ಬಂಟ್ವಾಳ: ಮಾದಕ ದ್ರವ್ಯ ಸೇವನೆ, ದುಷ್ಪರಿಣಾಮದ ಅರಿವು ಕಾರ್ಯಾಗಾರ

Update: 2017-10-14 15:07 GMT

ಬಂಟ್ವಾಳ, ಅ.14: ಡ್ರಾಪ್‌ಔಟ್ ವಿದ್ಯಾರ್ಥಿಗಳು ಹಾಗೂ ಅನಕ್ಷರಸ್ಥರಿಂದಲೇ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಇಂತಹವರ ಮೆಲೆ ನಿಗಾ ಇಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ರೆಡ್ಡಿ ಜಿಲ್ಲೆಯ ವಿವಿಧ ಕಾಲೇಜುಗಳ ಮುಖ್ಯಸ್ಥರು ಹಾಗೂ ಪ್ರಾಂಶುಪಾಲ ರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಅವರು ಶನಿವಾರ ದ.ಕ.ಜಿಲ್ಲಾ ಪೊಲೀಸ್ ವತಿಯಿಂದ ಬಿ.ಸಿ.ರೋಡ್‌ನ ರೋಟರಿ ಕ್ಲಬ್ ಸಭಾಂಗಣದಲ್ಲಿ ಕಾಲೇಜು ಮುಸ್ಥರಿಗಾಗಿ ನಡೆದ ಮಾದಕ ದ್ರವ್ಯ ಸೇವನೆ ಮತ್ತು ದುಷ್ಪರಿಣಾಮದ ಅರಿವು ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.

ಇತೀಚಿನ ದಿನಗಳಲ್ಲಿ ನಡೆದಂತಹ ಹತ್ಯೆ ಪ್ರಕರಣ ಹಾಗೂ ಮಾದಕ ದ್ರವ್ಯ ಮಾರಾಟ ಜಾಲಗಳಲ್ಲಿ ಬಂಧಿತರಾಗಿರುವ ಆರೋಪಿಗಳ ಪೈಕಿ ಹಲವರು ಶಾಲಾ-ಕಾಲೇಜಿನಿಂದ ಹೊರಉಳಿದ ವಿದ್ಯಾರ್ಥಿಗಳಾಗಿದ್ದಾರೆ. ಇಂತಹ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರು ಹಾಗೂ ಪ್ರಾಧ್ಯಾಪಕರಿಗೆ ಮಾಹಿತಿಯಿದ್ದು, ಅವರ ಮೇಲೆ ನಿಗಾ ಇಟ್ಟಾಗ ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯ ಎಂದರು.

ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸುವುದು ನಮ್ಮ ಉದ್ದೇಶವಲ್ಲ. ಬದಲಾಗಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉತ್ತಮವಾಗಿರಬೇಕು ಎಂಬ ಕಾಳಜಿ ಯಿಂದ ಇಂತಹ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದ್ದೇವೆ ಎಂದರು.

ಪೊಲೀಸರ ಶಾಮೀಲಾತಿ ಇಲ್ಲ
ಮಾದಕ ದ್ರವ್ಯ ಮಾರಾಟ ಜಾಲದೊಂದಿಗೆ ಕೆಲ ಪೊಲೀಸರು ಶಾಮೀಲಾಗಿದ್ದಾರೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ ಸುಧೀರ್ ರೆಡ್ಡಿ, ಜಿಲ್ಲೆಯ ಯಾವುದೇ ಪೊಲೀಸರು ಮಾದಕ ದ್ರವ್ಯ ಜಾಲದೊಂದಿಗೆ ಕೈಜೋಡಿಸಿಲ್ಲ ಸ್ಪಷ್ಟಪಡಿಸಿದ ಅವರು, ಅಲ್ಪ ಹಣಕ್ಕಾಗಿ ಪೊಲೀಸರು ಇಂತಹ ಕಾರ್ಯಕ್ಕೆ ಸಹಕಾರ ನೀಡುವುದಿಲ್ಲ. ಅಲ್ಲದೆ ಪೊಲೀಸರು ಮಾದಕ ವ್ಯಸನಿಗಳಲ್ಲ ಎಂದರು.

ತಮ್ಮ ತಮ್ಮ ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸುವಾಗ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಮಾದಕ ದ್ರವ್ಯ ಮಾರಾಟ ಜಾಲದ ಬಗ್ಗೆ ಸಭೆಯಲ್ಲಿ ಸಾಕಷ್ಟು ದೂರುಗಳು ಕೇಳಿ ಬಂದವು. ಕಲ್ಲಡ್ಕದ ಕೆಳಗಿನಪೇಟೆಯಲ್ಲಿ ಸಂಜೆ ಹೊತ್ತಿಗೆ ಯುವಕರ ಗುಂಪೊಂದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಸಜೀಪಮೂಡ ಗ್ರಾಮದ ಕಾರಾಜೆ ರಸ್ತೆ ಬಳಿ, ಸುಳ್ಯ ತಾಲೂಕಿನ ಕುರುಂಜಿ ಬಾಗ್ ಅಂಗಡಿಯೊದರಲ್ಲಿ, ಮೊಡಂತ್ಯಾರ್‌ನ ಗೂಡಂಗಡಿಗಳಲ್ಲಿ, ಮೊಡಂಕಾಪು ಚರ್ಚ್ ವಠಾರದಲ್ಲಿ ಮಾದಕ ದ್ರವ್ಯ ಮಾರಾಟದ ಬಗ್ಗೆ ದೂರುಗಳು ಸಾರ್ವಜನಿಕ ವಲಯಗಳಿಂದ ಕೇಳಿ ಬರುತ್ತಿದ್ದು ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಆಗ್ರಹ ಕೇಳಿಬಂತು.

ಬಂಟ್ವಾಳ, ಬೆಳ್ತಂಗಡಿಗೆ ಪೊಲೀಸ್ ಉಪನಿರೀಕ್ಷಿಕ ಉಮೆಶ್ ಹಾಗೂ ಪುತ್ತೂರು-ಸುಳ್ಯಕ್ಕೆ ತಾರಾನಾಥ್ ಅವರನ್ನು ಮಾದಕ ದ್ರವ್ಯ ಮಾರಾಟ ನಿಯಂತ್ರಣದ ಬಗ್ಗೆ ಜವಬ್ದಾರಿ ವಹಿಸಲಾಗಿದ್ದು, ತಮ್ಮ ದೂರುಗಳನ್ನು ಅವರಲ್ಲಿ ನೀಡಬಹುದು. ಈ ಬಗ್ಗೆ ಪೊಲೀಸರು ಎರಡು ದಿನದೊಳಗಾಗಿ ಸ್ಪಂದಿಸದಿದ್ದರೆ ನೇರ ನನಗೆ ದೂರವಾಣಿ ಕರೆಮಾಡುವಂತೆ ತಿಳಿಸಿದ ಎಸ್ಪಿ, ಕಾಲೇಜು ವಠಾರದಲ್ಲಿ ಮಾದಕ ದ್ರವ್ಯ ಮಾರಾಟಜಾಲ ಕಂಡು ಬಂದಲ್ಲಿ ಅಲ್ಲೀಯೇ ಪೊಲೀಸ್ ಹೊರಠಾಣೆ ತೆರೆಯಲು ಸಿದ್ಧರಿದ್ದೇವೆ ಎಂದರು.

ದೂರು ಪೆಟ್ಟಿಗೆ ಅಳವಡಿಕೆ
ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ತಮ್ಮ ದೂರುಗಳನ್ನು ಲಿಖಿತವಾಗಿ ನೀಡಲು ಅಥವಾ ಮಾದಕ ದ್ರವ್ಯ ಮಾರಾಟ ಜಾಲದ ಬಗ್ಗೆ ಮಾಹಿತಿಗಳಿದ್ದಲ್ಲಿ ಪೊಲೀಸರಿಗೆ ತಿಳಿಸಲು ದೂರು ಪೆಟ್ಟಿಗೆಗಳನ್ನು ಅಳವಡಿಸುವುದಾಗಿ ಎಸ್ಪಿ ತಿಳಿಸಿದರು.

ಅ. 25ರೊಳಗಾಗಿ ವಿದ್ಯಾರ್ಥಿಗಳು ತಮ್ಮ ದೂರುಗಳನ್ನು ದೂರುಪೆಟ್ಟಿಗೆಯಲ್ಲಿ ಹಾಕಬಹುದು ಎಂದರು. ಪ್ರತಿ ಮೂರು ತಿಂಗಳಿಗೊಮ್ಮೆ ಇಂತಹ ಕಾರ್ಯಾಗಾರಗಳನ್ನು ನಡೆಸಬೇಕು. ಆಗ ಮಾತ್ರ ಇದು ಪರಿಣಾಮಕಾರಿಯಾಗಲಿದೆ ಎನ್ನುವ ಸಲಹೆ ಸಭೆಯಲ್ಲಿ ಕೇಳಿಬಂತು.
ಕಾರ್ಯಾಗಾರದಲ್ಲಿ ಎಎಸ್ಪಿ ಡಾ.ಅರುಣ್, ಸಿಐ ತಾರಾನಾಥ್, ಎಸ್ಸೈಗಳಾದ ಉಮೇಶ್ ಹಾಗೂ ಯಲ್ಲಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News