುವೆಯ ಮಧ್ಯಭಾಗದಲ್ಲಿ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಹೊಸ ಕೊಳವೆ ಬಾವಿಯನ್ನು ಕೊಡುವುದಾಗಿ ಲೋಕೋಪಯೋಗಿ ಇಲಾಖೆ ತಿಳಿಸಿತ್ತು. ಆದರೆ ತರಾತುರಿಯಲ್ಲಿ ಜಿ.ಪಂ.ಇಂಜಿನಿಯರ್ ಇಲಾಖೆ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಇಲ್ಲಿ ಹೊಸ ಕೊಳವೆ ಬಾವಿ ನಿರ್ಮಿಸಿತ್ತು. ಈ ಬಗ್ಗೆ ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಈ ಬಗ್ಗೆ ಪ್ರಸ್ತಾಪಿಸಿದರು.

ಈ ಬಗ್ಗೆ ಆಕ್ರೋಶಗೊಂಡ ಶಾಸಕಿ ಶಕುಂತಳಾ ಶೆಟ್ಟಿ ಪಿಡಬ್ಲುಡಿ ಇಲಾಖೆ ಕೊಳವೆ ಬಾವಿ ರಚಿಸಿ ಕೊಡುತ್ತೇವೆ ಎಂದಿದ್ದರೂ ನೀವ್ಯಾಕೆ ಹೊಸ ಕೊಳವೆ ಬಾವಿ ಕೊರೆಯಲು ಮುಂದಾಗಿದ್ದು, ನಿಮಗೇನು ಅಷ್ಟು ಅರ್ಜಂಟ್...! ಬೇಕಿದ್ದ ಕಡೆಗಳಲ್ಲಿ ಕೊಳವೆ ಬಾವಿ ಮಾಡುವುದಕ್ಕೆ ನೀವು ಮುಂದಾಗುವುದಿಲ್ಲ. ಬೇಡವಾದ ಕಡೆಗೆ ಕೂಡಲೇ ಓಡುತ್ತೀರಿ. 100 ಅಡಿಯಲ್ಲಿ ನೀರು ಸಿಕ್ಕಿದರೆ 400 ಅಡಿ ಎಂದು ಬಿಲ್ ಮಾಡುತ್ತೀರಿ. ಹೀಗೆ ಮಾಡಿದರೆ ನಿಮ್ಮ ಇಂಜಿನಿಯರ್ ಸಂಬಳ ದಿಂದ ಕೊಳವೆ ಬಾವಿ ವೆಚ್ಚ ನೀಡುವಂತೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಮತದಾರ ಪಟ್ಟಿಯಲ್ಲಿ ಹಲವಾರು ತಪ್ಪುಗಳನ್ನು ಕಂಡು ಬರುತ್ತಿವೆ. ಇದನ್ನು ತಕ್ಷಣ ಸರಪಡಿಸಬೇಕು. ಹಿಂದು ಅಪ್ಪ ಮುಸ್ಲಿಂ ಮಗ. ಹಿಂದು ಗಂಡ ಮುಸ್ಲಿಂ ಹೆಂಡತಿ, ಮುಸ್ಲಿಂ ಮಗ ಕ್ರಿಶ್ಚನ್ ಅಪ್ಪ ಹೀಗೆ ಮತದಾರ ಪಟ್ಟಿ ಇಡೀ ಅವ್ಯವಸ್ಥೆಯ ಗೂಡಾಗಿದೆ. ಇದನ್ನು ಸರಿಪಡಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಜನ ನಿಮ್ಮನ್ನು ಹಿಡಿದು ಹೊಡೆಯುತ್ತಾರೆ ಎಂದು ಕಂದಾಯ ಇಲಾಖೆ ಅಧಿಕಾರಿಗಳನ್ನು ಶಾಸಕಿ ಶಕುಂತಳಾ ಶೆಟ್ಟಿ ಎಚ್ಚರಿಸಿದರು.

ಬಜತ್ತೂರು ಗ್ರಾಮ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಈ ಸಮಸ್ಯೆ ಕಂಡುಬಂದಿದೆ. ಮತದಾರ ಪಟ್ಟಿ ತೀರಾ ಕೆಟ್ಟ ಸ್ಥಿತಿಯಲ್ಲಿದೆ. ಇದನ್ನು ಮೊದಲು ಸರಿಪಡಿಸಿ ಎಂದು ತಹಶೀಲ್ದಾರ್ ಅನಂತ ಶಂಕರ ಅವರಿಗೆ ಸೂಚಿಸಿದರು.

ಕೆಲವು ಸರಕಾರಿ ಬಸ್ಸುಗಳಲ್ಲಿ ಇದೀಗ ಕ್ಯಾಸೆಟ್ ಮೂಲಕ ಊರಿನ ಹೆಸರು ಹೇಳುವ ಕ್ರಮ ಪ್ರಾರಂಭವಾಗಿದೆ. ಆದರೆ ಇದರಲ್ಲಿ ಊರಿನ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ನಾಮನಿರ್ದೇಶನ ಸದಸ್ಯ ಅಶೋಕ್ ಸಂಪ್ಯ ಆಕ್ಷೇಪಿಸಿದರು. ಬೊಳುವಾರು ಬದಲಿಗೆ ಬೋಳ್‌ವಾರ್, ನೆಹರು ನಗರದ ಬದಲಿಗೆ ನಗರ, ಮಂಜಲ್ಪಡ್ಪು ಬದಲಿಗೆ ಮಂಜಲ್‌ಪದವು ಹೀಗೆ ಊರಿನ ಸಾಂಪ್ರದಾಯಿಕ ಹೆಸರುಗಳನ್ನು ತಿರುಚಿ ಹಾಕಲಾಗಿದೆ. ಆದರೆ ಜಾಹೀರಾತುಗಳು ಮಾತ್ರ ಸಮರ್ಪಕವಾಗಿದೆ. ಇದು ಊರಿನ ಹೆಸರಿಗೆ ಕೆಎಸ್‌ಆರ್‌ಟಿಸಿ ಅವಮಾನ ಮಾಡುವಂತೆ ಕಂಡುಬರುತ್ತಿದೆ ಎಂದರು. ಈ ಬಗ್ಗೆ ಪ್ರತಿಕ್ರಯಿಸಿದ ಶಾಸಕಿ ಶಕುಂತಳಾ ಶೆಟ್ಟಿ ಇಲಾಖಾಧಿಕಾರಿಗೆ ಇದನ್ನು ತಕ್ಷಣ ಸರಿಪಡಿಸಬೇಕು. ನಾಳೆಯಿಂದಲೇ ಊರಿನ ಹೆಸರು ಸರಿಯಾಗಿರಬೇಕು ಎಂದು ಸೂಚಿಸಿದರು.

ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಕೆಲವು ಬಸ್ಸುಗಳಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ಕೊಡಲಾಗುತ್ತಿದೆ ಎನ್ನುವ ವಿಚಾರವಾಗಿ ಖಾರವಾಗಿ ಪ್ರತಿಕ್ರಯಿಸಿದ ಶಾಸಕಿ ಶಕುಂತಳಾ ಶೆಟ್ಟಿ ಯಾವುದೇ ಕಾರಣಕ್ಕೂ ಇಂತಹ ಘಟನೆಗಳು ಮುಂದೆ ನಡೆಯಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಹೆಣ್ಣು ಮಕ್ಕಳಿಗೆ ಮಾನಸಿಕ ಕಿರುಕುಳ ನೀಡುವ ವ್ಯಕ್ತಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದವರು ತಿಳಿಸಿದರು. ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಾಲೇಜು ಯುವತಿಯರಿಗೆ ಕಿರುಕುಳ ನೀಡುವ ವಿಚಾರ ಗಮನಕ್ಕೆ ಬಂದಿದೆ. ಇದೇ ರೀತಿ ಸರಕಾರಿ ಬಸ್ಸುಗಳಲ್ಲಿ ವಿದ್ಯಾರ್ಥಿನಿಯರಿಗೆ ಅವ್ಯಾಚ್ಛ ಶಬ್ದಗಳಿಂದ ಬೈಯ್ಯುವ ನಿರ್ವಾಹಕರುಗಳ ಬಗ್ಗೆಯೂ ತಿಳಿದು ಬಂದಿದೆ. ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ತೊಂದರೆಯಾಗಬಾರದು.

ಸಂಜೆ ವೇಳೆ ವಿದ್ಯಾರ್ಥಿನಿಯರು ಸೂಚಿಸುವ ಸ್ಥಳದಲ್ಲಿಯೇ ಬಸ್ಸುಗಳನ್ನು ನಿಲ್ಲಿಸಬೇಕು. ಅವರೊಂದಿಗೆ ಅಸಭ್ಯವಾಗಿ ಮಾತಾಡುವ ನಿರ್ವಾಹಕರು ಇದನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾದೀತು ಎಂದವರು ಕೆಎಸ್‌ಆರ್‌ಟಿಸಿ ಅಧಿಕಾರಿಗೆ ಖಡಕ್ ಸೂಚನೆ ನೀಡಿದರು.

 ತ್ರೈಮಾಸಿಕ ಕೆಡಿಪಿ ಸಭೆಯ ವೇದಿಕೆಯಲ್ಲಿ ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಬಜತ್ತೂರು, ಜಿಲ್ಲಾ ಪಂಚಾಯತ್ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್, ತಹಶೀಲ್ದಾರ್ ಅನಂತಶಂಕರ, ಕಡಬ ವಿಶೇಷ ತಹಶೀಲ್ದಾರ್ ಜಾನ್ ಪ್ರಕಾಶ್ ಉಪಸ್ಥಿತರಿದ್ದರು. ನಾಮನಿರ್ದೇಶನ ಸದಸ್ಯರಾದ ಸೋಮನಾಥ್ ಉಪ್ಪಿನಂಗಡಿ, ಅಶ್ರಫ್ ಬಸ್ತಿಕಾರ್, ಕೃಷ್ಣಪ್ರಸಾದ್ ಆಳ್ವ, ಕೃಷ್ಣಕುಮಾರ್ ರೈ ಕೆದಂಬಾಡಿ ಗುತ್ತು, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಜಿಪಂ ಸದಸ್ಯರಾದ ಅನಿತಾ ಹೇಮನಾಥ್ ಶೆಟ್ಟಿ, ಪ್ರಮೀಳಾ ಜನಾರ್ಧನ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News