ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಸೆರೆ

Update: 2017-10-16 15:24 GMT

ಮಂಗಳೂರು, ಅ. 16: ದನದ ಮಾಂಸ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರೆಂಬ ಆರೋಪದ ಮೇಲೆ ಬಂಧಿತರಾಗಿ ಜಾಮೀನು ಮೇಲೆ ಬಿಡುಗಡೆಗೊಂಡು, ಬಳಿಕ ಕೋರ್ಟ್‌ಗೆ ಹಾಜರಾಗದೆ ತಲೆಮೆರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕುಂಬಳೆ ಸಿರಿಯಾ ನಿವಾಸಿ ಅಬ್ದುಲ್ ಕುಂಞಿ(40) ಮತ್ತು ಮೂಡುಶೆಡ್ಡೆ ನಿವಾಸಿ ಅನ್ವರ್ (35) ಎಂದು ಗುರುತಿಸಲಾಗಿದೆ.

ಆರೋಪಿಗಳು 2012ರಲ್ಲಿ ನೀರುಮಾರ್ಗ ಮಾಣೂರು ಎಂಬಲ್ಲಿ ನಂಬರ್ ಪ್ಲೇಟ್ ಇಲ್ಲದ ಟೆಂಪೋದಲ್ಲಿ ದನದ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ವಾಹನ ಅಡ್ಡಗಟ್ಟಿ ಆರೋಪಿಗಳನ್ನು ಬಂಧಿಸಿದ್ದರು. ಆದರೆ ಬಳಿಕ ಕೋರ್ಟ್‌ನಿಂದ ಜಾಮೀನು ಪಡೆದ ಆರೋಪಿಗಳು ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಕೋರ್ಟ್ ಇವರ ಬಂಧನಕ್ಕೆ ವಾರಂಟ್ ಹೊರಡಿಸಿತ್ತು.

ಕಾರ್ಯಪ್ರವೃತ್ತರಾದ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳನ್ನು ಕುಂಬಳೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ಯಲ್ಲಿ ಎಎಸ್‌ಐ ಚಂದ್ರಶೇಖರ್, ಎಎಸ್‌ಐ ಶ್ರೀಧರ್, ಕಾನ್‌ಸ್ಟೇಬಲ್ ಕುಶಲ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News