ಬಂಟ್ವಾಳದ ಮತ್ತೊಂದು ಟ್ರೀ ಪಾರ್ಕ್ ಉದ್ಘಾಟನೆಗೆ ಸಜ್ಜು: ಅ. 22ರಂದು ಮುಖ್ಯಮಂತ್ರಿಯವರಿಂದ ಲೋಕಾರ್ಪಣೆ

Update: 2017-10-17 11:54 GMT

ಬಂಟ್ವಾಳ, ಅ. 17: ಬಿ.ಸಿ.ರೋಡ್ ಇಲ್ಲಿನ ಹೃದಯ ಭಾಗದ ಮುಖ್ಯ ವೃತ್ತದ ಬಳಿ ಕೆಲ ತಿಂಗಳ ಹಿಂದೆ ನಿರ್ಮಾಣಗೊಂಡಿರುವ ಟ್ರೀ ಪಾರ್ಕ್ ಆಕರ್ಷಣೀಯ ಕೇಂದ್ರವಾಗಿ ಮೂಡಿ ಬಂದಿದೆ. ಇದೀಗ ಬಂಟ್ವಾಳ ನಗರವನ್ನು ಮತ್ತಷ್ಟು ಸುಂದರವಾಗಿಸುವ ನಿಟ್ಟಿನಲ್ಲಿ ಮತ್ತೊಂದು ಟ್ರೀ ಪಾರ್ಕ್ ನಿರ್ಮಾಣವಾಗಿದ್ದು, ಪಾರ್ಕ್ ಪ್ರಿಯರನ್ನು ಇತ್ತ ಸೆಳೆಯುವಂತೆ ಮಾಡಿದೆ.

"ಪಾರ್ಕ್‌ನ ಮುಂಭಾಗದಲ್ಲಿ ಹರಿಯುವ ನೇತ್ರಾವತಿ ನದಿಯ ನಿನಾದ....ಅಲ್ಲೇ ನಡುಗಡ್ಡೆಯಲ್ಲಿ ಹಲವು ಹಕ್ಕಿಗಳ ಆವಾಸತಾಣ.....ಆಸ್ವಾದಿಸುವವರಿಗೆ ತಣ್ಣನೆಯ ವಾತಾವರಣ...ಬೆಳಗ್ಗಿನ ಸೌಂದರ್ಯ ಸೇವಿಸುವವರಿಗೆ ಹಾಗೂ ಇನ್ನಿತರ ಚಟುವಟಿಕೆಗಳಿಗೆ ವಿಶ್ರಾಂತಿಧಾಮ...ಪ್ರವಾಸಿ ಬಂಗ್ಲೆ ಪಕ್ಕದಲ್ಲೇ ವಿವಿಧ ಮರಗಳ ಉದ್ಯಾನವನ...ಅಲ್ಲದೇ ಫೊಟೋಗ್ರಫಿ ಮಾಡುವವರಿಗೆ ಕ್ಯಾಮೆರಾ ಕಣ್ಣಿಗೆ ಕಾಣುವ ರಮಣೀಯ ದೃಶ್ಯವೂ ಇಲ್ಲಿ ಅಡಗಿದೆ.

ಹೌದು...ಬಂಟ್ವಾಳ ತಾಲೂಕಿನ ಐಬಿ ಕಚೇರಿಯ ಮುಂಭಾಗದಲ್ಲಿ ಈ ಟ್ರೀ ಪಾರ್ಕ್‌ನ್ನು ನಿರ್ಮಾಣ ಮಾಡಲಾಗಿದೆ. ಕಲ್ಲಡ್ಕ ಸಮೀಪ ವೀರಕಂಭದಲ್ಲಿ ಅರಣ್ಯ ಇಲಾಖೆ "ಸಿರಿಚಂದನವನ" ನಿರ್ಮಿಸಿ ಗಮನ ಸೆಳೆದಿದ್ದ ಅರಣ್ಯ ಇಲಾಖೆಯು, ಇದೀಗ ಬಂಟ್ವಾಳ ನೇತ್ರಾವತಿ ಕಿನಾರೆಯಲ್ಲೇ ಸುಮಾರು ಮೂರು ಎಕರೆ ಜಾಗದಲ್ಲಿ ಟ್ರೀಪಾರ್ಕ್ ನಿರ್ಮಿಸಿದೆ.

ಅ. 22ರಂದು ಬಂಟ್ವಾಳದ ಮಿನಿ ವಿಧಾನಸೌಧ, ಮೆಸ್ಕಾಂ ಕಚೇರಿ, ಪ್ರವಾಸಿ ಬಂಗ್ಲೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆ ಆಗಮಿಸುವ ಮುಖ್ಯಮಂತ್ರಿ ಅವರು, ಸಾರ್ವಜನಿಕರ ಉಪಯೋಗಕ್ಕೆ ಈ ಟ್ರೀಪಾರ್ಕ್‌ನ್ನು ಲೋಕಾರ್ಪಣೆಗೊಳಿಸುವರು.
ಸಾಗುವಾನಿ ಮರಗಳ ಮಧ್ಯೆ ಕಾಡಿನಂತಿದ್ದ ಪರಿಸರವನ್ನೆಲ್ಲ ಸಮತಟ್ಟುಗೊಳಿಸಿ ಮರಗಳ ಉದ್ಯಾನವನವನ್ನು ನಿರ್ಮಿಸಲಾಗಿದೆ. ನೇತ್ರಾವತಿ ನದಿ ಕಿನಾರೆಯಲ್ಲಿ ಈ ಟ್ರೀ ಪಾರ್ಕ್ ಇರುವ ಕಾರಣ ಇದನ್ನು ಪ್ರವಾಸಿ ಕೇಂದ್ರವಾಗಿಯೂ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಪಾರ್ಕ್‌ನಲ್ಲಿ ಏನೇನಿದೆ

ಟ್ರೀ ಪಾರ್ಕ್‌ನ್ನು ಇಳಿಜಾರು ರೂಪದಲ್ಲಿ ಹಂತ ಹಂತವಾಗಿ ನಿರ್ಮಿಸಲಾಗಿದೆ. ಈ ಮಧ್ಯೆ ವೃತ್ತಾಕಾರದಲ್ಲಿ ಪುಟ್ಟ ಮನೆಯೊಂದನ್ನು ನಿರ್ಮಿಸಲಾಗಿದೆ. ಅದರ ಸುತ್ತಲೂ ಬೆಂಚುಗಳನ್ನು ಅಳವಡಿಸಲಾಗಿದ್ದು, ಅಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಪಾರ್ಕ್‌ನ ಹೊರ ಮತ್ತು ಒಳಭಾಗದಲ್ಲಿ ಕಲ್ಲು ಬೆಂಚುಗಳಿವೆ. ಮಕ್ಕಳಿಗಾಗಿ ಪ್ರತ್ಯೇಕ ವ್ಯವಸ್ಥೆಯಿದ್ದು, ಆಟಕ್ಕೆ ಬೇಕಾದ ಜಾರುಬಂಡಿ,ಜೋಕಾಲಿಗಳನ್ನು ಅಳವಡಿಸಲಾಗಿದೆ.

ಇಂಟರ್ ಲಾಕ್ ಹಾಕಿದ ವಾಕ್‌ಪಾಥ್ ನಡೆಯುವವರನ್ನು ಮುದಗೊಳಿಸುತ್ತದೆ. ಅಲ್ಲದೆ ವಾಕಿಂಗ್ ಮಾಡಲೂ ವ್ಯವಸ್ಥೆ ಇದೆ. ನದಿ ಮತ್ತು ದಡದ ಮಧ್ಯೆ ಗಟ್ಟಿಯಾದ ಬೇಲಿ ಹಾಗೂ ವೀಕ್ಷಣಾ ಗ್ಯಾಲರಿಯನ್ನು ಮಾಡಲಾಗಿದೆ. ಯಾವುದೇ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ವ್ಯವಸ್ಥೆ ಕಲ್ಪಿಸಲಾಗಿದೆ.

13 ರೀತಿಯ ಔಷಧೀಯ ಸಸ್ಯೋದ್ಯಾನ

ಟ್ರೀ ಪಾರ್ಕ್‌ನಲ್ಲಿ ಸುಮಾರು 13 ರೀತಿಯ ಔಷಧೀಯ ಸಸ್ಯಗಳನ್ನು ಬೆಳಸಲಾಗುತ್ತಿದೆ. ಔಷಧೀಯ ಸಸ್ಯಗಳ ಮಹತ್ವ ಹಾಗೂ ಅವುಗಳ ಅರಿವು ಇಲ್ಲಿಗೆ ಬರುವವರಿಗೆ ಆಗಬೇಕು ಎನ್ನುವ ಉದ್ದೇಶದಿಂದ ಬೆಳಸಲಾಗುತ್ತಿದೆ.

ಈ ಮೊದಲು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸುಮಾರು. 1.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಟ್ರೀ ಪಾರ್ಕ್‌ನಲ್ಲಿ ಭಾರೀ ಜನಸಂದಣಿ ಕಂಡು ಬಂದಿದ್ದು, ಕೆಲವೇ ದಿನಗಳಲ್ಲಿ ಕಲಾಕೃತಿಗಳು ಹಾನಿಗೀಡಾಗಿದ ಆರೋಪಗಳು ಕೇಳಿಬಂದಿತ್ತು. ಜನಸಂದಣಿಯ ಕಿರಿಕಿರಿ ಅನುಭವಿಸುವರು ಸಸ್ಯೋದ್ಯಾನ ಪಾರ್ಕ್‌ನತ್ತ ಹೆಜ್ಜೆ ಹಾಕಬಹುದಾಗಿದೆ.

ಈ ಟ್ರೀ ಪಾರ್ಕ್ ಸಂಪೂರ್ಣವಾಗಿ ಸಾರ್ವಜನಿಕರ ಅನುಕೂಲಕ್ಕೆಂದೇ ನಿರ್ಮಿಸಲಾಗಿದೆ. ಈಗ ಅಂತಿಮ ಸ್ಪರ್ಶ ನೀಡಲಾಗುತ್ತಿರುವ ಕಾರಣ ಪ್ರವೇಶವಿಲ್ಲ. ಉದ್ಘಾಟನೆ ಬಳಿಕ ಇಲ್ಲಿ ಶುಲ್ಕ ವಿಧಿಸುವ ಕುರಿತು ಆಡಳಿತ ಕೈಗೊಳ್ಳುವ ತೀರ್ಮಾನದಂತೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುವುದು. ಕೇವಲ ವಿಹಾರಕ್ಕಷ್ಟೇ ಅಲ್ಲ, ಗಿಡ ಮರಗಳ ಅರಿವೂ ಉಂಟಾಗುವಂತೆ ಮಾಡುವುದು ಇದರ ಉದ್ದೇಶ.
-ಬಿ.ಸುರೇಶ್,
-ವಲಯ ಅರಣ್ಯಾಧಿಕಾರಿ

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News