ಉಡುಪಿ: ಪ್ರಪ್ರಥಮ ಸಾವಯವ ಸಂತೆಗೆ ಜನರ ಲಗ್ಗೆ; ಎರಡು ಟನ್ ತರಕಾರಿ ಎರಡು ಗಂಟೆಯಲ್ಲಿ ಮಾರಾಟ

Update: 2017-10-15 18:01 GMT

ಉಡುಪಿ, ಅ.15: ದೊಡ್ಡಣಗುಡ್ಡೆಯ ಶಿವಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿರುವ ರೈತ ಸೇವಾ ಕೇಂದ್ರದಲ್ಲಿ ಇಂದು ಪ್ರಾರಂಭಗೊಂಡ ಜಿಲ್ಲೆಯ ಪ್ರಪ್ರಥಮ ಸಾವಯವ ಸಂತೆ ಜನರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ. ಜಿಲ್ಲೆಯ ನಾನಾ ಭಾಗಗಳಿಂದ ಸಾವಯವ ರೈತರು ಬೆಳೆದು ತಂದ ಎರಡು ಟನ್ ತರಕಾರಿ ಕೇವಲ ಎರಡು ಗಂಟೆಗಳಲ್ಲಿ ಖರ್ಚಾಗಿ ಹೋಗಿದೆ.

ಬೆಳಗ್ಗೆ 8:30ಕ್ಕೆ ಸಂತೆ ಪ್ರಾರಂಭಗೊಳ್ಳುತಿದ್ದಂತೆ ಅರ್ಧಗಂಟೆಯೊಳಗೆ ಹೆಚ್ಚಿನ ತರಕಾರಿ ಮಾರಾಟವಾದವು. ಹತ್ತು ಗಂಟೆ ಸುಮಾರಿಗೆ ಟೊಮೆಟೊ,ಮೆಣಸಿನ ಕಾಯಿ, ದೊಣ್ಣೆ ಮೆಣಸು ಸೇರಿದಂತೆ ಕೆಲವೇ ಕೆಲವು ತರಕಾರಿಗಳು ಉಳಿದಿದ್ದವು.

ಕುಂದಾಪುರ ತಾಲೂಕಿನ ಕೆಂಚನೂರು, ಜಪ್ತಿ, ಕೊಕ್ಕರ್ಣೆ, ಕುಕ್ಕೆಹಳ್ಳಿ, ಕಾರ್ಕಳ, ಚಿಕ್ಕಮಗಳೂರು ಕಡೆಯ ಸಾವಯವ ರೈತರು ಇಂದಿನ ಸಂತೆಯಲ್ಲಿ ತಾವು ಬೆಳೆದ ತರಕಾರಿಗಳೊಂದಿಗೆ ಭಾಗವಹಿಸಿ, ತಂದ ಎಲ್ಲಾ ತರಕಾರಿ ಖಾಲಿಯಾದ ಖುಷಿಯಲ್ಲಿ ಊರಿಗೆ ಮರಳಿದರು.

 ಜನರಿಂದ ಇಂಥ ಪ್ರತಿಕ್ರಿಯೆ ಸಿಗಬಹುದೆಂಬ ನಿರೀಕ್ಷೆ ಇಲ್ಲದ ಕಾರಣ, ನಾನು ಬೆಳೆದ ಎಲ್ಲಾ ತರಕಾರಿಯನ್ನು ತಂದೇ ಇರಲಿಲ್ಲ. ಕೊಯ್ದು ಗೋಣಿ ಚೀಲದಲ್ಲಿ ತುಂಬಿಸಿಟ್ಟ ಬದನೆಕಾಯಿಯನ್ನು ತಂದೇ ಇಲ್ಲ. ಇನ್ನು ಸೌತೆ, ಹಿರೇಕಾಯಿ, ಕುಂಬಳಕಾಯಿ, ಬೆಂಡೆ ಇವೆಲ್ಲವನ್ನು ಸ್ವಲ್ಪ ಮಾತ್ರ ತಂದಿದ್ದೇನೆ. ಬಂದ ಅರ್ಧಗಂಟೆಯಲ್ಲೇ ಎಲ್ಲಾ ಖಾಲಿ ಎಂದು ಕೆಂಚನೂರಿನ ಸಾವಯವ ಕೃಷಿಕ ಚಂದ್ರಶೇಖರ ಉಡುಪ ನುಡಿದರು.

ಇಂದು ಸಂತೆ ವ್ಯವಸ್ಥಿತವಾಗಿ ನಡೆಯಲಿಲ್ಲ. ಪ್ರಾಯಶ: ಯಾರಿಗೂ ಇದರ ಯಶಸ್ಸಿನ ಕುರಿತು ಸರಿಯಾದ ಅಂದಾಜಿರಲಿಲ್ಲ ಎನ್ನಬಹುದು. ತಿಂಗಳೊಳಗೆ ಎಲ್ಲವೂ ಸುವ್ಯಸ್ಥಿತವಾಗಿ ನಡೆಯಲು ಸಾಧ್ಯವಾದರೆ ಖಂಡಿತವಾಗಿ ಇದು ಜನಪ್ರಿಯಗೊಳ್ಳುತ್ತದೆ. ಇದರಿಂದ ಗ್ರಾಹಕರಿಗೂ, ರೈತರಿಗೂ ಇಬ್ಬರಿಗೂ ಲಾಭವಿದೆ ಎಂದು ಜಪ್ತಿಯಲ್ಲಿ ಸಾವಯವ ರೈತ ಸಂಘ ಕಟ್ಟಿರುವ ಭಾಕಿಸಂನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ನುಡಿದರು.
ಆದರೆ ಸಂತೆಯಲ್ಲಿ ಕೇವಲ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಬೇಕು. ನೊಂದಾಯಿತ ಸಾವಯವ ರೈತರಿಗೆ ಮಾತ್ರ ಇಲ್ಲಿ ಮಾರಾಟಕ್ಕೆ ಅವಕಾಶ ನೀಡಬೇಕು. ಮಾರಾಟವಾಗುವ ತರಕಾರಿ, ಹಣ್ಣು ಹಂಪಲುಗಳ ಮೇಲೆ ಕಣ್ಣಿಟ್ಟಿರಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಸಾವಯವ ಸಂತೆಯಲ್ಲಿ ಕೇವಲ ನೊಂದಾಯಿತ ಸಾವಯವ ರೈತರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಉಳಿದ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಾಂತೀಯ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ದೇವದಾಸ ಹೆಬ್ಬಾರ್ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಆರು ಸಾವಯವ ರೈತರ ಸಂಘಗಳಿದ್ದು, ಇವುಗಳಲ್ಲಿ ಒಟ್ಟು 300 ಕುಟುಂಬಗಳು ಹೆಸರು ನೊಂದಾಯಿಸಿಕೊಂಡಿವೆ ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News