ಆರು ಎಕರೆ ಪ್ರದೇಶದಲ್ಲಿ ತುಳಸಿ ವನ ನಿರ್ಮಾಣಕ್ಕೆ ಚಾಲನೆ

Update: 2017-10-15 18:17 GMT

ಉಡುಪಿ, ಅ.15: ಭಾವಿ ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾ ಧೀಶ ತೀರ್ಥ ಸ್ವಾಮೀಜಿ ಸಂಕಲ್ಪಿಸಿರುವ ತಮ್ಮ ಎರಡು ವರ್ಷಗಳ ಪರ್ಯಾಯ ಅವಧಿಯಲ್ಲಿ ಕೃಷ್ಣನಿಗೆ ಶ್ರೀವಿಷ್ಣು ಸಹಸ್ರನಾಮಾವಳಿ ಪೂರ್ವಕ ಲಕ್ಷ ತುಳಸಿ ಅರ್ಚನೆಗೆ ನಿರಂತರ ತುಳಸಿ ದಳಗಳ ಪೂರೈಕೆಗಾಗಿ ಉಡುಪಿ ಪೆರಂಪಳ್ಳಿಯ ಆರು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುವ ‘ತುಳಸಿ ಧಾಮ’ ವನಕ್ಕೆ ರವಿವಾರ ಚಾಲನೆ ನೀಡಲಾಯಿತು.

ಉದ್ಯಮಿ ಮನೋಹರ್ ಶೆಟ್ಟಿ ಪೆರಂಪಳ್ಳಿಯ ಗ್ರೀನ್ ವ್ಯಾಲ್ಯೂ ಟೌನ್‌ಶಿಪ್ ಬಳಿ ನೀಡಿರುವ ಈ ಜಾಗದಲ್ಲಿ ಪರ್ಯಾಯ ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತುಳಸಿ ವನದ ಮುಹೂರ್ತವನ್ನು ನೆರವೇರಿಸಿದರು. ಕೃಷ್ಣನ ಪೂಜೆಗೆ ತುಳಸಿ ಅತಿ ಅಗತ್ಯ. ತುಳಸಿ ಇಲ್ಲದ ಪೂಜೆ ಶ್ರೀಕೃಷ್ಣಗೆ ಸ್ವೀಕಾರಾರ್ಹವಲ್ಲ. ತುಳಸಿ ಅಂದರೆ ಶ್ರೀಕೃಷ್ಣನಿಗೆ ಬಹಳ ಪ್ರಿಯ ಎಂದು ಅವರು ನುಡಿದರು.

ಉದ್ಯಮಿ ಮನೋಹರ್ ಶೆಟ್ಟಿ ಮಾತನಾಡಿ, ನನ್ನ 10 ಎಕರೆ ಜಾಗದಲ್ಲಿ ಆರು ಎಕರೆಯನ್ನು ತುಳಸಿ ವನ ನಿರ್ಮಾಣಕ್ಕಾಗಿ ನೀಡುತ್ತಿದ್ದೇನೆ. ಇದರಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲ. ಇದರ ಜೊತೆ ಇಲ್ಲಿ ಗೋಶಾಲೆಯನ್ನು ನಿರ್ಮಿಸಿ ದೇಶಿ ತಳಿಯ ಗೋವುಗಳನ್ನು ಸಾಕಲಾಗುವುದು ಎಂದು ತಿಳಿಸಿದರು.

‘ಈ ಆರು ಎಕರೆ ಪ್ರದೇಶದಲ್ಲಿ ಸುಮಾರು 15 ಲಕ್ಷ ತುಳಸಿ ಸಸಿಗಳನ್ನು ನೆಡಲಾಗುವುದು. ಪರ್ಯಾಯ ದಿನ ಜ.18ರಿಂದ ಪ್ರತಿದಿನ ಎರಡು ವರ್ಷಗಳ ಕಾಲ ಈ ವನದಿಂದ ಒಂದು ಲಕ್ಷ ತುಳಸಿ ದಳಗಳನ್ನು ತೆಗೆದು ಶ್ರೀಕೃಷ್ಣನಿಗೆ ಸಮರ್ಪಿಸಲಾಗುವುದು. ಎರಡು ವರ್ಷ ಈ ವನದ ಜವಾಬ್ದಾರಿ ಹಾಗೂ ನಿರ್ವಹಣೆಯನ್ನು ರಾಘವೇಂದ್ರ ಭಟ್ ಮಾಡಲಿದ್ದಾರೆ. ಪ್ರತಿದಿನ ತುಳಸಿ ದಳ ಕೀಳಲು 15 ಮಂದಿ ಕೆಲಸಗಾರರು ಬೇಕಾಗಿದ್ದು, ಅದಕ್ಕೆ ಭಾರತ ಸ್ಕೌಟ್ ಆ್ಯಂಡ್ ಗೈಡ್ಸ್‌ನ ಮಕ್ಕಳು ಸಹಕಾರ ನೀಡಲಿರುವರು’ ಎಂದು ಪಲಿಮಾರು ಮಠದ ಮ್ಯಾನೇಜರ್ ಬಲರಾಮ ಭಟ್ ತಿಳಿಸಿದರು.

ಇದರ ಜೊತೆಗೆ ತುಳಸೀ ಬ್ಯಾಂಕ್‌ನ್ನು ಸ್ಥಾಪಿಸಿ ಪ್ರತಿನಿತ್ಯ ಭಕ್ತರು ತಂದು ಕೊಡುವ ತುಳಸಿಯನ್ನು ಸಂಗ್ರಹಿಸುವುದರ ಜೊತೆಗೆ ಆ ತುಳಸೀ ಚಿಗುರುಗಳ ಲೆಕ್ಕವನ್ನು ದಾಖಲಿಸಿ ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ಕೋಟಿ ಸಂಖ್ಯೆ ಮೀರಿ ತುಳಸಿಯನ್ನು ತಂದುಕೊಟ್ಟ ಭಕ್ತರಿಗೆ ವಿಶೇಷವಾಗಿ ಕೃಷ್ಣ ಪ್ರಸಾದ ವನ್ನು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸ್ಕೌಟ್ ಆ್ಯಂಡ್ ಗೈಡ್ಸ್‌ನ ಶಾಂತಾ ವಿ.ಆಚಾರ್ಯ, ದಿಯಾ ಸಿಸ್ಟಂನ ಸಿಇಓ ಡಾ.ರವಿಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು. ವಂಶಿಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News