'ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ ಸುಳ್ಳು'

Update: 2017-10-14 15:00 GMT

ಮಂಗಳೂರು, ಅ. 14: ಅಗ್ರಿಗೋಲ್ಡ್ ಫಾರಂ ಎಸ್ಟೇಟ್ ಇಂಡಿಯಾ ಪ್ರೈ.ಲಿ. ಎಂಬ ಸಂಸ್ಥೆಗೆ ಹಣ ಪಾವತಿಸಿ ಅನ್ಯಾಯಕ್ಕೆ ಒಳಗಾಗಿರುವ ಗ್ರಾಹಕರಿಗೆ ಮತ್ತು ಪಾವತಿದಾರರಿಗೆ ಹಣ ಪಾವತಿಸಿದ ಬಗ್ಗೆ ದಾಖಲೆಗಳನ್ನು ಸಲ್ಲಿಸಿರುವ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಿ ವಾಟ್ಸ್‌ಆ್ಯಪ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶವು ಸುಳ್ಳಾಗಿದೆ ಎಂದು ಜಿಲ್ಲಾಧಿಕಾರಿಯವರ ಪ್ರಕಟನೆ ತಿಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶವನ್ನು ಆಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ಅನೇಕ ದೂರವಾಣಿ ಕರೆಗಳು ಬರುತ್ತಿವೆ. ಅಗ್ರಿಗೋಲ್ಡ್‌ಗೆ ಸಂಬಂಧಪಟ್ಟಂತೆ ಹಣ ಪಾವತಿಸಿದ ಕುರಿತು ಜಿಲ್ಲಾಧಿಕಾರಿ ಕಚೇರಿಗೆ ದಾಖಲೆಗಳನ್ನು ಸಲ್ಲಿಸಲು ಯಾವುದೇ ಸೂಚನೆಯನ್ನು ನೀಡಿರುವುದಿಲ್ಲ. ಆದ್ದರಿಂದ ವಾಟ್ಸ್‌ಆ್ಯಪ್‌ನಲ್ಲಿ ತಪ್ಪು ಮಾಹಿತಿಯನ್ನು ಪ್ರಸಾರ ಮಾಡಿ ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಈಗಾಗಲೇ ಮಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಸದ್ರಿ ಮಾಹಿತಿಯು ಸುಳ್ಳಾಗಿದ್ದು, ಸಾರ್ವಜನಿಕರು ಈ ಬಗ್ಗೆ ಗೊಂದಲಕ್ಕೀಡಾಗಬಾರದು ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವ ಸದ್ರಿ ಮಾಹಿತಿಯನ್ನು ಪರಿಗಣಿಸಬಾರದು ಎಂದು ಜಿಲ್ಲಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News